ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 8 ವರ್ಷದ ಅವಧಿಯಲ್ಲಿ ಎಲ್ಲಾ ಸಮುದಾಯದವರಿಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆಂದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ತತ್ವದಂತೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಕೋವಿಡ್ ನಂತಹ ಮಹಾಮಾರಿ ಭಾರತ ಸೇರಿದಂತೆ ಜಗತ್ತನ್ನೇ ತಲ್ಲಣಗೊಳಿಸಿತ್ತು.
ಟೀಕೆ, ಟಿಪ್ಪಣಿಯ ನಡುವೆಯೂ ಭಾರತ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಜಾಗತಿಕ ಮಟ್ಟದಲ್ಲಿ ಭಾರತ ಶ್ಲಾಘನೆಗೊಳಗಾಗುವಂತೆ ಪ್ರಧಾನಿ ಮೋದಿಜಿಯವರು ಮಾಡಿದ್ದಾರೆ.ಒಂದು ವರ್ಷದೊಳಗೆ ಕೋವಿಶೀಲ್ಡ್,ಕೋ ವ್ಯಾಕ್ಸಿನ್ ಲಸಿಕೆಗಳನ್ನು ನೀಡುವ ಮೂಲಕ ಜನರ ಪ್ರಾಣ ಉಳಿಸಿದ್ದಾರೆ ಎಂದರು.
ಸ್ವಚ್ಛ ಭಾರತ್, ಆಯುಷ್ಮಾನ್ ಕಾರ್ಡ್, ಜನಧನ್ ಯೋಜನೆ, ಪಿಎಂ ಕಿಸಾನ್ ಯೋಜನೆ, ಪಿಎಂ ಗರೀಬ್ ಕಲ್ಯಾಣ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಜಲಜೀವನ್ ಮಿಷನ್, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ರೈತರ ಆದಾಯವನ್ನು ಸುಧಾರಿಸಲು ಪ್ರಧಾನಿ ಮೋದಿ ಹಲವು ರೈತಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೇಶದ 12 ಕೋಟಿ ರೈತರಿಗೆ 1.82 ಲಕ್ಷ ಕೋಟಿ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ 6 ಸಾವಿರದ ಜೊತೆಗೆ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದ್ದರು. ಈ ಯೋಜನೆಯಲ್ಲಿ ಕರ್ನಾಟಕದ 53.83 ಲಕ್ಷ ರೈತರಿಗೆ ಕೇಂದ್ರ ಸರ್ಕಾರದಿಂದ ಒಟ್ಟು 8502 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದ 3861 ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ಜಲಾಜೀವನ್ ಮಿಷನ್ ಯೋಜನೆಯಡಿ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮನೆ ಮನೆಗೂ ಶುದ್ಧ ಕುಡಿಯುವ ನೀರು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಮಂಡ್ಯ ಜಿಲ್ಲೆಗೆ 1600 ಕೋಟಿ ಅನುದಾನ ನೀಡಿದ್ದು, ಎರಡು ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಮೋದಿ ಸುಭದ್ರ ಆಡಳಿತ ಹಾಗೂ ಸಮರ್ಥ ನಾಯಕತ್ವಕ್ಕೆ ಇಡೀ ವಿಶ್ವವೇ ಮೆಚ್ಚಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ದಿಗ್ವಿಜಯ ಸಾಧಿಸಲಿದೆ. ಕರ್ನಾಟಕದಲ್ಲೂ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬೆಲೆ ಏರಿಕೆ, ಹಣದುಬ್ಬರ, ಅವೈಜ್ಞಾನಿಕ ಜಿಎಸ್ಟಿ, ನೋಟ್ ಬ್ಯಾನ್, ನಿರುದ್ಯೋಗ, ಕೈಗಾರಿಕೆ ಮುಚ್ಚಿರುವುದು, ರೈತರು ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ಸೇರಿದಂತೆ ಹಲವು ವಿಚಾರಗಳಿಗೆ ಬಿಜೆಪಿ ಮುಖಂಡರು ಸಮರ್ಪಕ ಉತ್ತರ ನೀಡದೆ ಜಾರಿಕೊಂಡರು.
ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ. ಪಿ.ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಸಿ.ಟಿ.ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.