Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ ಕೃಷ್ಣ ಅವರ ಆದರ್ಶ ಇಂದಿನ ರಾಜಕಾರಣಿಗಳಿಗೆ ಮಾದರಿ – ಸಚಿವ ಚಲುವರಾಯಸ್ವಾಮಿ

ಕಲುಷಿತಗೊಂಡಿರುವ ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಶ್ರೀಸಾಮಾನ್ಯರ ಮಧ್ಯದಲ್ಲಿದ್ದುಕೊಂಡು ಜನಪರ ಕೆಲಸ ಮಾಡಿದ ಸರಳ, ಸಜ್ಜನ ರಾಜಕಾರಣಿ ಕೆ.ಆರ್.ಪೇಟೆ ಕೃಷ್ಣ ಅವರ ಆದರ್ಶಗಳು, ಇಂದಿನ ರಾಜಕಾರಣಿಗಳು ಹಾಗೂ ಯುವ ಜನರಿಗೆ ಮಾದರಿಯಾಗಿವೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಕೆ ಆರ್ ಪೇಟೆ ಪಟ್ಟಣದಲ್ಲಿ ಕೃಷ್ಣ ಅವರ 83ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಡೆದ ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.

ಕೃಷ್ಣ ಅವರಂತಹ ಮೌಲ್ಯಾಧಾರಿತ ರಾಜಕಾರಣಿಗಳು ಇಂದಿನ ದಿನಮಾನದಲ್ಲಿ ಅಪರೂಪವಾಗುತ್ತಿದ್ದಾರೆ. ಕೃಷ್ಣರ ಆದರ್ಶಗಳು ಹಾಗೂ ಪ್ರಾಮಾಣಿಕತೆಯನ್ನು ನಮ್ಮ ಮುಂದಿನ ಯುವ ಜನಾಂಗಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಶ್ಯಕತೆ ಇರುವುದರಿಂದ ಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿರುವ ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದರು.

ನುಡಿದಂತೆ ನಡೆಯುವ ನೇರ ನಿಷ್ಠುರವಾದಿ ರಾಜಕಾರಣಿ ಆಗಿದ್ದ ಕೃಷ್ಣ ಅವರು, ತಮ್ಮ ಜೀವನದುದ್ದಕ್ಕೂ ಗಾಂಧಿ ತತ್ವವನ್ನು  ಮೈಗೂಡಿಸಿಕೊಂಡು ಸರಳವಾಗಿ ಜೀವನವನ್ನು ನಡೆಸಿದರು. ಕೃಷ್ಣ ಅವರ ಆದರ್ಶ ಗುಣಗಳನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುವ ದೃಷ್ಟಿಯಿಂದ ಇಂದಿನ ಹುಟ್ಟುಹಬ್ಬದ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ, ಆದ್ದರಿಂದ ನಾನು ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸುತ್ತೇನೆ. ಕೃಷ್ಣ ಪ್ರತಿಷ್ಠಾನದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳಿಗೂ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಎ ಟಿ ರಾಮಸ್ವಾಮಿ ಮಾತನಾಡಿ, ಕೃಷ್ಣ ಅವರ ರಾಜಕೀಯ ಜೀವನ ಒಂದು ತೆರೆದ ಪುಸ್ತಕವಿದ್ದಂತೆ. 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕ ಆಡಳಿತ ನೀಡಿದ್ದಾರೆ. ಕೃಷ್ಣ ಅವರು ತಮ್ಮ ಮನೆ ಬಾಗಿಲಿಗೆ ಗುತ್ತಿಗೆದಾರರೊಬ್ಬರು ತೆಗೆದುಕೊಂಡು ಹೋಗಿದ್ದ ಹಣವನ್ನು ಸ್ವೀಕರಿಸದೆ ಗೆಟೌಟ್ ಎಂದು ಹೇಳಿದ ದಿಟ್ಟ ಧೀಮಂತ ರಾಜಕಾರಣಿ ಎಂದರೆ ಅದು ಕೆ ಆರ್ ಪೇಟೆ ಕೃಷ್ಣ ಮಾತ್ರ. ಕೃಷ್ಣ ಅವರು ನನ್ನ ಗುರುಗಳು ಎಂದು ಹೇಳಿಕೊಳ್ಳಲು ನನಗೆ ಅಭಿಮಾನ ಎನಿಸುತ್ತದೆ ಎಂದರು.

