Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಕೃತಿ ಮತ್ತು ಮನುಷ್ಯ | ಯಾರು ಒಳ್ಳೆಯವರು ಮತ್ತು ಏಕೆ ?

ವಿವೇಕಾನಂದ ಎಚ್. ಕೆ.

ಪ್ರಕೃತಿಯೂ ಸಹ ಅನ್ಯಾಯ ಮಾಡುತ್ತದೆಯೇ ? ಕೆಲವೊಮ್ಮೆ ವಂಚಿಸುತ್ತದೆಯೇ ? ಹಲವೊಮ್ಮೆ ಶಿಕ್ಷಿಸುತ್ತದೆಯೇ ? ಅಥವಾ ಪ್ರಕೃತಿ ಒಂದು ನಿರ್ಜೀವ – ನಿರ್ಭಾವುಕ ಶಕ್ತಿಯೇ ? ಅದು ನಿಯಂತ್ರಿತ ಅಥವಾ ಅನಿಯಂತ್ರಿತ ಕಾರ್ಯಚಟುವಟಿಕೆಗಳನ್ನು ಹೊಂದಿದೆಯೇ ? ಪ್ರಕೃತಿಯ ಫಲಿತಾಂಶ ಅದೃಷ್ಟ ದುರಾದೃಷ್ಟವನ್ನು ಅವಲಂಬಿಸಿದೆಯೇ ?…..

ಒಂದು ಮನುಷ್ಯ ಪ್ರಾಣಿಯಾಗಿ ಈ ಬಗ್ಗೆ ಯೋಚಿಸಿದಾಗ……..

ಮೊರಾಕೊ ಭೂಕಂಪದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸತ್ತಿರುವ ಸುದ್ದಿಯನ್ನು ನೋಡಿದಾಗ…………

ಪ್ರಕೃತಿ ಮನುಷ್ಯನ ಜೀವಶಕ್ತಿ ಎಂಬುದು ನಿರ್ವಿವಾದ. ಪ್ರಕೃತಿಯ ಕೃಪೆಯಿಂದಲೇ ನಾವು ಹುಟ್ಟಿರುವುದು ಮತ್ತು ಬದುಕಿರುವುದು. ಆದರೆ ಪ್ರಕೃತಿ ನಮ್ಮೆಲ್ಲರ ಭಾವನೆಯ ಅಥವಾ ಕಾಲ್ಪನಿಕ ದೈವಶಕ್ತಿಯಲ್ಲ. ಅದಕ್ಕೆ ತನ್ನದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿಲ್ಲ. ಅದರ ಕ್ರಿಯೆ ಪ್ರತಿಕ್ರಿಯೆಗಳು ಸಹ ಅದರ ನಿಯಂತ್ರಣ ಮೀರಿ ಸಹಜವಾಗಿ ಘಟಿಸುತ್ತದೆ. ನ್ಯಾಯವೋ ಅನ್ಯಾಯವೋ ಅದರ ಅರಿವಿಗೆ ಬರುವುದಿಲ್ಲ…….

ಮಳೆಯೋ, ಚಂಡಮಾರುತವೋ, ಜ್ವಾಲಾಮುಖಿಯೋ, ಭೂಕಂಪವೋ ತನಗಾದ ಒತ್ತಡವೋ ಅಥವಾ ಸಹಜವೋ ಒಟ್ಟಿನಲ್ಲಿ ತಾನು ತನ್ನ ಕ್ರಿಯೆಯ ಮೂಲಕ ಮುಂದುವರೆಯುತ್ತದೆ. ಅದರಿಂದ ಯಾರಿಗೆ ಬೇಕಾದರೂ ಒಳ್ಳೆಯದು ಆಗಬಹುದು ಅಥವಾ ಕೆಟ್ಟದ್ದು ಆಗಬಹುದು. ಅದಕ್ಕೆ ಪ್ರಕೃತಿ ಹೊಣೆಯಾಗುವುದಿಲ್ಲ…….

