Friday, June 21, 2024

ಪ್ರಾಯೋಗಿಕ ಆವೃತ್ತಿ

ಮೋದಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮಹಾದ್ರೋಹ | ಪಾಠ ಕಲಿಸುವುದೇ ಕರ್ನಾಟಕ?

ಶಿವಸುಂದರ್

ತಮ್ಮ ಸರ್ಕಾರ ಸಹಕಾರಿ ಒಕ್ಕೂಟ ತತ್ವದ (co-operative federalism) ಆಧಾರದಲ್ಲಿ ಸರ್ಕಾರ ನಡೆಸುವುದಾಗಿ ಕೊಚ್ಚಿಕೊಂಡಿದ್ದ ಮೋದಿ ಸರ್ಕಾರ ಭಾರತ ಕಂಡ ಅತ್ಯಂತ ಸರ್ವಾಧಿಕಾರಿ ಮತ್ತು ಏಕಾಧಿಪತ್ಯದ ಧೋರಣೆಯ ಸರ್ಕಾರ ಎಂಬುದು ಬಹಳಬೇಗನೇ ಸಾಬೀತಾಗಿದೆ. ಅದರಲ್ಲೂ 2019 ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಸವಾರಿನಡೆಸುತ್ತಿದೆ. ರಾಜ್ಯಗಳಿಗೆ ಸಂವಿಧಾನಬದ್ಧವಾಗಿ ವರ್ಗಾಯಿಸಬೇಕಾದ ಸಂಪನ್ಮೂಲಗಳನ್ನು ವರ್ಗಾಯಿಸದೆ ಹಗಲು ದರೋಡೆ ಮಾಡುತ್ತಿದೆ.

ಇದರಲ್ಲಿ ಅತಿ ಹೆಚ್ಚು ವಂಚನೆ ಮತ್ತು ದರೋಡೆಗಳಿಗೆ ಗುರಿಯಾಗಿರುವುದು ಕರ್ನಾಟಕ.

ಬರಪರಿಹಾರ – ಸುಪ್ರೀಂ ಮಂದೆಯೂ ಸುಳ್ಳು ಹೇಳಿದ ಮೋದಿ ಸರ್ಕಾರ

ಎಲ್ಲಿಯತನಕ ಅಂದರೆ ತೀವ್ರ ಬರಗಾಲಕ್ಕೆ ಸಿಲುಕಿರುವ ಕರ್ನಾಟಕಕ್ಕೆ ಸಂವಿಧಾನ ಬದ್ಧವಾಗಿ ರಾಷ್ರೀಯ ವಿಪತ್ತು ಪರಿಹಾರ ನಿಧಿ (NDRF) ನಿಂದ ಸಿಗಬೇಕಾದ ಅರೆಕಾಸಿನ ಪರಿಹಾರವನ್ನು ಕೊಡದೆ ಸತಾಯಿಸುತ್ತಿರುವ ಕೇಂದ್ರದ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇತಿಹಾಸದಲ್ಲೇ ಮೊದಲ ಬಾರಿ ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕಾಗಿ ಬಂತು.

ಕರ್ನಾಟಕಕ್ಕೆ ಮುಂಚೆ ತಮಿಳುನಾಡಿನ ಡಿಎಂಕೆ ಸರ್ಕಾರ ಕೂಡ ನೈಸರ್ಗಿಕ ಪ್ರಕೋಪ ಪರಿಹಾರವನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿಲ್ಲವೆಂದು ಸುಪ್ರೀಂ ಮೆಟ್ಟಿಲೇರಿತ್ತು. ಹಾಗೆಯೇ ಕೇರಳ ಸರ್ಕಾರ ಕೂಡ ಕೂಡಾ ಸಂವಿಧಾನ ಕೊಟ್ಟಿರುವ ಅಧಿಕಾರವನ್ನು ಬಳಸಿ ರಾಜ್ಯದ ಪರಿಮಿತಿಯೊಳಗೆ ಸಾಲ ಸಂಪನ್ಮೂಲಗಳನ್ನು ಕ್ರೂಢೀಕರಿಸಲು ಮೋದಿ ಸರ್ಕಾರ ಅಡ್ಡಿ ಮಾಡತ್ತಿರುವ ಬಗ್ಗೆ ಸುಪ್ರೀಂ ಗೆ ಅಹವಾಲು ಮಾಡಿದೆ. ಕೇರಳದ ವಿಚಾರಣೆಯ ವೇಳೆ ಮೋದಿ ಸರ್ಕಾರ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಮಾಡುತ್ತಿರುವ ತಾರತಮ್ಯ ಹಾಗೂ ದಮನ ಧೋರಣೆ ಸಾಬೀತಾಗಿದ್ದು ಮೋದಿ ಸರ್ಕಾರ ಕೂಡಲೆ ಕ್ರಮ ತೆಗೆದುಕೊಳ್ಳಲು ಒಪ್ಪಿಕೊಳ್ಳಬೇಕಾಯಿತು.

