Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ ಮೋದಿ ಮಧ್ಯಪ್ರವೇಶ ಮಾಡೋಕೆ ಆಗಲ್ಲ ಅಂದ್ರೆ, ಮನೆಯಲ್ಲಿರಲಿ: ಚಲುವರಾಯಸ್ವಾಮಿ

ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ನಡುವಿನ ಸಮಸ್ಯೆಯನ್ನು ಬಗೆಹರಿಸಬೇಕು, ಅವರು ಮಧ್ಯ ಪ್ರವೇಶ ಮಾಡೋಕೆ ಆಗಲ್ಲ ಅಂದ್ರೆ ಮನೆಯಲ್ಲಿ ಇರಲಿ, ರಾಜಕಾರಣ ಯಾಕೆ ಮಾಡ್ತಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ  ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಾಜಪೇಯಿ ಅವರು ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿರಲಿಲ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ಮೇಲೆ ಇರೋದು ಕೇಂದ್ರ ಸರ್ಕಾರ.
ಕೇಂದ್ರ ಸರ್ಕಾರವೇ ಎರಡು ರಾಜ್ಯಗಳನ್ನು ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಇಂಡಿಯ ಒಕ್ಕೂಟದ ರಾಜಕೀಯ, ಕಾವೇರಿ ವಿಚಾರ ಸಪರೇಟ್. ಕರ್ನಾಟಕ, ತಮಿಳುನಾಡು ಬೇರೆ ಬೇರೆ ರಾಜ್ಯ.
ತಮಿಳುನಾಡಿನವರು ಅವರ ಹಿತಾಸಕ್ತಿ ನೋಡ್ತಾರೆ. ನಾವು ನಮ್ಮ ಹಿತಾಸಕ್ತಿ ನೋಡ್ತೀವಿ. ರಾಜಕೀಯವನ್ನು ಇವರು ಯಾರ ಜೊತೆ ಆದ್ರು‌ ಮಾಡಿಕೊಳ್ಳಲಿ. ನಾವು ಸಹ ಇಂಡಿಯ ಮೈತ್ರಿಕೂಟದ ಮೂಲಕ ರಾಜಕೀಯವನ್ನು ಮಾಡ್ತೀವಿ. ಅವರು ಎನ್.ಡಿ.ಎ ಮೂಲಕ ಮಾಡಿಕೊಳ್ಳಲಿ, ಆದರೆ ಕಾವೇರಿ ಸಮಸ್ಯೆಯನ್ನು ಸಾಧ್ಯವಾದ್ರೆ ಬಗೆಹರಿಸಲಿ. ಅವರ ಕೈಯಲ್ಲಿ ಆಗದೇ ಇದ್ರೆ, ನಮ್ಮ ರೈತರನ್ನು ಉಳಿಸೋದು ನಮಗೆ ಗೊತ್ತು ಎಂದು ತಿರುಗೇಟು ನೀಡಿದರು.

