Thursday, September 19, 2024

ಪ್ರಾಯೋಗಿಕ ಆವೃತ್ತಿ

ನೆಹರೂ ಹತ್ಯೆಗೆ ನಡೆದಿದ್ದವು ನಾಲ್ಕು ವಿಫಲ ಯತ್ನಗಳು!

ನೆಹರೂ ಹತ್ಯೆಗೆ ನಡೆದಿದ್ದವು ನಾಲ್ಕು ವಿಫಲ ಯತ್ನಗಳು! ಕೊಲ್ಲಲು ಯತ್ನಿಸಿದ್ದವರು ಯಾರು?

– ಊರ್ವಿಶ್ ಕೊಥಾರಿ, ಹಿರಿಯ ಅಂಕಣಕಾರರು
(ಕೃಪೆ: ದಿ ಪ್ರಿಂಟ್)

ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ


ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ಸದಾ ಕಾಲ ಬಲಪಂಥೀಯ ತೀವ್ರವಾದಿಗಳ ‘ಹಾಟ್ ಟಾರ್ಗೆಟ್ ಆಗಿದ್ದಂತವರು. ಅವರ ಸಾಧನೆ ಮತ್ತು ವರ್ಚಸ್ಸುಗಳು ನಮ್ಮ ದೇಶದಲ್ಲಿ ಅತಿಹೆಚ್ಚು ‘ಫೇಕ್ ನ್ಯೂಸ್ನ’ ಬಲಿಪಶುಗಳು ಎಂದರೂ ತಪ್ಪಲ್ಲ. ಫೇಕ್‌ನ್ಯೂಸ್ ಎಂಬ ಪದ ಹುಟ್ಟುವುದಕ್ಕೆ ಮೊದಲಿನಿಂದಲೇ ಅವರ ಮೇಲೆ ಫೇಕ್‌ನ್ಯೂಸ್ ದಾಳಿ ಶುರುವಾಗಿತ್ತು. ಆದರೆ ಅವರ ಹತ್ಯಗೆ ಹಲವು ಯತ್ನಗಳು ನಡೆದಿದ್ದವು ಅನ್ನೋದು ನಮ್ಮಲ್ಲಿ ಎಷ್ಟು ಜನರಿಗೆ ಗೊತ್ತು?

ನೆಹರೂ ಅವರನ್ನು ಹತ್ಯೆ ಮಾಡಲು ನಡೆಸಿದ ಹುನ್ನಾರಗಳನ್ನು ಗಾಂಧಿ ಹತ್ಯೆಯ ಯತ್ನಗಳಿಗೆ ಹೋಲಿಸಲಾಗುವುದಿಲ್ಲ. ಆದರೆ ಅವು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಡ್‌ಲೈನ್‌ಗಳಾಗಿದ್ದವು ಅನ್ನೋದು ಗಮನಾರ್ಹ.

ನೆಹರೂ ಮತ್ತು ಸರ್ದಾರ್ ಪಟೇಲ್‌ರನ್ನು ಕೊಲೆ ಮಾಡುವ ಮೊದಲ ಯತ್ನ 1948ರ ಜುಲೈನಲ್ಲಿ ನಡೆದಿದ್ದರ ಬಗ್ಗೆ ವರದಿಯಾಗಿತ್ತು. ಪತ್ರಿಕಾ ವರದಿಯ ಪ್ರಕಾರ, ಮೂರು ಜನರ ತಂಡವೊಂದು ನೆಹರೂ ಮತ್ತು ಸರ್ದಾರ್ ಪಟೇಲರನ್ನು ಕೊಲ್ಲಲು ದೆಹಲಿಗೆ ತೆರಳುವಾಗ, ಬಿಹಾರದ ಲಾಖಿಸರಾಯ್‌ನ ಧರ್ಮಶಾಲಾದಲ್ಲಿ ಬಂಧಿಸಲಾಗಿತ್ತು. ಅದೇ ತಂಡದ ಸದಸ್ಯನೊಬ್ಬ ಮುಂಘೇರ್ ಪಟ್ಟಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಿಗೆ ಈ ಮಾಹಿತಿ ನೀಡಿದ್ದರಿಂದ ಅವರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದರು. ಎರಡು ಪಿಸ್ತೂಲ್ ಮತ್ತು ಎರಡು ರಿವಾಲ್ವರ್, ಕೆಲವು ರೈಫಲ್‌ಗಳು ಮತ್ತು ಕಚ್ಚಾ ಬಾಂಬ್‌ಗಳೊಂದಿಗೆ ಮೂವರು ವ್ಯಕ್ತಿಗಳು ತಮ್ಮ ಕಾರ್ಯಸಾಧನೆಗಾಗಿ ದೆಹಲಿಯತ್ತ ಹೊರಟಿದ್ದಾರೆ ಎಂದು ಆತ ಹೇಳಿದ್ದ. (ಪತ್ರಿಕಾ ವರದಿ: Alleged Plot to Kill Leaders: Three Arrested in Bihar’, The Times of India, 31 July 1948, P1)