ಕರ್ನಾಟಕದ ಪ್ರಕರಣ ಮೊನ್ನೆ ವಿಚಾರಣೆಗೆ ಬಂದಿದ್ದು ಎರಡ ವಾರಗಳಲ್ಲಿ ಕೇಂದ್ರವು ಅದಕ್ಕೆ ಉತ್ತರಿಸುವುದಾಗಿ ಸಮಯ ಪಡೆದುಕೊಂಡಿದೆ. ಆದರೆ ಸುಪ್ರೀಂ ನಿಂದ ಸಮಯ ಕೇಳುವಾಗಲೂ ಮೋದಿ ಸರ್ಕಾರ ಬರಪರಿಹಾರದ ವಿಷಯದಲ್ಲಿ ತಾನು ಮಾಡುತ್ತಿರುವ ಅನ್ಯಾಯವನ್ನು ಮುಚ್ಚಿಡುವ ಸುಳ್ಳು ಹೇಳಿದೆ.

ಕರ್ನಾಟಕ ಸರ್ಕಾರ ಸುಪ್ರೀಂಗೆ ಮೊರೆ ಬರುವುದರ ಬದಲು ಕೇಂದ್ರ ಸರ್ಕಾರವನ್ನೇ ಸಂಪರ್ಕಿಸಿದ್ದರೆ ಪರಿಹಾರ ಸಿಗುತ್ತಿತ್ತು ಎಂದು ಕೇಂದ್ರದ ಅಡ್ವೋಕೇಟ್ ಜನರಲ್ ಸುಪ್ರೀಂ ಮುಂದೆ ಮತ್ತೊಮ್ಮೆ ಸುಳ್ಳು ಹೇಳಿದೆ.

ಆದರೆ ವಾಸ್ತವವೇನು?

ಮೊನ್ನೆ ಕರ್ನಾಟಕ್ಕೆ ಕೇಂದ್ರದಿಂದ ಆಗುತ್ತಿರುವ ತೆರಿಗೆ ಅನ್ಯಾಯದ ಕುರಿತು ಜಾಗ್ರುತ ಕರ್ನಾಟಕ ಏರ್ಪಡಿಸಿದ್ದ ಚರ್ಚೆಯಲ್ಲಿ ಯುವಮಂತ್ರಿಗಳಾದ ಕೃಷ್ಣ ಭೈರೇಗೌಡರು ಜನರೆದುರು ಬಿಚ್ಚಿಟ್ಟಂತೆ, 2006ರ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮತ್ತು ಬರಪರಿಹಾರದ ನಿಯಮಗಳು ಆಯಾ ಸಾಲಿನ ಅಕ್ಟೊಬರ್ 31 ರೊಳಗೆ ರಾಜ್ಯ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳ ಬರಘೋಷಣೆ ಮಾಡಬೇಕು ಮತ್ತು ಅದಾದ 15 ದಿನಗಳೊಳಗೆ ಕೇಂದ್ರಕ್ಕೆ ಪರಿಹಾರದ ಅಹವಾಲನ್ನು ಮಾಡಬೇಕು.

ಆದರೆ ಕರ್ನಾಟಕ ಸರ್ಕಾರ ನಿಯಮಕ್ಕೆ ಒಂದು ತಿಂಗಳ ಮುಂಚಿತವಾಗಿ-2023 ರ ಸೆಪ್ಟೆಂಬರ್ ನಲ್ಲೇ -ಬರವನ್ನು ಘೋಷಿಸಿ, ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಿದೆ. ಕೇಂದ್ರದಿಂದ ಸಕ್ಷಮ ಅಧಿಕಾರಿಗಳ ತಂಡವೂ ಬಂದು ಅಧ್ಯಯನ ಮಾಡಿ ತಮ್ಮ ಶಿಫಾರಸ್ಸನ್ನು ನವಂಬರ್ನಲ್ಲೇ ನೀಡಿಯಾಗಿದೆ. 2023 ರ ನವಂಬರ್ – ಡಿಸೆಂಬರ್ ಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಪ್ರಧಾನಿ-ಗೃಹಮಂತ್ರಿಗಳನ್ನು ಭೇಟಿ ಮಾಡಿ ತ್ವರಿತವಾಗಿ ಪರಿಹಾರ ಒದಗಿಸಲು ಮನವಿಯನ್ನು ಮಾಡಿಯಾಗಿತ್ತು.

2023ರ ಡಿಸೆಂಬರ್ ನಿಂದ ಮಾರ್ಚ್ ವರೆಗೆ ತಮ್ಮ ಟೇಬಲ್ ಮೇಲಿದ್ದ ಫೈಲನ್ನು ಕಣ್ಣೆತ್ತಿಯೂ ನೋಡದ ಕಂದ್ರದ ಗೃಹಮಂತ್ರಿ ಅಮಿತ್ ಶಾ ಮತ್ತು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಈಗ ಕರ್ನಾಟಕಕ್ಕೆ ಬಂದು ರಾಜ್ಯ ಸರ್ಕಾರ ತಡವಾಗಿ ವರದಿ ಕಳಿಸಿತು, ವಿಳಂಬಕ್ಕೆ ಚುನಾವಣೆ ಘೋಷಣೆಯಾಗದ್ದು ಕಾರಣಾ ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ. ಮೊನ್ನೆ ಮೋದಿ ಸರಕಾರದ ವಕೀಲರೂ ಕೂಡಾ ಈ ಬಗ್ಗೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮೊರೆ ಬರದೆ ಚುನಾವಣೆಗೆ ಮುಂಚೆ ಸುಪ್ರೀಂ ಮೆಟ್ಟಿಲೇರಿರುವುದು ರಾಜಕೀಯ ಮಾಡಲು ಎಂಬಂತೆ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದಲೇ ಸುಪ್ರೀಮ್ ಕೇಂದ್ರಕ್ಕೆ ಈ ಬಗ್ಗೆ ಅಧಿಕೃತ ನೋಟೆಸ್ ಕೊಡಬಾರದೆಂದು ಆಗ್ರಹಿಸಿದ್ದಾರೆ. ಈ ಒತ್ತಡಕ್ಕೆ ಮಣಿದ ಸುಪ್ರೀಂ ಕೋರ್ಟು ಎರಡು ವಾರಗಳ ನಂತರ ಕೇಂದ್ರವು ಉತ್ತರಿಸಬೇಕೆಂದು ಆದೇಶಿಸಿದೆ.