ಮನುಷ್ಯನ ಸ್ವಯಂಕೃತಾಪರಾಧದಿಂದ ಆಗಿರಬಹುದು ಅಥವಾ ಆತ ಪ್ರಕೃತಿಯ ಮೇಲೆ ನಡೆಸುವ ದೌರ್ಜನ್ಯದ ಕಾರಣವೇ ಇರಬಹುದು ಅಥವಾ ಸ್ವಯಂ ಒತ್ತಡವೇ ಇರಬಹುದು ಪ್ರಕೃತಿ ಪ್ರತಿಕ್ರಿಯಿಸಿದರೆ ಅದರ ಪರಿಣಾಮ ಮಕ್ಕಳೋ, ಮಹಿಳೆಯರೋ, ಹಿರಿಯರೋ, ರೋಗಿಗಳೋ, ಅನಾಥರೋ, ದೈವಭಕ್ತರೋ ಯಾರೇ ಆದರೂ ಅದಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ…..

ಚಂಡಮಾರುತ ಅಥವಾ ಪ್ರವಾಹ ಉಂಟಾದರೆ ಮಂದಿರವೋ, ಮಸೀದಿಯೋ, ಚರ್ಚೋ, ಶಾಲೆಯೋ, ಆಸ್ಪತ್ರೆಯೋ, ಶೌಚಾಲಯವೋ ಕೊಚ್ಚಿಕೊಂಡು ಹೋಗುತ್ತದೆ. ಹಾಗೆಯೇ ಮೂರು ವರ್ಷದ ಮಗುವಿಗೆ ಕ್ಯಾನ್ಸರ್ ಬರಬಹುದು, 25 ವರ್ಷದ ಯುವಕ ಹೃದಯಾಘಾತಕ್ಕೆ ಒಳಗಾಗಬಹುದು, ದುಶ್ಚಟಗಳ ದಾಸ ನೂರು ವರ್ಷ ಬದುಕಬಹುದು. ಇದ್ಯಾವುದಕ್ಕೂ ಪ್ರಕೃತಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ……

ಗಾಳಿ ನೀರು ಬೆಳಕು ಎಲ್ಲವೂ ಪ್ರಕೃತಿಯ ಕೊಡುಗೆ ಮತ್ತು ಅದು ಉಚಿತವಾಗಿ ನಮಗೆ ನೀಡುತ್ತದೆ ಎಂಬುದು ನಿಜ. ಆದರೆ ಅದು ಅರಿವಿನಿಂದ ಪ್ರಜ್ಞಾಪೂರ್ವಕವಾಗಿ ಅಥವಾ ಜವಾಬ್ದಾರಿಯಿಂದ ಅಥವಾ ಒಂದು ಉದ್ದೇಶದಿಂದ ನೀಡುವುದಿಲ್ಲ. ತನ್ನ ಪಾಡಿಗೆ ತಾನು ಪ್ರತಿಕ್ರಿಯಿಸುತ್ತದೆಯಷ್ಟೇ. ಅದರ ಮಹತ್ವ ಅರಿತು ನಾವು ಅದನ್ನು ಗೌರವಿಸುತ್ತೇವೆಯೇ ಹೊರತು ಪ್ರಕೃತಿ ಒಂದು ದೈವಿಕ ಶಕ್ತಿಯಾಗಿ ಮನುಕುಲದ ಉಳಿವಿಗಾಗಿ ಕೆಲಸ ಮಾಡುವುದಿಲ್ಲ….

ಅದಕ್ಕಾಗಿಯೇ ಮನುಷ್ಯ ಭಾವನಾತ್ಮಕವಾಗಿ ಪ್ರಕೃತಿಯನ್ನು ದೈವತ್ವಕ್ಕೇರಿಸಿದರೂ ಸಹ ಅದರ ಮೇಲೆ ನಿಯಂತ್ರಣ ಹೊಂದಲು ಸದಾ ಪ್ರಯತ್ನಿಸುತ್ತಿರುತ್ತಾನೆ. ಹಾಗೆಯೇ ಪ್ರಕೃತಿ ಮಲಿನಗೊಂಡರೆ ಮನುಷ್ಯ ಆರೋಗ್ಯಕ್ಕೆ ಅಪಾಯ ಎಂದು ಅದನ್ನು ಸಾಧ್ಯವಾದಷ್ಟು ಶುದ್ದವಾಗಿಡಲು ಪ್ರಯತ್ನಿಸುತ್ತಾನೆ.‌ ಅದು ಸಾಧ್ಯವಾಗುತ್ತಿಲ್ಲ ಎಂಬುದು ಸಹ ಅಷ್ಟೇ ವಾಸ್ತವ…

