ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿರುದ್ಧ ಮಂಡ್ಯದ ಪೂರ್ವ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಇವರಿಬ್ಬರ ಮೇಲೆ ಎಫ್ಐಆರ್ ದಾಖಲಾಗಿದೆ.
ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆಯಡಿ ಸಚಿವ ಅಶ್ವತ್ಥ್ ನಾರಾಯಣ್ A1, ಬಿಜೆಪಿ ಮೈ.ವಿ.ರವಿಶಂಕರ್ A2 ಆರೋಪಿಗಳಾಗಿದ್ದಾರೆ.
IPC ಸೆಕ್ಷನ್ 1860 (U/s-171C, 171F) ಮತ್ತು REPRESENTATION OF PEOPLE ACT(ಪ್ರಜಾಪ್ರತಿನಿಧಿ ಕಾಯ್ದೆ), 1950,1951,1989 (U/s-123) ಅಡಿ ಪ್ರಕರಣ ದಾಖಲಾಗಿದೆ.
ಮೇ 16ರಂದು ಸಚಿವರು ನಗರದ ವಿವಿಧ ಕಾಲೇಜುಗಳಲ್ಲಿ ವಿಧಾನ ಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಪ್ರಚಾರ ನಡೆಸಿದ್ದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಸಚಿವರು ಪ್ರಚಾರ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಚುನಾವಣಾಧಿಕಾರಿಗೆ ದೂರು ನೀಡಿದ್ದರು.ಮಂಜುನಾಥ್ ಅವರ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು.
ಸಚಿವರು ನೀತಿ ಸಂಹಿತೆ ಉಲ್ಲಂಘಿಸಿದ್ದು ಕಾನೂನು ಕ್ರಮ ಜರುಗಿಸುವಂತೆ ಕೋರಿ ಚುನಾವಣಾ ನೀತಿ ಸಂಹಿತೆ ತಂಡದ ಮುಖ್ಯಸ್ಥರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಸಹಾಯಕ ಚುನಾವಣಾಧಿಕಾರಿಗೆ ವರದಿ ನೀಡಿದ್ದರು. ಜೊತೆಗೆ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಪರಿಶೀಲನೆ ನಡೆಸಿದ ನ್ಯಾಯಾಧೀಶರು ಕೂಡ ಪ್ರಕರಣ ದಾಖಲಿಸಲು ಪೂರ್ವ ಠಾಣೆಯ ಪೊಲೀಸರಿಗೆ ಸೂಚಿಸಿದ್ದರು.
ಅದರಂತೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಮೈ.ವಿ. ರವಿಶಂಕರ್ ವಿರುದ್ಧ ಪೂರ್ವ ಠಾಣೆಯ ಪಿಎಸ್ಐ ಕೆ.ಎನ್.ಕೇಶವಮೂರ್ತಿ ಎಫ್‌ಐಆರ್ ದಾಖಲಿಸಿದ್ದಾರೆ.