ಇದು ವಿರೋಧಿ ಪಕ್ಷಗಳ ಸರ್ಕಾರವಿರುವ ರಾಜ್ಯಗಳ ಮೇಲೆ ಕೇಂದ್ರವು ದ್ವೇಷದಿಂದ ಮಾಡುತ್ತಿರುವ ತಾರತಮ್ಯ ಹಾಗೂ ಸರ್ವಾಧಿಕಾರವೇ ಹೊರತು ಮತ್ತೇನಲ್ಲ.

ಇದಲ್ಲದೆ, ಮೋದಿ ಸರ್ಕಾರ ಕರ್ನಾಟಕದ ತೆರಿಗೆ ಪಾಲನ್ನು ಹಂಚುವಲ್ಲಿಯೂ ಇನ್ನಿಲ್ಲದ ತಾರತಮ್ಯ ಮತ್ತು ವಂಚನೆ ಮಾಡುತ್ತಿದೆ.

ಇದರ ಮೂಲಗಳು ಕಾಂಗ್ರೆಸ್ ಸರ್ಕಾರದ ಅವಧಿಯ ನೀತಿಗಳಲ್ಲೇ ಬೇರುಬಿಟ್ಟುಕೊಂಡಿದ್ದರೂ ಅದು ಅತಿರೇಕಕ್ಕೆ ಹೋಗಿರುವುದು ಮೋದಿ ಕಾಲದಲ್ಲಿ ..

ಅದು GST ವಂಚನೆ , ಸೆಸ್ ದ್ರೋಹಗಳೆಂಬ ಎರಡು ರೀತಿಗಳಲ್ಲಿ ಪ್ರಧಾನವಾಗಿ ನಡೆಯುತ್ತಿದೆ.

GST ವಂಚನೆ

ಸ್ವಾತಂತ್ರ್ಯ ನಂತರದಲ್ಲಿ ಭಾರತ ಜಾರಿ ಮಾಡಿದ ಅತ್ಯಂತ ಜನವಿರೋಧಿ ಹಾಗೂ ಪ್ರತಿಗಾಮಿ ತೆರಿಗೆ ವ್ಯವಸ್ಥೆ.
-ಈ ಸರಕು ಮತ್ತ ಸೇವಾ ತರಿಗೆ- GST- ವ್ಯವಸ್ಥೆ.

ಇದು ಬಡವ ಮತ್ತು ಶ್ರೀ ಸಾಮನ್ಯರಿಂದ ಅತ್ಯಧಿಕವಾದ ತೆರಿಗೆಯನ್ನು ವಸೂಲಿ ಮಾಡುತ್ತದೆ. ಇತ್ತೀಚಿನ ಅಧ್ಯಯನಗಳು ಹೇಳುವಂತೆ ಭಾರತದ ಒಟ್ಟಾರೆ ತೆರಿಗೆ ಆದಾಯಗಳಲ್ಲಿ ಶೇ. 63 ರಷ್ಟು ಈ GST ಮೂಲದ್ದು. ಇದರಲ್ಲಿ ಭಾರತದ ಶೇ. 10 ರಷ್ಟಿರುವ ಮೇಲ್ವರ್ಗದವರ ಕಟ್ಟುವುದು ಶೇ. 3 ರಷ್ಟು ಮಾತ್ರ. ಉಳಿದ ಶೇ. 97 ರಷ್ಟು GST ಕಟ್ಟುವುದು 130 ಕೋಟಿ ಬಡ ಬಾರತೀಯರು! ಹೀಗಾಗಿ ಈ GST ವ್ಯವಸ್ಥೆಯೇ ಜನವಿರೋಧಿ.

ಆದರೆ ಮೋದಿ ಸರ್ಕಾರ ಅದಿಕಾರಕ್ಕೆ ಬಂದ ಮೇಲೆ ಅದರಲ್ಲಿ ರಾಜ್ಯಗಳ ಪಾಲು ಕಡಿತವಾಗುತ್ತಾ ಬಂದಿದೆ. ಹಾಗೆ ನೋಡಿದರೆ ದೇಶದಲ್ಲಿ ಕಾರ್ಪೊರೇಟ್ ಉದ್ಯಮಪತಿಗಳ ಪರವಾದ ಉದಾರೀಕರಣ-ಜಾಗತೀಕರಣ ನೀತಿಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷವೇ 2006 ರಲ್ಲಿ ಈ GST ವ್ಯವಸ್ಥೆಯನ್ನು ಜಾರಿ ಮಾಡುವ ಪ್ರಸ್ತಾಪ ಮಾಡಿತ್ತು.