ಅಂದಿನ ಗೃಹಮಂತ್ರಿಯಾಗಿದ್ದ ಸ್ವತಃ ಸರ್ದಾರ್ ಪಟೇಲರು ಕೂಡಾ ನೆಹರೂ ಅವರ ಭದ್ರತೆಯ ಬಗ್ಗೆ ವಿಪರೀತ ಚಿಂತಿತರಾಗಿದ್ದರು. ಪಾಕಿಸ್ತಾನದ ನಾಯಕ ಲಿಯಾಖತ್ ಅಲಿ ಖಾನ್ ಅವರು 1950ರ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ನೆಹರೂ ಅವರ ಭದ್ರತೆಯ ಕುರಿತು ಆತಂಕ ವ್ಯಕ್ತಪಡಿಸುತ್ತಾ ಪಟೇಲರು “ಮುಸಲ್ಮಾನರ (ದೇಶ ವಿಭಜನೆಯಿಂದಾಗಿ ಹಲ್ಲೆ, ಜೀವಭಯಕ್ಕೆ ಸಿಲುಕಿದ್ದ) ಹಕ್ಕುಗಳಿಗಾಗಿ ಜವಾಹರ ಲಾಲ್ ನೆಹರೂ ಅವರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಗಾಂಧೀಜಿಗೆ ಆದಂತಹ ಅಪಾಯವೇ ಎಲ್ಲಿ ಅವರಿಗೂ ಎದುರಾಗುತ್ತೋ ಎಂಬ ಚಿಂತೆಯಲ್ಲಿ ನಾನು ರಾತ್ರಿಯ ಹೊತ್ತು ನಿದ್ದೆ ಮಾಡದೆ ಎಚ್ಚರವಾಗಿ ಚಡಪಡಿಸುತ್ತಿರುತ್ತೇನೆ” ಎಂದಿದ್ದರು. (ಈ ಮಾತಿನ ಉಲ್ಲೇಖವನ್ನು ಸರ್ದಾರರ ಮಗಳು ಹಾಗೂ ಆಪ್ತ ಸಹಾಯಕಿಯೂ ಆಗಿದ್ದ ಮನಿಬೆನ್ ಅವರ ದಿನಚರಿಯ 5 ಏಪ್ರಿಲ್ 1950ರ ಪುಟದಿಂದ ತೆಗೆದುಕೊಂಡು ರಾಜಮೋಹನ್ ಗಾಂಧಿಯವರು ತಮ್ಮ Patel: A Life, P498, ಕೃತಿಯಲ್ಲಿ ಉಲ್ಲೇಖಿಸಿದ್ದಾರೆ)

ಅದೇ ವರ್ಷದ ನಂತರದ ದಿನಗಳಲ್ಲಿ ಸರ್ದಾರ್ ಪಟೇಲರು ಸಂಸತ್ತಿನಲ್ಲಿ ಹೀಗೆ ಹೇಳಿದ್ದರು “ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದ ಅದೇ ಗುಂಪಿನ ಜನರ ಮುಂದಿನ ಗುರಿ ಪಂಡಿತ್ ನೆಹರೂ ಅವರಾಗಿದ್ದರು” (ಪತ್ರಿಕಾ ವರದಿ: ‘Govt. Determined to Meet All Challenges: Sardar’s Statement in Parliament’, The Times of India, 3 August 1950, P1)