ಹೀಗಾಗಲೇ ನಾವು ಕಾವೇರಿ ನೀರಿನ ವಿಚಾರದಲ್ಲಿ ಕೋರ್ಟ್‌ಗೆ ಅಪೀಲು ಹೋಗಿದ್ದೇವೆ. ಅ.12ರಂದು CWMA  ಮುಂದೆ ನೀರು ಬಿಡಲ್ಲ ಎಂದು‌ ಹೇಳ್ತೀವಿ. ನಾನು ರೈತರು ಹಾಗೂ ಸಂಘಟನೆಗಳ ಬಗ್ಗೆ ಮಾತಾಡಲ್ಲ.
ನಮ್ಮ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಾರೆ. ನಾವು ನಮ್ಮ ಸಮಸ್ಯೆಯನ್ನು ಕೋರ್ಟ್ ಹಾಗೂ ಪ್ರಾಧಿಕಾರದ ಮುಂದೆ ಹೇಳಬಹುದು ಅಷ್ಟೇ. ಕೇಂದ್ರಸರ್ಕಾರಕ್ಕೆ ಮಧ್ಯ ಪ್ರದೇಶ ಮಾಡುವ ಅವಕಾಶವಿದೆ.
ಬಿಜೆಪಿ ಹಾಗೂ ಜೆಡಿಎಸ್ ಅವರಿಗೆ ಕೃತಜ್ಞತೆ ಇಲ್ವಾ ? ಮಂಡ್ಯದಲ್ಲಿ ಬಂದು ಬಿಜೆಪಿ ಜೆಡಿಎಸ್ ಏನ್ ಮಾಡ್ತಾರೆ?.
ಕುಮಾರಸ್ವಾಮಿ, ಬೊಮ್ಮಾಯಿ ದೆಹಲಿಗೆ ಹೋಗಿ ಪ್ರಧಾನಿಗಳ ಬಳಿ ಮಾತಾಡಬೇಕು. ಕಾವೇರಿ ವಿಚಾರದ ಸಮಸ್ಯೆ ಹೇಳಿ, ಎರಡು ರಾಜ್ಯಗಳ ಸಿಎಂ ಕರೆಸಿ ಸಮಸ್ಯೆ ಬಗೆಹರಿಸಲು ಕೇಳಬೇಕು. ಅವರು ಪ್ರಧಾನಿ ಬಳಿ ಹೇಳಬೇಕಾ ಇಲ್ಲ ಇಲ್ಲಿ, ಟಿವಿಯವರ ಮುಂದೆ ಪ್ರತಿಭಟನೆ ಮಾಡಬೇಕಾ ? ಎಂದು ಹರಿಹಾಯ್ದರು.

ಎಲ್ಲ ನೀರು ಬಿಟ್ಟಿದ್ದಾರೆ

ನಾವು ದೆಹಲಿಗೆ ಹೋಗಿದ್ದೇವೆ, ಎಂಪಿಗಳ ಸಭೆ ಮಾಡಿದ್ದೇವೆ. ಮೂರು ಬಾರಿ ವಿರೋಧ ಪಕ್ಷಗಳ ಸಭೆ ಮಾಡಿದ್ದೀವಿ. ಕೋರ್ಟ್ ಹಾಗೂ ಪ್ರಾಧಿಕಾರದ ಆದೇಶವನ್ನು ಎಲ್ಲಾ ಸಿಎಂಗಳು ಪಾಲಿಸಿದ್ದಾರೆ.
ಇಲ್ಲಿ ಬಂದು ಶೂರ ವೀರನ ರೀತಿ ಭಾಷಣ ಮಾಡುವ ಜೆಡಿಎಸ್ ಬಿಜೆಪಿಯವರು ಎಲ್ಲ ನೀರು ಬಿಟ್ಟಿದ್ದಾರೆ.
ನಮಗಿಂತ ಜಾಸ್ತಿ ರೈತರಿಗೆ ಅನ್ಯಾಯ ಮಾಡಿ ನೀರನ್ನು ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

ರೈತರಿಗೆ ಇನ್ನೂ ಎರಡು ಕಟ್ಟು ನೀರು ಕೊಡ್ತೀವಿ

ನಾವು ಇಲ್ಲಿಯವರೆಗೆ ರೈತರ ಹಿತಾಸಕ್ತಿ ಕಾಪಾಡಿ, ಅಲ್ಪಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ.
ನಾವು ಪೂರ್ಣ ಪ್ರಮಾಣದ ಆದೇಶ ಪಾಲನೆ ಮಾಡದೆ, ಸ್ವಲ್ಪ ಆದೇಶ ಪಾಲನೆ ಮಾಡಿದ್ದೇವೆ ಅಷ್ಟೇ.
ಮಂಡ್ಯ ರೈತರಿಗೆ ಇನ್ನೂ ಎರಡು ಕಟ್ಟು ನೀರು ಕೊಡ್ತೀವಿ, ರಕ್ಷಣೆ ಮಾಡ್ತೀವಿ.
ಎಂಪಿ ಚುನಾವಣೆಯಲ್ಲಿ ಒಂದೇ ಸಲ ಸಾಧನೆ ಮಾಡಲು ಬಿಜೆಪಿ- ಜೆಡಿಎಸ್ ಒಂದಾಗುತ್ತಿವೆ ಎಂದು ವ್ಯಂಗ್ಯವಾಡಿದರು.