ಆದರೆ ಅದರ ಬಳಿ ಬೇಕಿದ್ದ ಶಾಸನಬಲವಿರದಿದ್ದರಿಂದ ಆಗ GST ಜಾರಿಯಾಗಲಿಲ್ಲ.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷಗಳಿದ್ದ ರಾಜ್ಯಗಳನ್ನ ಒಪ್ಪಿಸಿ ಸಂವಿಧಾನ ತಿದ್ದುಪಡಿ ತಂದು GST ಜಾರಿ ಮಾಡುವಲ್ಲಿ ಯಶಸ್ವಿಯಾಯಿತು.

ಆದರೆ ಮೋದಿ ಸರ್ಕಾರ ಇದರಲ್ಲಿ ಎರಡು ರೀತಿಯ ವಂಚನೆ ಮಾಡುತ್ತಿದೆ. ರಾಜ್ಯಗಳಿಗೆ GST ಪೂರ್ವದ ತೆರಿಗೆ ವ್ಯವಸ್ಥೆಯಲ್ಲಿ ಎಷ್ಟು ತೆರಿಗೆ ಸಂಗ್ರಹವಾಗುತ್ತಿತ್ತೋ ಅಷ್ಟು ತೆರಿಗೆಯನ್ನು ಖಾತರಿ ಮಾಡುವುದಾಗಿ ಮೋದಿ ಸರ್ಕಾರ ಭರವಸೆ ಕೊಟ್ಟಿತ್ತು. ಅಷ್ಟು ಸಂಗ್ರಹವಾಗದಿದ್ದರೆ ಅದನ್ನು ಪರಿಹಾರ ರೂಪದಲ್ಲಿ ತುಂಬಿಕೊಡುವುದಾಗಿ ಶಾಸನಬದ್ದ ಭರವಸೆ ನೀಡುತ್ತಿತ್ತು. ಅದಕ್ಕಾಗಿ ಜನರಿಂದಲೇ ಸುಲಿಯುವ GST ಪರಿಹಾರ ಸೆಸ್ ಅನ್ನು ಹಾಕತೊಡಗಿತು.

ಆದರೆ ಮೋದಿ ಸರ್ಕಾರ ಯಾವ ವರ್ಷವೂ ಕರ್ನಾಟಕಕ್ಕೆ ಪೂರ್ತಿ ಪರಿಹಾರವನ್ನು ಕೊಟ್ಟೇ ಇಲ್ಲ. ಎರಡನೆಯದಾಗಿ ಈ ಪರಿಹಾರ ಈ ವರ್ಷದಿಂದ ಸಂಪೂರ್ಣವಾಗಿ ಬಂದ್ ಆಗಲಿದೆ. ಇದರಿಂದ ಏನಿಲ್ಲವೆಂದರೂ ಕರ್ನಾಟಕಕ್ಕೆ ವಾರ್ಷಿಕ 10-12 ಸಾವಿರ ಕೋಟಿ ನಷ್ಟ ಉಂಟಾಗಲಿದೆ.

ಸೆಸ್ ಸುಲಿಗೆ

ಸೆಸ್ ಮತ್ತು ಸರ್ ಚಾರ್ಜ್ ಗಳು ರಾಜ್ಯಗಳನ್ನು ವಂಚಿಸಲು ಕೇಂದ್ರವು ಕಂಡಕೊಂಡಿರುವ ಕಳ್ಳ ದಾರಿ.

ಕೇಂದ್ರದ ತೆರಿಗೆ ಸಂಪನ್ಮೂಲಗಳಲ್ಲಿ ಹಣಕಾಸು ಅಯೋಗ ವಿಧಿಸುವಷ್ಟು ಪ್ರಮಾಣವನ್ನು ಕೇಂದ್ರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು.

ಆದರೆ ಸೆಸ್ ಗಳು ಮತ್ತು ಸರ್ ಚಾರ್ಜ್ಗಳು ವಿಶೇಷ ಉಪ ಹಾಗೂ ಮೇಲ್ ತೆರಿಗೆಗಳಾಗಿದ್ದು ಅದನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಿಲ್ಲ.

ಇದು ಕಾಂಗ್ರೆಸ್ ಕಾಲದಲ್ಲೂ ಇದ್ದರೂ ಮೋದಿ ಸರ್ಕಾರದ ಕಾಲದಲ್ಲಿ ಬಹಳಷ್ಟು ತೆರಿಗೆಗಳನ್ನು ಸೆಸ್ ಮತ್ತು ಸರ್ಚಾರ್ಜಗಳ ರೂಪದಲ್ಲಿ ಸಂಗ್ರಹಿಸುವ ಮತ್ತು ಅದರ ವ್ಯಾಪ್ತಿ ಮತ್ತು ಅವಧಿಗಳನ್ನು ಹೆಚ್ಚಿಸುವ ಫೆಡರಲ್ ವಿರೋಧಿ ಕ್ರಮಗಳನ್ನ ಜಾರಿ ಮಾಡಿದೆ.

ಇದರಿಂದ ರಾಜ್ಯಗಳ ತೆರಿಗೆ ಪಾಲು ತೀವ್ರವಾಗಿ ಕಡಿಮೆಯಾಗುತ್ತಿದೆ. ಅದರಲ್ಲೂ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ದ್ರೋಹವನ್ನು ಮೋದಿ ಸರ್ಕಾರ ಮಾಡುತ್ತಿದೆ.

