Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಾಸಕ ಗಣಿಗ ರವಿಕುಮಾರ್ ಮುಂದೆ ಸಮಸ್ಯೆಗಳ ದರ್ಶನ

ಮಂಡ್ಯ ನಗರಸಭೆ ವ್ಯಾಪ್ತಿಯ ಮೂರು ವಾರ್ಡ್ ಗಳಿಗೆ ಶಾಸಕ ಗಣಿಗ ರವಿಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಶಾಸಕರ ಮುಂದೆ ತೆರೆದಿಟ್ಟರು.

ಇಂದು ಗಾಂಧಿನಗರದ 12 ಮತ್ತು 13ನೇ ವಾರ್ಡ್ ಹಾಗೂ ಸುಭಾಷ್ ನಗರ 10 ನೇ ವಾರ್ಡ್ಗ ಗೆ ಭೇಟಿ ನೀಡಿದ ಶಾಸಕರಿಗೆ ಹಲವು ಸಮಸ್ಯೆಗಳ ದರ್ಶನ ವಾಯಿತು.ರಸ್ತೆ ಮತ್ತು ಚರಂಡಿಗಳ ಅಸ್ವಚ್ಚತೆ, ಅರ್ಧಂಬರ್ಧ ಮಾಡಿರುವ ರಸ್ತೆ, ಮುರಿದು ಬಿದ್ದಿರುವ ಚರಂಡಿ, ಫುಟ್ ಪಾತ್ ಅತಿಕ್ರಮಣ, ಅಂಬೇಡ್ಕರ್ ರಸ್ತೆಗೆ ನಾಮ ಫಲಕ ಅಳವಡಿಸಬೇಕು,ಪರಿಶಿಷ್ಟರು ವಾಸಿಸುವ ಪ್ರದೇಶದಲ್ಲಿರುವ ವೈನ್ ಸ್ಟೋರ್ ಗಳಿರುವ ಬಗ್ಗೆ ದೂರಗಳು ಕೇಳಿ ಬಂದರೆ ಅಲ್ಲಲ್ಲಿ ವೃದ್ಧಾಪ್ಯ ವೇತನ ವಿಳಂಬವಾಗಿರುವುದು,ಬಿಪಿಎಲ್ ಕಾರ್ಡ್ ಮಾಡಿಸಿಕೊಡುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು.

ಗಾಂಧಿನಗರ ವಾರ್ಡ್ ನಲ್ಲಿ ರಸ್ತೆ-ಚರಂಡಿ ಸ್ವಚ್ಛ ಮಾಡಿಲ್ಲ,ಚರಂಡಿಗಳು ಸೊಳ್ಳೆಗಳ ತಾಣವಾಗಿದೆ,ಕುಡಿಯವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ,ರಸ್ತೆಗಳು ಹಳ್ಳಗುಂಡಿ ಬಿದ್ದಿವೆ. ನಗರಸಭೆಯವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

ಶಾಸಕ ರವಿಕುಮಾರ್ ಅವರು 100 ಅಡಿ ರಸ್ತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಬೇಡ್ಕರ್ ರಸ್ತೆ ಎಂದು ನಾಮಫಲಕ ಹಾಕುವಂತೆ ದಲಿತ ಮುಖಂಡರು ಒತ್ತಾಯಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ಈಗಾಗಲೇ ನಾಮಫಲಕ ಸಿದ್ಧವಾಗುತ್ತಿದೆ,ವಾರದಲ್ಲಿ ನಾಮಫಲಕ ಹಾಕಲಾಗುವುದು ಎಂದು ತಿಳಿಸಿದರು.

ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿರುವ ಪ್ರದೇಶದಲ್ಲಿ ವೈನ್ ಸ್ಟೋರ್ ತೆರೆಯಲು ಪರವಾನಗಿ ನೀಡಬಾರದು.ಆದರೆ ಕಾನೂನು ಬಾಹಿರವಾಗಿ ತೆರೆದಿರುವ ನಾಗಣ್ಣ ವೈನ್ ಸ್ಟೋರ್, ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆ ಹಾಗೂ ಮಧು ಲೋಕ ಸ್ಪಿರಿಟ್ ಜೋನ್ ಮದ್ಯ ಮಳಿಗೆಯನ್ನು ತೆರವು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಪರಿಶಿಷ್ಟರು ವಾಸಿಸುವ ಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆಗೆ ಅವಕಾಶವಿಲ್ಲ ಎಂಬ ನಿಯಮವಿದೆ, ಆದರೆ ಇಲ್ಲಿ ಹೇಗೆ ಅವಕಾಶ ಮಾಡಿಕೊಟ್ಟಿದ್ದಾರೆ ಗೊತ್ತಾಗಿಲ್ಲ, ಈ ಬಗ್ಗೆ ನನಗೆ ದೂರು ಕೊಡಿ ಕ್ರಮ ವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.

ನೂರಡಿ ರಸ್ತೆಯಲ್ಲಿ ವ್ಯಾಪಾರಿಗಳು ಫುಟ್ ಪಾತ್ ಅತಿಕ್ರಮಿಸಿ ವಸ್ತುಗಳನ್ನು ಇಟ್ಟಿದ್ದಾರೆ.ಇದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆ ಆಗಿದ್ದು, ಸಾರ್ವಜನಿಕರಿಗೆ ಪುಟ್ ಪಾತ್ ತೆರವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸುಭಾಷ್ ನಗರ 10ನೇ ವಾರ್ಡ್ ನಲ್ಲಿ ಚರಂಡಿಗಳ ಸ್ವಚ್ಛತೆ ಮಾಡದಿರುವ ಬಗ್ಗೆ,ಮುರಿದುಬಿದ್ದ ಚರಂಡಿ, ಗುಂಡಿ ಬಿದ್ದ ರಸ್ತೆ ಹಾಗೂ ಪ್ರತಿನಿತ್ಯ ಕುಡಿಯುವ ನೀರನ್ನು ಬಿಡುತ್ತಿಲ್ಲ ಎಂಬ ಬಗ್ಗೆ ದೂರಿದರು.

ಅಲ್ಲದೆ ಅರ್ಧ ರಸ್ತೆಗೆ ಡಾಂಬರು ಹಾಕಿ ವರ್ಷವಾದರೂ ಪೂರ್ಣ ಮಾಡದೇ ಇರುವುದನ್ನು ಕಂಡ ಶಾಸಕರು ನಗರಸಭೆ ಇಂಜಿನಿಯರ್ ವಿರುದ್ಧ ಕಿಡಿಕಾರಿ ವಾರದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ವಾರ್ಡ್ ರಸ್ತೆ ಮತ್ತು ಚರಂಡಿಗಳ ಸ್ವಚ್ಛತೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಸಭೆ ಆಯುಕ್ತ ಮಂಜುನಾಥ್, ಇಂಜಿನಿಯರ್ ರವಿಕುಮಾರ್,ನಗರಸಭೆ ಸದಸ್ಯರಾದ ಎಂ.ಸಿ ಶಿವಪ್ರಕಾಶ್, ಶ್ರೀಧರ್,ಕಾಂಗ್ರೆಸ್ ಮುಖಂಡರಾದ ಎಂಎಸ್.ಚಿದಂಬರ್,ಗುರು ಕುಮಾರ್,ಅಸದುಲ್ಲಾಖಾನ್,ಎಚ್.ಕೆ.ರುದ್ರಪ್ಪ, ಮಹೇಶ್ ಕೃಷ್ಣ, ರಾಘವೇಂದ್ರ, ದೀಪಕ್, ವಕೀಲ ಜೆ. ರಾಮಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!