Friday, September 20, 2024

ಪ್ರಾಯೋಗಿಕ ಆವೃತ್ತಿ

ಮನ್ಮುಲ್ ನಿಂದ ”ಪನ್ನೀರ್ ನಿಪ್ಪಟ್ಟು- ನಂದಿನಿ ಸ್ಪೆಷಲ್ ಬರ್ಫಿ” ಮಾರುಕಟ್ಟೆಗೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್)ವತಿಯಿಂದ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ನೂತನ ಉತ್ಪನ್ನಗಳಾದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಬರ್ಫಿಗಳನ್ನು ಸಂಸ್ಥೆಯ ಗಣ್ಯರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಡಾ.ವರ್ಗಿಸ್ ಕುರಿಯನ್ ಸಭಾಂಗಣದಲ್ಲಿ ಮನ್ ಮುಲ್ ಉತ್ಪಾದಿತ ನೂತನ ಉತ್ನನ್ನಗಳ ಬಿಡುಗಡೆ ಸಮಾರಂಭ ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಮಾತನಾಡಿ, ಉತ್ಕೃಷ್ಟ ದರ್ಜೆಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ನಂದಿನಿ ಸಂಸ್ಥೆಯು ದೇಶದ ಹಾಲು ಬಳಕೆದಾರರ ಹೆಮ್ಮೆಯ ಸಂಸ್ಥೆಯಾಗಿದ್ದು, ಇದರ ಅಧೀನ ಸಂಸ್ಥೆಯಾಗಿರುವ ಮನ್ ಮುಲ್ ತನ್ನ ಉತ್ಪನ್ನಗಳನ್ನು ವಿದೇಶಕ್ಕೆ ರಪ್ತು ಮಾಡುವ ಯೋಜನೆ ಹೊಂದಿದೆ ಎಂದರು.

ನಂದಿನಿ ಉತ್ಪನ್ನಗಳಿಗೆ ರಾಜ್ಯ, ಅಂತರರಾಜ್ಯ ಹಾಗೂ ವಿದೇಶಗಳಲ್ಲೂ ಗ್ರಾಹಕರಿದ್ದು, ನಮ್ಮ ನೂತನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಉದ್ಧೇಶದಿಂದ ಮಾನ್ಯತೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಮನ್ ಮುಲ್ ಭವಿಷ್ಯದಲ್ಲಿ ಮತ್ತಷ್ಟು ಉತ್ಪನ್ನಗಳನ್ನು ತಯಾರಿಸುವ ಮೂಲಕ ವಿದೇಶಿ ಮಾರುಕಟ್ಟೆ ಪ್ರವೇಶಿಸಲಿದೆ, ಕಳೆದ ಸಾಲಿನಲ್ಲಿ 1,553 ಕೋಟಿ ರೂ. ವಹಿವಾಟು ನಡೆಸಿರುವ ನಮ್ಮ ಸಂಸ್ಥೆಯ ಪ್ರಸಕ್ತ ಸಾಲಿನಲ್ಲಿ 2,000 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದ್ದು, ಇಂದು ಬಿಡುಗಡೆಗೊಳಿಸಿರುವ ನೂತನ ಉತ್ಪನ್ನಗಳಾದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಬರ್ಫಿಗಳನ್ನು ಖರೀದಿಸುವ ಮೂಲಕ ಗ್ರಾಹಕರು ಸಂಸ್ಥೆಯ ಬಲವರ್ಧನೆಗೆ ಸಹಕಾರಿಯಾಗಬೇಕೆಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಕೋವಾ ಹಾಗೂ ಬೆಳ್ಳುಳ್ಳಿ, ವೀಳ್ಯೆದೆಲೆ ಹಾಗೂ ಒಗ್ಗರಣೆ ಬಳಸಿ ತಯಾರಿಸುವ ದೇಶಿ ಮಾದರಿ ತುಪ್ಪ ತಯಾರಿಕೆ ಸಂಸ್ಥೆ ಮುಂದಾಗಲಿದ್ದು, ಗ್ರಾಹಕರಿಗೆ ಪರಿಪೂರ್ಣ ನೈಜ್ಯತೆಯ ಉತ್ಪನ್ನಗಳನ್ನು ಪೂರೈಸುವ ಗುರಿ ನಮ್ಮದಾಗಿದೆ ಎಂದರು.

ಹಾಲು ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ 140 ಬಗೆಯ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅಗತ್ಯವಾಗಿ ಸ್ವಾದಕರ ಹಾಗೂ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸಲಾಗುವುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಬೋರೇಗೌಡ ಮಾತನಾಡಿ, ಇಂದು 2 ನೂತನ ಉತ್ಪನ್ನಗಳನ್ನು ಮಾರುಕಟ್ಟೆ ಪರಿಚಯಿಸಲಾಗುತ್ತಿದೆ. ಪೌಷ್ಠಿಕಾಂಶಯುಕ್ತ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಲು ಮುಂದಾಗಬೇಕು. ಆ ಮೂಲಕ ಜಿಲ್ಲೆಯ ಹೈನುಗಾರರ ಅಭ್ಯುದಯಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಯು.ಸಿ ಶಿವಕುಮಾರ್, ರೂಪ, ಮಾರುಕಟ್ಟೆ ವಿಸ್ತರಣಾಧಿಕಾರಿ ಪ್ರದೀಪ್, ಸಂಸ್ಥೆಯ ಆಡಳಿತ ವಿಭಾಗದ ವ್ಯವಸ್ಥಾಪಕ ಡಾ.ಅಕಲಪ್ಪ ರೆಡ್ಡಿ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!