ಉದಾಹರಣೆಗೆ

15 ನೇ ಅಯೋಗದ ಪ್ರಕಾರ ಕೇಂದ್ರ ಸರ್ಕಾರದ ಒಟ್ಟಾರೆ ತೆರಿಗೆ ಸಂಗ್ರಹ 2021-26 ರ ಐದು ವರ್ಷದ ಅವಧಿಯಲ್ಲಿ 135.2 ಲಕ್ಷ ಕೋಟಿಯಷ್ಟಾಗಲಿದೆಯೆಂದು ಅಂದಾಜಿಸಲಾಗಿದೆ.

ಅಯೋಗವು ರಾಜ್ಯಗಳ ಪಾಲನ್ನು ಶೇ.41 ಎಂದು ನಿಗದಿಗೊಳಿಸಿದೆ. ಆದ್ದರಿಂದ ರಾಜ್ಯಗಳ ಪಾಲು 135.2 ಕೋಟಿಯ ಶೇ.41 ಎಂದರೆ 55 ಲಕ್ಷ ಕೋಟಿಗಳಾಗಬೇಕು. ಅಲ್ಲವೇ?

ಆದರೆ ಹಣಕಾಸು ಅಯೋಗವು ಇದರಲ್ಲಿ ಕೇವಲ 103 ಲಕ್ಷ ಕೋಟಿ ರುಪಾಯಿಗಳನ್ನು ಮಾತ್ರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕೆಂದು ತಿಳಿಸಿದೆ. ಏಕೆಂದರೇ ಇನ್ನುಳಿದ 32 ಲಕ್ಷ ಕೋಟಿ ರೂಪಾಯಿಗಳನ್ನು ಅಂದರೆ ಶೇ. 23 ರಷ್ಟು ಸೆಸ್ ಮತ್ತು ಸರ್ ಚಾರ್ಜ್ ಗಳಿಂದ ಸಂಗ್ರಹಿಸಲಾಗುವುದೆಂದು ಅಂದಾಜಿಸಿದೆ.

2000 ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಕಾನೂನಿನ ಪ್ರಕಾರ ಸೆಸ್ ಸಂಗ್ರಹದಲ್ಲಿ ರಾಜ್ಯಗಳಿಗೆ ಪಾಲಿಲ್ಲ…

ಹೀಗಾಗಿ 2021-26 ರ ಅವಧಿಯಲ್ಲಿ ರಾಜ್ಯಗಳ ಪಾಲು 135 ಲಕ್ಷ ಕೋಟಿಯ ಶೇ. 41 ರಷ್ಟಾಗದೆ , ಕೇವಲ 103 ಲಕ್ಷ ಕೋಟಿ ರೂಪಾಯಿಗಳ ಶೇ. 41 ರಷ್ಟು ಅಂದರೆ 42.2 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಯಲಿದೆ.

ಅಂದರೆ ರಾಜ್ಯಗಳಿಗೆ ಸಲ್ಲಬೇಕಿರುವ 12.8 (55-42.2 = 12.8 ) ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪನ್ಮೂಲವನ್ನು ಮೋದಿ ಸರ್ಕಾರ ಹಗಲು ದರೋಡೆ ಮಾಡಲಿದೆ.

ಆದರೆ ಮೋದಿ ಸರ್ಕಾರವೇ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿರುವಂತೆ ಕೇಂದ್ರ ತೆರಿಗೆಯಲ್ಲಿ ಸೆಸ್ ನ ಪಾಲು ಶೇ. 23 ಅಲ್ಲ. ಶೇ. 28 ಕ್ಕೇ ಏರಿದೆ. ಅಂದರೆ ರಾಜ್ಯಗಳ ಜೊತೆ ಈಗ ಕೇಂದ್ರ ಹಂಚಿಕೊಳ್ಳಲಿರುವುದು 103 ಲಕ್ಷ ಕೋಟಿಯಲ್ಲಿ ಶೇ. 41 ಅಲ್ಲ . ಬದಲಿಗೆ ಕೇವಲ 97 ಲಕ್ಷ ಕೋಟಿಯ ಶೇ. 41.

ಅಂದರೆ 39 ಲಕ್ಷ ಕೋಟಿ ಮಾತ್ರ .

ಆದರೆ ವಾಸ್ತವದಲ್ಲಿ ಮೋದಿ ಸರ್ಕಾರ ರಾಜ್ಯ ಗಳ ಜೊತೆಗೆ ಶೇ. 35 ಕ್ಕಿಂತ ಜಾಸ್ತಿ ಹಂಚಿಕೊಂಡಿಲ್ಲ. ಹೀಗಾಗಿ ರಾಜ್ಯಗಳಿಗೆ 39 ಲಕ್ಷ ಕೋಟಿಯೂ ಸಿಕ್ಕಿಲ್ಲ.

ಆದರೆ ಕರ್ನಾಟಕಕ್ಕೆ ಮೋದಿ ಸರ್ಕಾರ ಮಾಡುತ್ತಿರುವ ಅನ್ಯಾಯ ಇಷ್ಟೇ ಅಲ್ಲ.