ಸಂಸತ್ ಸದಸ್ಯ ಎಚ್.ಎನ್.ಕುಂಝ್ರು ಅವರು ನಾಗರಿಕ ಸ್ವಾತಂತ್ರ್ಯಗಳ ‘ಮೊಟಕುಗೊಳಿಸುವಿಕೆ’ಯ ವಿರುದ್ಧ ಪ್ರತಿಭಟಿಸಿ ಮಾತನಾಡಿದ್ದರು. ಅವರಿಗೆ ಉತ್ತರಿಸುತ್ತಾ ಸರ್ದಾರರು, “ಎರಡು ವರ್ಗದ ಜನರಿದ್ದಾರೆ – ಹಿಂದೂತ್ವ ಕೋಮುವಾದದ ಮೂಲಕ ಅಸ್ತಿತ್ವ ಹುಡುಕುವ ವರ್ಗ ಒಂದುಕಡೆಗಾದರೆ, ಸಮಾಜದಲ್ಲಿ ಹಿಂಸೆ ಮತ್ತುವಿಘಟನೆಯನ್ನು ಸೃಷ್ಟಿಸುವ ಮೂಲಕ ಕಮ್ಯುನಿಸ್ಟ್ ಕ್ರಾಂತಿಯನ್ನು ಬಯಸುತ್ತಿರುವ ವರ್ಗ ಮತ್ತೊಂದು ಕಡೆ. ಇವರಿಂದಾಗಿ ಬಹಳ ಕಷ್ಟಪಟ್ಟು ನಾವು ಪಡೆದಿರುವ ಸ್ವಾತಂತ್ರ್ಯವು ಆಘಾತಕ್ಕೊಳಗಾಗುತ್ತಿದೆ” ಎಂದು ಆರೋಪಿಸಿದ್ದರು. ಮುಂದುವರೆದು “ಕೆಲವರ ಅಪರಾಧಿಕ ಸ್ವಾತಂತ್ರ್ಯಗಳಿಗೋಸ್ಕರ” ಲಕ್ಷಾಂತರ ಜನರ ನಾಗರಿಕ ಸ್ವಾತಂತ್ರ್ತವನ್ನು ಅಪಾಯಕ್ಕೆ ತಳ್ಳಲು ಸರ್ಕಾರ ಬಯಸುವುದಿಲ್ಲ ಎಂದು ಹೇಳಿದ್ದರು. (ಪತ್ರಿಕಾ ವರದಿ: Govt. Determined to Meet All Challenges: Sardar’s Statement in Parliament’, The Times of India, 3 August 1950, P1)

ಮತ್ತೊಂದು ವರದಿಯ ಪ್ರಕಾರ, ಸರ್ದಾರ್ ಪಟೇಲರು “ಹಿಂದೂ ತೀವ್ರಗಾಮಿ ಸಂಘಟನೆಯಾದ ಅಖಿಲ ಭಾರತ (ಹಿಂದೂ) ಮಹಾಸಭಾದ ಮಾಜಿ ಅಧ್ಯಕ್ಷ ಎಲ್.ಪಿ. ಬೋಪಟ್‌ಕರ್ ಎಂಬಾತ, ಕಳೆದ ಚಳಿಗಾಲದ ಅವಧಿಯಲ್ಲಿ ಪಶ್ಚಿಮ ಪಾಕಿಸ್ತಾನದಲ್ಲಿ ಉಂಟಾಗಿದ್ದ ಗಲಭೆಯ ಸಂದರ್ಭದಲ್ಲಿ ನಮ್ಮ ಪ್ರಧಾನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಗೆ ನೀಡಿದ್ದಾನೆ” ಎಂದು ಹೇಳಿದ್ದರು. (ಪತ್ರಿಕಾ ವರದಿ:‘Patel Charges Hindus Plotted To Kill Nehru’, The Washington Post, 3 August 1950, P1)

