Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ರೈತರ ಬದುಕು ಹಸನುಗೊಳಿಸುವುದು ನನ್ನ ಗುರಿ: ನರೇಂದ್ರಸ್ವಾಮಿ

ಮಳವಳ್ಳಿ ತಾಲ್ಲೂಕಿನ ಬಿಜಿಪುರ ಹೋಬಳಿ ವ್ಯಾಪ್ತಿಯ ಜಮೀನುಗಳಲ್ಲಿ ಹಸಿರು ನೋಡುವುದರ ಜೊತೆಗೆ ರೈತರ ಬದುಕನ್ನು ಹಸನು ಮಾಡುವ ಜವಾಬ್ದಾರಿ ನನ್ನದಾಗಿದೆ, ಸಾವಿರಾರು ಎಕರೆಯಲ್ಲಿ ತೋಟಗಾರಿಕೆ ಮತ್ತು ಕೃಷಿ ಪದ್ದತಿಯ ಬೆಳೆಗಳನ್ನು ಬೆಳೆಯುವುದರಿಂದ ತಾಲ್ಲೂಕಿನಲ್ಲಿ ಕಾರ್ಖಾನೆಗಳು ತಲೆ ಎತ್ತಲಿದೆ, ಈಗಾಗಲೇ ಒಂದು ಕಾರ್ಖಾನೆ ಪ್ರಾರಂಭಗೊಂಡಿದೆ, ಇದರಿಂದ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ, ಚೊಟ್ಟನಹಳ್ಳಿಯಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಪೂರಿಗಾಲಿ ಹನಿ ನೀರಾವರಿ ಯೋಜನೆಯ ಫಲಾನುಭವಿಗಳ ಜೊತೆ ಯೋಜನೆಯ ಉದ್ದೇಶ ಮತ್ತು ಆಧುನಿಕ ಕೃಷಿ ಪದ್ದತಿಯ ಬಗ್ಗೆ ಚರ್ಚೆ ಹಾಗೂ ಫಲಾನುಭವಿಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮೂಹಿಕ ಬೆಳೆ ಬೆಳೆದರೇ ಬೆಳೆದ ಬೆಳೆಯನ್ನು ಖರೀದಿಸಲು ತಾಲ್ಲೂಕಿನಲ್ಲಿಯೇ ಮಾರುಕಟ್ಟೆ ನಿರ್ಮಾಣವಾಗುತ್ತದೆ, ಹೆಚ್ಚು ಬೆಲೆಗೆ ಫಸಲನ್ನು ಮಾರಾಟ ಮಾಡಿದರೇ ಲಾಭಾಂಶ ರೈತರಿಗೆ ನೇರವಾಗಿ ಸಿಗಲಿದೆ, ತಾವು ಬೆಳೆದ ಬೆಳೆಗೆ ಉತ್ತಮ ಬೆಳೆ ಸಿಗದಿದ್ದರೇ ಬೆಳೆಗಳನ್ನು ಸಂಗ್ರಹಣೆ ಮಾಡಲು ಶಿಥಲೀಕರಣ ಶೇಖರಣಾ ಘಟಕವನ್ನು ಸ್ಥಾಪಿಸಿ ಉತ್ತಮ ಬೆಲೆ ಸಿಕ್ಕಾಗ ಮಾರುವ ಅವಕಾಶವು ಈ ಯೋಜನೆಯಲ್ಲಿದೆ, ಹಲವು ಘಟಕಗಳು ಸ್ಥಾಪನೆಯಾಗುವುದರಿಂದ ಸ್ಥಳೀಯ ಯುವಕರಿಗೆ ಉದ್ಯೋಗವು ದೊರಕಲಿದೆ ಎಂದು ವಿವರಿಸಿದರು.

ಬಿಜಿಪುರ ವ್ಯಾಪ್ತಿಗೆ ನೀರು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರದಿಂದ 593 ಕೋಟಿ ರೂ ವೆಚ್ಚದಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ 5 ವರ್ಷಗಳ ಕಾಲ ಮಂದಗತಿಯಲ್ಲಿ ಸಾಗಿದ ಕಾಮಗಾರಿಗೆ ಚುರುಕುಗೊಳಿಸಿ ಅಂತಿಮ ಘಟ್ಟಕ್ಕೆ ತರಲಾಗಿದೆ, ಹನಿ ನೀರಾವರಿ ಯೋಜನೆಯ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹನಿ ನೀರಾವರಿ ಯೋಜನೆಗೆ ಒಳಪಡುವ ಒಂದು ಸಾವಿರ ಎಕರೆಗೆ ಒಂದು ಬ್ಲಾಕ್ ಮಟ್ಟದ ಸೊಸೈಟಿ ರಚಿಸಲಾಗುತ್ತದೆ. ಒಂದು ಸಾವಿರ ಎಕರೆಯಲ್ಲಿ ಏಕ ಬೆಳೆ ಬೆಳೆಯಬೇಕಾಗುತ್ತದೆ, ಬೆಳೆಯ ನಿರ್ಧಾರವನ್ನು ರೈತರೇ ನಿರ್ಧಾರ ಮಾಡಬೇಕಾಗುತ್ತದೆ, ಬಹುಜನರ ತೀರ್ಮಾನದೊಂದಿಗೆ ಬೆಲೆ ಆಯ್ಕೆ ಮಾಡಿ ಸೊಸೈಟಿಯ ಮೂಲಕ ಆಧುನಿಕ ಯಂತ್ರೋಪಕರಣದ ಮೂಲಕ ಕೃಷಿ ಮಾಡಲಾಗುತ್ತದೆ, ಯಂತ್ರದ ಮೂಲಕವೇ ನೀರು ಮತ್ತು ಗೊಬ್ಬರವನ್ನು ನೀಡುವುದರಿಂದ ಕಡಿಮೆ ಶ್ರಮದ ಜೊತೆಗೆ ಸಮಯವು ಉಳಿತಾಯವಾಗುತ್ತದೆ, ವ್ಯವಸಾಯದ ಎಲ್ಲಾ ಜವಾಬ್ದಾರಿಯನ್ನು ಸೊಸೈಟಿಗಳೇ ನಿರ್ವಹಣೆ ಮಾಡುವುದರಿಂದ ರೈತರು ಶ್ರಮ ಪಡುವ ಆಗತ್ಯವಿಲ್ಲ ಎಂದು ಹೇಳಿದರು.

ಸಾಮೂಹಿಕ ಬೆಳೆ ಬೆಳೆದರೇ ಮಾತ್ರ ಯೋಜನೆ ಉಳಿಯಲು ಸಾಧ್ಯವಾಗುತ್ತದೆ, ಯೋಜನೆ ಯಶಸ್ವಿಗೆ ರೈತರು ಸಹಕಾರ ನೀಡಬೇಕು, ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು, ದೇಶದ ರೈತರು ಮಳವಳ್ಳಿ ಕೃಷಿಯತ್ತ ಮುಖ ಮಾಡಿ ಅಧ್ಯಯನ ಮಾಡುವ ಸನ್ನಿವೇಶ ಎದುರಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿ.ಸಿ.ಫಾರಂನ ಕೃಷಿ ವಿಜ್ಞಾನಿ ಡಾ. ವೆಂಕಟೇಶ್, ಪ್ರಕಾಶ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಾಂತರಾಜು. ಬೇಸಾಯ ತಜ್ಞ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!