15 ನೇ ಅಯೋಗವು ರಾಜ್ಯಗಳ ನಡುವಿನ ತೆರಿಗೆಪಾಲು ಹಂಚಿಕೆಗೆ ಕೆಳಗಿನ ಮಾನದಂಡಗಳನ್ನು ನಿಗದಿಗೊಳಿಸಿದೆ:

ಆದಾಯವಿರುವ ರಾಜ್ಯಗಳಿಗೆ ಹೋಲಿಸಿದಲ್ಲಿ ಆಯಾ ರಾಜ್ಯಗಳ ಆದಾಯ ದೂರ (ಇನ್‌ಕಮ್ ಡಿಸ್ಟನ್ಸ್- 45 ಅಂಕ), ಜನಸಂಖ್ಯಾ ಪ್ರಮಾಣ(15), ಜನಸಂಕ್ಯಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು (12.5), ತೆರಿಗೆ ಸಂಗ್ರಹದ ಕ್ರಮಗಳು (2.5), ಪರಿಸರ ಕ್ರಮಗಳು ಇತ್ಯಾದಿಗಳು. ಹಾಗೂ ಜನಸಂಖ್ಯಾ ಪ್ರಮಾಣಕ್ಕೆ ಮೊಟ್ಟಮೊದಲ ಬಾರಿಗೆ 1971 ರ ಜನಗಣತಿಗೆ ಬದಲಾಗಿ 2011 ರ ಜನಗಣತಿಯನ್ನು ಮಾನದಂಡವನ್ನಾಗಿಸಿಕೊಂಡಿದೆ

ಈ ಎಲ್ಲಾ ಕಾರಣಗಳಿಂದ ಕೇಂದ್ರದ ತೆರಿಗೆಯ ಡಿವಿಸಬಲ್ ಪೂಲ್‌ನಲ್ಲಿ ಕರ್ನಾಟಕದ ಪಾಲನ್ನು ಮೋದಿ ಸರ್ಕಾರ ನೇಮಿಸಿದ 15 ನೇ ಹಣಕಾಸು ಅಯೋಗ ಶೇ. 4.71 ರಿಂದ 3.64 ಕ್ಕೆ ಇಳಿಸಿದೆ.

ಅಂದರೆ, ಕೇಂದ್ರದ ತೆರಿಗೆಯ ಪಾಲಿನಲ್ಲಿ ಕರ್ನಾಟಕದ ಪಾಲು ಶೇ. 1.07ರಷ್ಟು ಕಡಿಮೆಯಾಗಿದೆ.

ಕರ್ನಾಟಕಕ್ಕೆ ಮೋದಿ ಸರ್ಕಾರ ಮಾಡುತ್ತಿರುವ ವಂಚನೆಯ ಲೆಕ್ಕಾಚಾರ

ಈಗ ಈ ಎಲ್ಲಾ ಕಾರಣಗಳಿಂದ ಮೋದಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಹಣಕಾಸು ವಂಚನೆಯ ಲೆಕ್ಕಾಚಾರ ಮಾಡೊಣ.

15 ನೇ ಹಣಕಾಸು ಅಯೋಗದ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕೇಂದ್ರೀಯ ತೆರಿಗೆಯ ಪ್ರಮಾಣ 135 ಲಕ್ಷ ಕೋಟಿಗಳಾಗಲಿವೆ. ಅದರಲ್ಲಿ ಮೋದಿ ಸರ್ಕಾರವೇ ಹೇಳುವಂತೆ ಶೇ.41 ರಷ್ಟು ರಾಜ್ಯಗಳ ಪಾಲಾಗಿದ್ದಿದ್ದರೆ ರಾಜ್ಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ಮೋದಿ ಸರ್ಕಾರ 55 ಲಕ್ಷ ಕೋಟಿ ರೂಗಳನ್ನು ವರ್ಗಾಯಿಸಬೇಕಿತ್ತು.

ಅದರಲ್ಲಿ ಕರ್ನಾಟಕದ ಪಾಲು ಶೇ.4.71 ಅಗಿಯೇ ಉಳಿದಿದ್ದರೆ ಕರ್ನಾಟಕಕ್ಕೆ ಮುಂದಿನ ಐದು ವರ್ಷಗಳಲ್ಲಿ 2.6 ಲಕ್ಷ ಕೋಟಿಗಳು ಸಿಗಬೇಕಿತ್ತು.

ಅಂದರೆ ಕೇಂದ್ರವು ಕರ್ನಾಟಕಕ್ಕೆ ವರ್ಷಕ್ಕೆ 51,000 ಕೋಟಿ ರೂಗಳನ್ನು ವರ್ಗಾಯಿಸಬೇಕಿತ್ತು.

ಆದರೆ ಈಗ ರಾಜ್ಯ ಸಭೆಯಲ್ಲಿ ಕೇಂದ್ರವೇ ಒಪ್ಪಿಕೊಂಡಂತೆ ಕೇಂದ್ರದ ತೆರಿಗೆಯಲ್ಲಿ ಸೆಸ್ ಅಂದರೆ ರಾಜ್ಯಗಳ ಹಂಚಿಕೊಳ್ಳದ ಪಾಲು ಶೇ. 28.1 . ಆದ್ದರಿಂದ ಕೇಂದ್ರವು ರಾಜ್ಯಗಳ ಜೊತೆ ಹಂಚಿಕೊಳ್ಳುವುದು 55 ಲಕ್ಷ ಕೋಟಿಗಳನ್ನಲ್ಲ. ಬದಲಿಗೆ ಕೇವಲ 39.1 ಲಕ್ಷ ಕೋಟಿಗಳನ್ನು ಮಾತ್ರ.