ಇದಲ್ಲದೆ, ನೆಹರೂ ಪ್ರಯಾಣಿಸುತ್ತಿದ್ದ ರೈಲನ್ನು ಬಾಂಬ್‌ನಿಂದ ಸ್ಫೋಟಿಸುವ ವಿಫಲ ಯತ್ನವನ್ನು 1953 ಮೇ 4ರಂದು ಸರಿಯಾದ ಸಮಯದಲ್ಲಿ ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚುವ ಮೂಲಕ ವಿಫಲಗೊಳಿಸಲಾಗಿತ್ತು ಎಂದು ವರದಿಯಾಗಿತ್ತು. ಪತ್ರಿಕಾ ವರದಿಯ ಪ್ರಕಾರ, “ಮಂಗಳವಾರದ ನಸುಕಿನ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಕಲ್ಯಾಣ್ ಬಳಿ ಅನುಮಾನಾಸ್ಪದವಾಗಿ ನುಸುಳಿ ಹೋಗುತ್ತಿರುವುದನ್ನು ನೋಡಿದ ಕೇಂದ್ರ ರೈಲ್ವೆ ರಕ್ಷಣಾ ಪಡೆಯ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗುಂಡು ಹಾರಿಸಿದ್ದರು. ಜವಾಹರ್ ಲಾಲ್ ನೆಹರೂ ಅವರು ಬಾಂಬೆಗೆ ತೆರಳುತ್ತಿದ್ದ ಅಮೃತ್ಸರ ಎಕ್ಸ್‌ಪ್ರೆಸ್ ರೈಲು ಅದೇ ಹಳಿಯಲ್ಲಿ ಸಂಚರಿಸಲು ಇನ್ನು ಹತ್ತು ನಿಮಿಷವಿರುವಾಗ ಈ ಘಟನೆ ಸಂಭವಿಸಿತ್ತು.” (ಪತ್ರಿಕಾ ವರದಿ: ‘Prime Minister Has Narrow Escape’, The Times of India, 5 May 1953, P1). “ಶಂಕುವಿನಾಕಾರದ ಎರಡು ವಸ್ತುಗಳು” ಪತ್ತೆಯಾಗಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಸುದ್ದಿಯನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ತನ್ನ ಆರನೇ ಪುಟದಲ್ಲಿ, ’ಓಲ್ಡ್ ಮ್ಯಾನ್ ಅಂಡ್ ದಿ ಸೀ’ ಕೃತಿಗಾಗಿ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದ ಅರ್ನ್‌ಸ್ಟ್ ಹೆಮ್ಮಿಂಗ್‌ವೇ ಅವರ ಸುದ್ದಿಯ ಜೊತೆಗೆ (ಒಂದನೇ ಪುಟದಿಂದ ಮುಂದುವರೆದಿದ್ದ) ‘Policeman foils attempt to bomb Nehru’s train’ ಎಂಬ ತಲೆಬರಹದೊಂದಿಗೆ ಪ್ರಕಟಿಸಿತ್ತು. (NYT, 5 May 1953). ನಂತರದ ದಿನಗಳಲ್ಲಿ “ಆ ಸಂಶಯಾಸ್ಪದ ವಸ್ತುಗಳು ಅಪಾಯಕಾರಿಯಲ್ಲದ ಸ್ಪೋಟಕಗಳಷ್ಟೆ. ಕಿಡಿಗೇಡಿಗಳ ಉದ್ದೇಶ ಯಾವುದೇ ದುಷ್ಕೃತ್ಯ ನಡೆಸುವುದಕ್ಕಿಂತ, ಆತಂಕವನ್ನು ಸೃಷ್ಟಿಸುವುದಾಗಿತ್ತು. ಆದರೂ ಆ ಕಿಡಿಗೇಡಿಗಳ ಪತ್ತೆಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ವರದಿಯಾಗಿತ್ತು. (ಪತ್ರಿಕಾ ವರದಿ: ‘Object on Rail Line near Kalyan was Big Cracker’, The Times of India, 6 May 1953, P1)

ನೆಹರೂ ಅವರ ಆಪ್ತ ಸಹಾಯಕರಾಗಿದ್ದ ಎಂ.ಒ. ಮಥಾಯ್ ಅವರು ನಾಗಪುರದಲ್ಲಿ ರಿಕ್ಷಾ ಗಾಡಿಯವನೊಬ್ಬ “ಕತ್ತಿಯನ್ನು ಬಳಸಿ ನೆಹರೂ ಅವರ ಪ್ರಾಣಕ್ಕೆ ಸಂಚಕಾರ ತರಲು ಯತ್ನಿಸಿದ್ದ” ಘಟನೆಯನ್ನು ಉಲ್ಲೇಖಿಸಿದ್ದಾರೆ. ಆ ಆರೋಪಿತ ದಾಳಿಕೋರ “ನಿರ್ದಿಷ್ಟ ಬಗೆಯ ರಾಜಕೀಯ ಚಿಂತನೆಯವನಾಗಿದ್ದು”, ಕಾಂಗ್ರೆಸ್ ಆಡಳಿತದ ವಿರುದ್ಧ ಸಿಟ್ಟನ್ನು ಹೊಂದಿದ್ದ ಮತ್ತು “ಕಾಂಗ್ರೆಸ್ ಬಹುಮತಕ್ಕೆ ಕಾರಣವಾದ ಮೂಲ ಬೇರನ್ನೇ ನಾಶ ಮಾಡುವ ಉದ್ದೇಶ ಹೊಂದಿದ್ದ” ಎಂದು ಅವರು ಹೇಳುತ್ತಾರೆ. (My Days with Nehru, P135)

