Thursday, September 19, 2024

ಪ್ರಾಯೋಗಿಕ ಆವೃತ್ತಿ

ಯಾವುದನ್ನೇ ಆಗಲಿ ಧ್ಯಾನಿಸಿ ಪಡೆಯಬೇಕು-ನಿರ್ಮಲಾನಂದ ಸ್ವಾಮೀಜಿ

ಕಾವ್ಯ, ಜ್ಞಾನ, ವಿಜ್ಞಾನ ಹಾಗೂ ತರ್ಕ ಸೇರಿದಂತೆ ಯಾವುದನ್ನೇ ಆಗಲಿ, ಧ್ಯಾನಿಸಿ  ಪಡೆಯುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಆದಿಚುಂಚನಗಿರಿ ಪೀಠಾಧಿಪತಿ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ 2 ದಿನಗಳ  “ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ” ರಜತ ಮಹೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಲ್ಪವೃಕ್ಷದ ಫಲವನ್ನು ಪಡೆಯುವವರು ಮರದ ಕೆಳಗಿರಬೇಕು, ಹಾಗೆಯೇ ಗುರು ಕರುಣೆ ಸಿದ್ಧಿಸಬೇಕಾದರೂ ಪ್ರಣಿಪಾತ ಸೇವೆಯಿಂದ ಸಾಧ್ಯ. 2014ರಲ್ಲಿ ಜಗದ್ಗುರು ಶ್ರೀಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರು ಆರಂಭಿಸಿದ ಚುಂಚಾದ್ರಿ ಕಲೋತ್ಸವವೆಂಬ ಮಕ್ಕಳ ಕಲರವ 25 ವರ್ಷಗಳು ಸಂಪನ್ನಗೊಂಡು ಸಂಭ್ರಮದ ಬೆಳ್ಳಿ ಹಬ್ಬವಾದ ಹಿರಿಮೆಗೆ ಶ್ರೀಗಳು ಹಾಕಿಕೊಟ್ಟ ಭದ್ರ ಬುನಾದಿ ಕಾರಣ ಎಂದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್ ಮಾತನಾಡಿ, ಸಂಗೀತ ನೃತ್ಯಗಳು ಆದಿ ಮಾನವರ ಕಾಲದಿಂದಲೂ ಹಾಗೂ ಪ್ರಾಣಿ, ಪಕ್ಷಿ ಸಂಕುಲದಲ್ಲಿಯೂ ಇದೆ, ಆದರೆ ಮಾನವ ಅದಕ್ಕೆ ಲಲಿತಕಲೆಯನ್ನಾಗಿ ವೈಜ್ಞಾನಿಕ ಸ್ಪರ್ಶವನ್ನು ನೀಡಿದ್ದಾನೆ ಎಂದು ಬಣ್ಣಿಸಿದರು.

ಐಎಎಸ್ ನಲ್ಲಿ ದೇಶಕ್ಕೇ ಪ್ರಥಮ ರಾಂಕ್ ಗಳಿಸಿ ಬಳ್ಳಾರಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ.ನಂದಿನಿ ಮಾತನಾಡಿ, ಅವಕಾಶಗಳು ಹಲವು ರೀತಿಯಲ್ಲಿ ಬರುತ್ತವೆ, ಆದರೆ ಸಮರ್ಪಕವಾಗಿ ಬಳಸಿಕೊಂಡು ಶ್ರದ್ಧೆಯಿಂದ  ಶ್ರಮ ವಹಿಸಿದರೆ ಮಾತ್ರ ಶ್ರೇಷ್ಠ ಗುರಿ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಪ್ರೇರೇಪಣಾ ನುಡಿಗಳನ್ನಾಡಿದರು.

ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ ರೂಪಿಕಾ ಮಾತನಾಡಿ ಮನುಷ್ಯನ ಬದುಕಿಗೆ ಕಲೆ ಎಂಬುದು ಬಹಳ ಮುಖ್ಯ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಿಮಗೆ ಪಠ್ಯದ ಜೊತೆಗೆ ಪಠ್ಯೇತರವಿಭಾಗದಲ್ಲೂ ಮಾರ್ಗದರ್ಶನ ನೀಡಿ ಬೆಳೆಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ನಾಗಮಂಗಲ ತಹಸಿಲ್ದಾರ್ ಎನ್.ಎಲ್.ನಂದೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಟ್ರಸ್ಟ್ ನ ಆಡಳಿತ ಅಧಿಕಾರಿ ಡಾ.ಎಂ.ಟಿ.ಶಿವರಾಮು, ಮುಖ್ಯೋಪಾಧ್ಯಾಯ ಎಂ ಎನ್ ಮಂಜುನಾಥ್ ಗಣ್ಯರು ಹಾಜರಿದ್ದರು. ಎರಡು ದಿನ ನಡೆಯುವ ಈ ಕಲೋತ್ಸವದಲ್ಲಿ 2600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 30 ಮಂದಿ ತೀರ್ಪುಗಾರರು ಭಾಗವಹಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!