ಅಂದರೆ ಕರ್ನಾಟಕದಂಥ ರಾಜ್ಯಗಳಿಗೆ ಮೋದಿ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ 55-39.1=15 ಲಕ್ಷ ಕೋಟಿಗಳಷ್ಟು ಪಂಗನಾಮ ಹಾಕುತ್ತಿದೆ.

ಅದರಲ್ಲಿ ಕರ್ನಾಟಕದ ಪಾಲು ಶೇ. 4.71 ರಿಂದ 3.64 ಕ್ಕೆ ಇಳಿದಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ದಕ್ಕುವುದು ಕೇವಲ 1.42 ಲಕ್ಷ ಕೋಟಿಗಳು ಮಾತ್ರ.

ಅಂದರೆ ವರ್ಷಕ್ಕೆ ಕೇವಲ 28000 ಕೋಟಿಗಳು ಮಾತ್ರ.

ಸೆಸ್ ದ್ರೋಹ ಮತ್ತು ಹಣಕಸು ಅಯೋಗದ ವಂಚನೆ ಇಲ್ಲದಿದ್ದರೆ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ 51,000 ಕೋಟಿ ಸಿಗಬೇಕಿತ್ತು. ಈಗ ಸಿಗುತ್ತಿರುವುದು ಕೇವಲ 28,000 ಕೋಟಿ.

ಅಂದರೆ ಪ್ರತಿವರ್ಷ ನಿವ್ವಳ 51,000-28,000=23,000 ಕೋಟಿ ವಂಚನೆ. ಹಗಲು ದರೋಡೆ..

ಇದು ಮೋದಿ ಸರ್ಕಾರ ಕರ್ನಾಟಕಕ್ಕೇ ಮಾಡುತ್ತಿರುವ ವಂಚನೆ . ಇದಲ್ಲದೆ ಕೊಡಬೇಕಿರುವುದನ್ನು ಕೊಡದೆ ಸತಾಯಿಸುವುದು ಮತ್ತೊಂದು ರೀತಿಯ ಕಿರುಕುಳ….

ಕಾಂಗ್ರೆಸ್ ಬದಲಿಸಿಕೊಳ್ಳುವುದೇ ನೀತಿ?

ಹಾಗೆಂದು ಕಾಂಗ್ರೆಸ್ ನೇತೃತ್ವದ UPA ಸರ್ಕಾರದ ರೆಕಾರ್ಡ್ ಕೂಡ ಅನುಕರಣೀಯವೇನು ಆಗಿರಲಿಲ್ಲ.

ಉದಾಹರಣೆಗೆ ಮೋದಿ ಸರ್ಕಾರ ಕೇಂದ್ರದ ತೆರಿಗೆಗಳಲ್ಲಿ ಶೇ. 42ರಷ್ಟು ರಾಜ್ಯಗಳಿಗೆ ಹಂಚಲಾಗುವುದು ಎಂದು ಸುಳ್ಳು ಭರವಸೆಯನ್ನು ಕೊಟ್ಟು ಸರಾಸರಿ ಶೇ. 35 ಕೊಡುತ್ತಿದೆ. ಕೆಲವು ವರ್ಷ ಅದು ಶೇ. 29ಕ್ಕಿಳಿದಿದೆ.

ಆದರೆ ಯುಪಿಎ ಸರ್ಕಾರದ ಕಾಲದಲ್ಲೂ ರಾಜ್ಯಗಳ ಪಾಲು ಶೇ. 32ಕ್ಕಿಂತ ಹೆಚ್ಚಾಗಿರಲೇ ಇಲ್ಲ .

ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲಿಲ್ಲ ಎಂಬ ಫೆಡರಲ ವಿರೋಧಿ ಸಂವಿಧಾನ ತಿದ್ದುಪಡಿ ವಾಜಪೇಯಿ ಕಾಲದಲ್ಲಿ ಆಗಿತ್ತು.

ಆದರೆ 2004-14 ರ ಅವಧಿಯಲ್ಲಿ ಯುಪಿಎ ಸರ್ಕಾರವೇ ಅಧಿಕಾರದಲ್ಲಿದ್ದರೂ ಈ ಅನ್ಯಾಯಯುತ ಫೆಡರಲ್ ವಿರೋಧಿ ಕಾನೂನನ್ನು ಬದಲಾಯಿಸಲಿಲ್ಲ.

ಇದರ ನಡುವೆಯೂ ಕೇರಳ ಸರ್ಕಾರ ಪ್ರವಾಹ ಪರಿಹಾರಕ್ಕೆ ಸೆಸ್ ಹಾಕಿತ್ತು.

ಇದೆ ರೀತಿ ಒರಿಸ್ಸಾ ಸರ್ಕಾರ ಹಾಕಿದ್ದ ಸೆಸ್ ಬಗ್ಗೆ ಪ್ರಕರಣವೊಂದು ಮುಂದುವರೆದು…ರಾಜ್ಯಗಳಿಗೆ ಸೆಸ್ ಹಾಕುವ ಅಧಿಕಾರವಿದೆಯೇ ಎಂಬ ವಿಷಯ ಈಗ ಸುಪ್ರೀಂಕೋರ್ಟಿನ ಒಂಭತ್ತು ಸದಸ್ಯರ ಪೀಠದ ಮುಂದಿದೆ.