ವೋಟ್ ಹಾಕಿಸ್ಕೊಳಕ್ಕೆ ಏನ್ ಮಾತಾಡ್ಬೇಕು ಅದನ್ನ ಮಾತಾಡ್ತಾರೆ

ಅಲ್ಪ ಸಂಖ್ಯಾತರು ಮತಗಳು ಜೆಡಿಎಸ್ ಕೈಹಿಡಿಯಲಿಲ್ಲ ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಕುಮಾರಸ್ವಾಮಿ ಸಾಧನೆ ಏನೂ ಅಂತಾ ನಿಮಗು, ನಮಗು ಗೊತ್ತಿದೆ. ವೋಟ್ ಹಾಕಿಸ್ಕೊಳಕ್ಕೆ ಏನ್ ಮಾತಾಡ್ಬೇಕು ಅದನ್ನ ಮಾತಾಡ್ತಾರೆ. ಈ (ಮಂಡ್ಯ) ಜಿಲ್ಲೆಗೆ, ಕಾವೇರಿ ಅಚ್ಚುಕಟ್ಟಿಗೆ ಕುಮಾರಸ್ವಾಮಿ ಕೊಡುಗೆ ಏನು ? ಇವರ ತಂದೆ ಕೊಡುಗೆಯನ್ನೆ ಎಷ್ಟು ಸಲ ಹೇಳ್ತಾರೆ. ಅವರ ತಂದೆ ಕೊಡುಗೆ ಕೊಟ್ಟಾಯ್ತು, ಜಿಲ್ಲೆ ಜನರು ಕೃತಜ್ಞತೆ ಸಲ್ಲಿಸಿಯಾಯ್ತು. ಕುಮಾರಸ್ವಾಮಿಯವರ ವೈಯಕ್ತಿಕ ಕೊಡುಗೆ ಏನು ? ಪ್ರಶ್ನಿಸಿದರು.

ಹೆಚ್ಡಿಕೆ ದೇವೇಗೌಡರ ಕೊಡುಗೆ ಮೇಲೆ ಕುಮಾರಸ್ವಾಮಿ ರಾಜಕಾರಣ ಮಾಡ್ತಿದ್ದಾರೆ ಅಷ್ಟೇ. ಸಂಕ್ರಾಂತಿ ವೇಳೆಗೆ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅಂತ ಅವರು ರಾತ್ರಿಯೆಲ್ಲ ಕನಸು ಕಾಣೋಕೆ ಹೇಳಿ. ಐದು ವರ್ಷ‌ ಸರ್ಕಾರ ಕಂಪ್ಲೀಟ್ ಮಾಡಿದ್ಮೇಲೆ ಗೊತ್ತಾಗುತ್ತೆ ಎಂದು ಹರಿಹಾಯ್ದರು.

ಶಿವಮೊಗ್ಗ ಗಲಾಟೆಗೆ ಕಾಂಗ್ರೆಸ್ ಸಚಿವರು ಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗಲಾಟೆಗಳು ಹುಟ್ಟುವುದು ಆರ್ ಆರ್ ಎಸ್ ಹಿನ್ನೆಲೆಯಲ್ಲಿ, ಇದಕ್ಕೆಲ್ಲ ಪಿತಾಮಹ ಬಿಜೆಪಿ. ಆರ್ ಎಸ್ ಎಸ್ , ಬಜರಂಗದಳದಲ್ಲಿ ಒಳ್ಳೆಯವರಿದ್ದಾರೆ. ರಾಜಕಾರಣದ ಲಾಭ ಪಡೆಯಲು ಬಿಜೆಪಿ ಈ ಎರಡು ಸಂಸ್ಥೆಗಳನ್ನು  ಉಪಯೋಗಿಸಿಕೊಳ್ತಿದೆ ಎಂದು ದೂರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!