ಶಾಸಕ ಎಚ್ ಟಿ ಮಂಜು ಅವರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊಫೆಸರ್ ಬಿ.ಜಯಪ್ರಕಾಶ್ ಗೌಡ, ಪ್ರಗತಿಪರ ಕೃಷಿಕ ಪ್ರಸನ್ನ, ಶ್ರೀಗಂಧ ಬೆಳೆಗಾರ ಮಾವಿನಕೆರೆ ರಮೇಶ್, ಉರಗ ತಜ್ಞ ಸ್ನೇಕ್ ಮುನ್ನ, ಆಶಾ ಕಾರ್ಯಕರ್ತೆ ವಿಠಲಾಪುರ ಎಂ.ಆರ್.ಜ್ಯೋತಿ, ಅಂಗನವಾಡಿ ಶಿಕ್ಷಕಿ ಅನುವಿನಕಟ್ಟೆ ಶೋಭ ಅವರು ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ‌ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಸನ್ಮಾನಿತರಾದ ಎಲ್ಲರಿಗೂ ತಲಾ ಐದು ಸಾವಿರ, ವಿದ್ಯಾರ್ಥಿಗಳಿಗೆ ತಲಾ ಎರಡೂವರೆ ಸಾವಿರ ರೂ ನಗದು ಪುರಸ್ಕಾರಕ್ಕೆ 45 ಸಾವಿರ ರೂ ದೇಣಿಗೆ ನೀಡಿದರು.

ಮಾಜಿ ಸಚಿವ ಡಾ. ನಾರಾಯಣ ಗೌಡ ಮಾತನಾಡಿದು. ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಳ್ಳಿ ಜವರಾಯಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಕೃಷ್ಣ ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಟಿ.ಚಂದ್ರೇಗೌಡ, ಕಾರ್ಯದರ್ಶಿ ವಾಸು, ಖಜಾಂಚಿ ಹೆಮ್ಮನಹಳ್ಳಿ ರಮೇಶ್, ಸಹ ಕಾರ್ಯದರ್ಶಿ ಹೊಸಹೊಳಲು ಮಂಜುಳಮ್ಮ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ಮನ್ ಮುಲ್ ನಿರ್ದೇಶಕ ಡಾಲು ರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಕೃಷ್ಣ ಅವರ ಧರ್ಮಪತ್ನಿ ಪ್ರೊ.ಇಂದಿರಾಕೃಷ್ಣ ಅವರು ಜೈಹಿಂದ್ ಉಚಿತ ವೃದ್ದಾಶ್ರಮಕ್ಕೆ ಕೃಷ್ಣ ರವರ ಹುಟ್ಟು ಹಬ್ಬದ ಅಂಗವಾಗಿ 10ಸಾವಿರ ನಗದು ದೇಣಿಗೆ ನೀಡಿದರು.

ಹಲವರಿಂದ ದೇಣಿಗೆ

ಕೃಷ್ಣ ಪ್ರತಿಷ್ಠಾನ ಟ್ರಸ್ಟ್ ಗೆ ಶೂದ್ರಶಕ್ತಿ ಪತ್ರಿಕೆ ಸಂಪಾದಕ 1ಲಕ್ಷ ರೂ, ನಿವೃತ್ತ ಕೆ.ಇ.ಬಿ ಇಂಜಿನಿಯರ್ ಆಲೇನಹಳ್ಳಿ ಜಯರಾಜು 1.5 ಲಕ್ಷ ರೂ, ನಿವೃತ್ತ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಐ.ಸಿ.ಬಸವರಾಜು 25 ಸಾವಿರ ರೂ, ನಾಟನಹಳ್ಳಿ ಹಾಗೂ ಬಂಡಿಹೊಳೆ ಹಾಲು ಉತ್ಪಾದಕರ ಸಹಕಾರ ಸಂಘ ತಲಾ 10ಸಾವಿರ ದೇಣಿಗೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!