Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜಭವನದ ದುರುಪಯೋಗ: ಕಾಂಗ್ರೆಸ್ ಕಿಡಿ

ಪಾರ್ವತಿ ಸಿದ್ದರಾಮಯ್ಯ ಅವರಿಗೆ 3.16.00.00 ಗುಂಟೆ ಜಮೀನಿಗೆ ಬದಲಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರವರಿಗೆ ಶೇಕಡ 50: 50 ರ ಅನುಪಾತದಲ್ಲಿ 14 ನಿವೇಶನಗಳನ್ನು ಕೊಟ್ಟಿರುವ ಸಂಬಂಧ ಯಾವುದೇ ನಿಯಮಗಳು ಉಲ್ಲಂಘನೆ ಆಗದಿದ್ದರೂ, ಅಕ್ರಮಗಳು ಆಗದಿದ್ದರೂ ಡಿ.ಜೆ. ಅಬ್ರಹಾಂ ರವರ ಸುಳ್ಳು ದೂರಿನ ಆಧಾರದ ಮೇಲೆ ಘನವೆತ್ತ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಿರುವುದು ಅಸಂವಿಧಾನಿಕ, ಅಕ್ಷಮ್ಯ ಹಾಗೂ ಖಂಡನೀಯ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡ ಶಿವನಂಜು ಕಿಡಿಕಾರಿದ್ಧಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರ ಈ ನಡೆ ಹೇಗೆ ರಾಜಭವನದ ದುರುಪಯೋಗ ಹೇಗೆ ಆಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಪಾರ್ವತಿ ಸಿದ್ದರಾಮಯ್ಯ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ್ ಅವರಿಂದ ದಾನ ಪತ್ರದ ಮೂಲಕ 3.16 ಗುಂಟೆ ಜಮೀನು ಬಂದಿರುತ್ತದೆ. ಸದರಿ ಜಮೀನು ಮೂಲತಃ ಎಸ್.ಸಿ. ಎಸ್.ಟಿ. ಸಮುದಾಯಕ್ಕೆ ಸೇರಿದ ಜವರ ಬಿನ್ ನಿಂಗ ಎಂಬುವವರು ಹರಾಜು ಪ್ರಕ್ರಿಯೆಯಲ್ಲಿ ಕೊಂಡಂತಹ ಜಮೀನಾಗಿದೆ.  ಆದ್ದರಿಂದ ಇದು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ಮುಡಾದವರು ಬಿ.ಜೆ. ಪಿ. ಸರ್ಕಾರದ ಅವಧಿಯಲ್ಲೇ 14 ನಿವೇಶನಗಳನ್ನು ಕೊಟ್ಟಿದ್ದು, ಯಾವ ರೀತಿ ಅಕ್ರಮ ಆಗಿದೆ ? ತಮಗೆ ಇಂತಹ ಕಡೆಯೇ 14 ನಿವೇಶನಗಳನ್ನು ಕೊಡಬೇಕೆಂದು ಪಾರ್ವತಿ ಸಿದ್ದರಾಮಯ್ಯರವರು ಕೇಳಿಕೊಂಡಿದ್ದಾರೆಯೇ? ಈ ರೀತಿಯಾಗಿ ಯಾವುದೇ ನಿಯಮಾವಳಿಗಳನ್ನು ಉಲ್ಲಂಘನೆ ಆಗದಿದ್ದರೂ, ಅಕ್ರಮಗಳು ಆಗದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಕಿಡಿಕಾರಿದರು.

2006 ರಿಂದ 14ನೇ ಜುಲೈ 2024ರವರೆಗಿನ ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲಿ ಮೈಸೂರು ಮುಡಾದಲ್ಲಿ ನಡೆದಿರುವ ಎಲ್ಲಾ ಭೂ ವ್ಯವಹಾರಗಳ ಸಂಬಂಧ ತನಿಖೆಯನ್ನು ಮಾಡಿ 06 ತಿಂಗಳ ಅವಧಿಯೊಳಗಾಗಿ ವರದಿ ನೀಡುವಂತೆ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗವನ್ನು ನೇಮಕ ಮಾಡಿದ್ದಾರೆ. ಈಗಾಗಲೇ ಆಯೋಗವು ತನಿಖೆ ನಡೆಸುತ್ತಿದ್ದು, ಮತ್ತು ಈ ಸಂಬಂಧ ಘನವೆತ್ತ ರಾಜ್ಯಪಾಲರ ಗಮನಕ್ಕೆ ತಂದಿದ್ದರೂ ಟಿ.ಜೆ. ಅಬ್ರಹಾಂ ರವರ ದೂರಿನ ಮೇರೆಗೆ ಮುಖ್ಯಮಂತ್ರಿಗಳಿಗೆ ನೋಟೀಸ್ ನೀಡಿರುವುದು ರಾಜಭವನದ ದುರುಪಯೋಗವಲ್ಲದೇ ಮತ್ತೇನು ಅಲ್ಲ ಎಂದು ಕಿಡಿಕಾರಿದರು.

ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಬಿ.ಜೆ. ಪಿ. ಮತ್ತು ಜೆ.ಡಿ.ಎಸ್. ಪಕ್ಷಗಳು ಪಾದಯಾತ್ರೆ ಮಾಡುತ್ತಿವೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಕಾಂಗ್ರೆಸ್ ಪಕ್ಷವು ಹಾಗೂ ಪ್ರಜ್ಞಾವಂತ ಸಾರ್ವಜನಿಕ ಬೆಂಬಲದೊಂದಿಗೆ ಆ.6ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲಿದೆ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಶ್ರೀಧರ್, ವೆಂಕಟೇಶ್, ಶಿವರುದ್ರ ಹಾಗೂ ಭಾಗಮ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!