ಮನುಷ್ಯನೇನು ಅತ್ಯಂತ ಒಳ್ಳೆಯ ಜೀವಿಯೇನಲ್ಲ. ಆದರೆ ಪ್ರಕೃತಿಯ ಪ್ರಾಣಿಗಳಲ್ಲಿ ಬುದ್ದಿವಂತ ಜೀವಿ. ತನ್ನ ಅಗತ್ಯಕ್ಕೆ ತಕ್ಕಂತೆ ಪ್ರಕೃತಿಯನ್ನು ಬಳಸಿಕೊಳ್ಳುತ್ತಾನೆ. ಆದರೆ ಅದು ಬರಬರುತ್ತಾ ಸ್ವಾರ್ಥ ದುರಾಸೆಯ ಹಂತ ತಲುಪಿ ಪ್ರಕೃತಿಯ ನಾಶವನ್ನು ಯಥೇಚ್ಛವಾಗಿ ಮಾಡುತ್ತಿದ್ದಾನೆ. ಅದರ ದುಷ್ಪರಿಣಾಮ ಅನುಭವಿಸುತ್ತಿದ್ದಾನೆ……

ಮೊರಾಕೊ ಭೂಕಂಪ, ಜಪಾನಿನ ನಿರಂತರ ಭೂ ಕದಲುವಿಕೆ, ಇಂಡೋನೇಷ್ಯಾ ಜ್ವಾಲಾಮುಖಿ, ಅಮೆರಿಕದ ಚಂಡಮಾರುತಗಳು, ಭಾರತದ ಮೇಘಸ್ಪೋಟ ಎಲ್ಲವೂ ಆ ಸಂದರ್ಭದಲ್ಲಿ ಮನುಷ್ಯನಿಗೆ ಆಗುವ ಅನಾಹುತವನ್ನು ಗಮನಿಸಿದಾಗ ಪ್ರಕೃತಿಯ ಮೇಲೆ ತುಸು ಕೋಪ ಉಂಟಾಗುವುದು ಸಹಜ. ಆದರೆ ಪ್ರಕೃತಿಗೆ ಅರಿವಿಲ್ಲದೇ ಸಂಭವಿಸುವ ಘಟನೆಗಳಿವು. ಆದ್ದರಿಂದ ಅದು ಕ್ಷಮೆಗೆ ಅರ್ಹ…..

ಆದರೆ ಯುದ್ದಗಳು, ಹೊಡೆದಾಟಗಳು, ಅಣುಬಾಂಬುಗಳು, ಕೋಮು ಗಲಭೆಗಳು, ಬಹಳಷ್ಟು ಅಪಘಾತಗಳು, ಕೊಲೆಗಳು, ಆತ್ಮಹತ್ಯೆಗಳು ಮನುಷ್ಯ ಉದ್ದೇಶಪೂರ್ವಕವಾಗಿಯೇ ತನ್ನ ಅವಸಾನಕ್ಕೆ ಕಾರಣವಾಗುವನು.‌ ಅದಕ್ಕಾಗಿ ಆತ ಕ್ಷಮೆಗೆ ಅನರ್ಹ. ಶಿಕ್ಷೆಗೆ ಅರ್ಹ. ದುರಾದೃಷ್ಟವಶಾತ್ ಕೆಟ್ಟವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ಒಳ್ಳೆಯವರು ಸುಖವಾಗಿರುತ್ತಾರೆ ಎಂಬ ಲೋಕದ ನಿಯಮ ಅಷ್ಟಾಗಿ ಜಾರಿಯಲ್ಲಿಲ್ಲ. ಇಲ್ಲಿ ಎಲ್ಲವೂ ಸಾಧ್ಯ ಎಂಬುದೇ ಆಧುನಿಕ ಸಮಾಜದ ದುರಂತ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!