ಹೀಗೆ ಒಟ್ಟಾರೆಯಾಗಿ ಮೋದಿ ಸರ್ಕಾರ ಕರ್ನಾಟಕದ ಮೇಲೆ ದ್ವೆಷ ಸಾಧಿಸುತ್ತಿದೆ.

ಪರಮ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿದೆ.

ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಮೋದಿಯ ಬಿಜೆಪಿಗೆ ಓಟು ಹಾಕಿದರೆ ಮಹಾ ಅತ್ಮವಂಚನೆಯೇ ಅದೀತು.

ಹೀಗಾಗಿ ಕರ್ನಾಟಕ ತನಗಾಗುತ್ತಿರುವ ದ್ರೋಹವನ್ನು ತಡೆಗಟ್ಟಬೇಕೆಂದರೆ ಬಿಜೆಪಿಯನ್ನು ಸೋಲಿಸುವುದು ಮೊದಲ ಹೆಜ್ಜೆ.

ಅದನ್ನ ಕರ್ನಾಟಕ ಮಾಡಲೇ ಬೇಕು.

ಆದರೆ ಅಷ್ಟರಿಂದಲೇ ಕರ್ನಾಟಕಕ್ಕೆ ಆಗುವ ಅನ್ಯಾಯ ನಿಲ್ಲವುದಿಲ್ಲ.

ಒಂದು ವೇಳೆ ಮುಂದೆಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೂ ಅಥವಾ ಬೇರೆ ಸರ್ಕಾರ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಕೆಳಗನ ಆಗ್ರಹಗಳನ್ನು ಮುಡಿಟ್ಟುಕೊಂಡು ಜನಾಂದೋಲವನ್ನು ಕಟ್ಟಲೇ ಬೇಕು :

ಕರ್ನಾಟಕ ಜನತೆಯ ಆಗ್ರಹಗಳು ಇವಾಗಬೇಕು

  • ಶೇ. 67 ರಷ್ಟು ವೆಚ್ಚ ಗಳ ಜವಾಬ್ದಾರಿ ಹೊಂದಿರುವ ರಾಜ್ಯಗಳಿಗೆ ಶೇ. 67 ರಷ್ಟು ತೆರಿಗೆ ಪಾಲು ಸಿಗಬೇಕು
  • ಸೆಸ್ ಹಾಕುವ ಅಧಿಕಾರ ರಾಜ್ಯ ಸರ್ಕಾರಗಳಿಗೂ ನೀಡುವಂತೆ ಕಾನೂನು ತಿದ್ದುಪಡಿ ಮಾಡಬೇಕು.
  • ಕೇವಲ ಐಷಾರಾಮಿ ಹಾಗೂ ವಿಲಾಸಿ ಸರಕು ಮತ್ತು ಸೇವೆಗಳಮೇಲೆ ಮಾತ್ರ ಸೆಸ್ ಹಾಕುವಂತೆ ಕಾನೂನು ತಿದ್ದುಪಡಿ ತರಬೇಕು.
  • ಪೆಟ್ರೋಲ್ ಮತ್ತು ಡೀಸೆಲ್ ನಂಥ ಬೆಲೆ ಹಣದುಬ್ಬರ ಕಾರಕ ಸರಕುಗಳ ಮೇಲೆ ಸೆಸ್ ಮತ್ತು ಸರ್ ಚಾರ್ಜ್ ನಿಲ್ಲಿಸಬೇಕು.
  • ರಾಜ್ಯಗಳಿಗೂ ಕೂಡ ಕಾರ್ಪೊರೇಟ್ ತೆರಿಗೆ ವಿಧಿಸುವ ಅಧಿಕಾರ ಒದಗಬೇಕು
  • ಕೇಂದ್ರದ ದಿವಿಸಬಲ್ ಪೂಲ್ ನ ರಾಜ್ಯವಾರು ತೆರಿಗೆ ಹಂಚಿಕೆಯ ಸೂತ್ರವನ್ನು ಕೇಂದ್ರದ ಕ್ಯಾಬಿನೆಟ್ ತೀರ್ಮಾನ ಮಾಡದೆ ರಾಜ್ಯ ಸರ್ಕಾರಗಳ ಸಮಾಲೋಚನೆಯೊಂದಿಗೆ ನಿಗದಿಯಾಗಬೇಕು.
  • GST ವ್ಯವಸ್ಥೆ ಮಾರ್ಪಾಡಾಗಬೇಕು.
  • ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಜಿಎಸ್ಟಿ ಪಾಲು ಕಡಿಮೆಯಾಗುತ್ತಾ ಅತಿ ಶ್ರೀಮಂತ, ಶ್ರೀಮಂತ , ಮೇಲ್ಮಧ್ಯಮವರ್ಗಗಳ ಮೇಲೆ ವಿಧಿಸುವ ತೆರಿಗೆ ಆದಾಯಗಳು ಹೆಚ್ಚಾಗಬೇಕು

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ದರೋಡೆಯನ್ನು ವಿರೋಧಿಸುತ್ತಲೇ…

ಕಾಂಗ್ರೆಸ್ ಆಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ಈ ಮೇಲಿನ ಆಗ್ರಹಗಳನ್ನು ಒಪ್ಪಿಕೊಳ್ಳುವಂತೆ ಮಾಡಿದರೆ ಮಾತ್ರ ಕರ್ನಾಟಕಕ್ಕೇ ನ್ಯಾಯ ಸಿಗುತ್ತದೆ.

ಅಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!