ಭಾರತ ಸರ್ಕಾರದ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರು ಜುಲೈ 8 ರಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಯಾವುದೇ ಲೋಪ ಉಂಟಾಗದಂತೆ ಕಾರ್ಯಕ್ರಮವನ್ನು ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಸರ್ಕಾರದ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರು ಜಿಲ್ಲೆಗೆ ಆಗಮಿಸುತ್ತಿರುವ ಸಂಬಂಧ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜುಲೈ 08 ರಂದು ನಿಮಿಷಾಂಬ ದೇವಸ್ಥಾನಕ್ಕೆ ಭೇಟಿನೀಡಿದ ನಂತರ ಬೆಳಿಗ್ಗೆ 11:30ಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಂಡ್ಯ ತಾಲ್ಲೂಕಿನ ಫಲಾನುಭವಿಗಳನ್ನು ಅಧಿಕಾರಿಗಳು ಡಾ .ಬಿ.ಆರ್ ಅಂಬೇಡ್ಕರ್ ಭವನಕ್ಕೆ ಕರೆದು ಕೊಂಡು ಬಂದು ಹೋಗುವ ವ್ಯವಸ್ಥೆ ಮಾಡಬೇಕು. ಹಿಂದಿ, ಇಂಗ್ಲೀಷ್ ಭಾಷಾಂತರ ಮಾಡಲು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಎಂದರು.
ಸಚಿವರು ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಆಯುಷ್ಮನ್ ಭಾರತ್, ಜಲಜಿವನ್ ಮಿಷನ್, ಸ್ವಚ್ಚ ಭಾರತ್ ಅಭಿಯಾನ್, ಪ್ರಧಾನ ಮಂತ್ರಿ ಸಾಮಾಜಿಕ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಜನ ಧನ ಯೋಜನೆ,ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ,ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಸ್ಟ್ಯಾಂಡ್ ಅಪ್ ಇಂಡಿಯಾ ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.ಅಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿ ಯೊಂದಿಗೆ ಹಾಜರಾಗಿ ನಿಖರ ಮಾಹಿತಿ ಒದಗಿಸಬೇಕು ಎಂದರು.
ಕೇಂದ್ರ ಸಚಿವರು ಪ್ರತಿಮಾಹೆ ಜಿಲ್ಲೆಯ ಒಂದೊಂದು ತಾಲ್ಲೂಕಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಪ್ರಗತಿಯ ಬೆಳವಣಿಗೆ ಯನ್ನು ಆಯಾ ತಾಲ್ಲೂಕಿನಲ್ಲಿ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಫಲಾನುಭವಿ ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜುಲೈ 09 ರಂದು 10:30 ಗಂಟೆಗಳಿಂದ 11:30 ಗಂಟೆಗಳವರೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸುವಂತೆ ಸಲಹೆ ನೀಡಿದರು.
ಜುಲೈ 10ರಂದು ಬೆಳಿಗ್ಗೆ 9ಗಂಟೆಯಿಂದ 10ಗಂಟೆಯ ವರೆಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು, ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿಯವರು ಸಭೆಯಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ, ಪೊಲೀಸ್ ವರಿಷ್ಠಾಧಿಕಾರಿ ಎನ್ .ಯತೀಶ್, ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಿ.ರಂಗೇಗೌಡ,ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡ,ನಗರ ಸಭೆಯ ಆಯುಕ್ತ ಆರ್.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತಿರಿದ್ದರು.