ಸುದ್ದಿ ಪತ್ರಿಕೆಗಳು ಆರಂಭದಲ್ಲಿ ಈ ಘಟನೆಯನ್ನು ಪ್ರಾಮುಖ್ಯವಾಗಿ ಪರಿಗಣಿಸಲಿಲ್ಲ. ಸ್ವತಃ ನೆಹರೂ ಅವರೇ, ಸಂದರ್ಭದ ಗಂಭೀರತೆಯ ಸಂಪೂರ್ಣ ಮಾಹಿತಿಯಿರದೆ, “ಘಟನೆಗೆ ಹೆಚ್ಚು ಪ್ರಚಾರ ನೀಡುವುದು ಬೇಡ. ಹುಚ್ಚು ಸ್ವಭಾವದ ವ್ಯಕ್ತಿಯೊಬ್ಬನ ಖಾಸಗಿ ಪ್ರಕರಣವಷ್ಟೇ ಇದು. ಇದರ ಹಿಂದೆ ಗಂಭೀರ ಹುನ್ನಾರಗಳಿಲ್ಲ ಎಂಬ ಹೇಳಿಕೆ ನೀಡಿದ್ದರು. (ಪತ್ರಿಕಾ ವರದಿ: Nehru’s Car Halted’, The Times of India, 13 March 1955, P1). ಆ ವ್ಯಕ್ತಿ ಬಳಸಿದ್ದ ಅಸ್ತ್ರದ ಕುರಿತು “ಅದೇನು ಅಂತಹ ಮಾರಣಾಂತಿಕ ಅಸ್ತ್ರವಲ್ಲ, ನಾನೇ ಅವನ ಹಲ್ಲೆಯನ್ನು ತಡೆಯುತ್ತಿದ್ದೆ. ಅಷ್ಟರಲ್ಲಿ ಮಿಲಿಟರಿ ಸೆಕ್ರೆಟರಿ ಮತ್ತು ಪೊಲೀಸರು ಅವನನ್ನು ಹಿಡಿದುಕೊಂಡರು” ಎಂದು ಹೇಳಿದ್ದರು.

ನಂತರದ ವರದಿಗಳಲ್ಲಿ ಉಲ್ಲೇಖಿತವಾದಂತೆ, ಸತಾರಾ ಜಿಲ್ಲೆಯ ನಿವಾಸಿಯಾದ ಬಾಬುರಾವ್ ಲಕ್ಷ್ಮಣ ಕೋಚಲೆ ಎಂಬ ಆಪಾದಿತನಾದ ಆತ ಪೊಲೀಸರೆದುರು “ಅಹಮದಾಬಾದಿನಲ್ಲಿ ನಡೆದ ಗಲಭೆಯ ಕೇಸಿನಲ್ಲಿ ಅವನನ್ನು ಪ್ರಮಾದವಶತ್ ಸೇರಿಸಲಾಗಿತ್ತು. ಆ ಕೇಸಿನಿಂದ ಅವನು ವಜಾಗೊಂಡಿದ್ದರೂ, ತನ್ನ ಮೇಲೆ ಹೇರಿದ ಸುಳ್ಳು ಕೇಸಿನ ಪ್ರತಿಯಾಗಿ ಆತ ಗೊಣಗಾಟ ಹೊಂದಿದ್ದಾಗಿ” ಒಪ್ಪಿಕೊಂಡಿದ್ದ, (ಪತ್ರಿಕಾ ವರದಿ: ‘Nagpur Rickshaw-Puller Remanded’, The Times of India, 14 March 1955, P7). ಈ ಕುರಿತು ಅವನು ಪ್ರಧಾನಿಗೆ ಬರೆದಿದ್ದ ಪತ್ರಗಳ ಕುರಿತು ವಿಚಾರಿಸುವ ಉದ್ದೇಶ ಹೊಂದಿದ್ದನಂತೆ. ಈ ಘಟನೆಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರನ್ನು ಸಾಕ್ಷಿಯಾಗಿ ಕೋರ್ಟಿಗೆ ಕರೆಸುವಂತೆ ಆತ ಮನವಿ ಮಾಡಿಕೊಂಡಿದ್ದ. ಆದರೆ ನ್ಯಾಯಾಧೀಶರು ಅದನ್ನು ತಿರಸ್ಕರಿಸಿದ್ದರು. (ಪತ್ರಿಕಾ ವರದಿ: Examination of Mr Nehru: Court Rejects Plea’, The Times of India, 7 May 1955, P5)

ಈ ಕುರಿತು ಮೂವತ್ತೈದು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ನೆಹರೂ ಅವರನ್ನೂ ಆಯೋಗದ ಮುಂದೆ ನವದೆಹಲಿಯಲ್ಲೇ ಸಾಕ್ಷಿ ಪಡೆಯಲಾಗಿತ್ತು. ಸಾಕ್ಷಿಗಳ ಹೇಳಿಕೆ ಮತ್ತು “ಆ ಕತ್ತಿ ಆ ಸಂದರ್ಭದಲ್ಲಿ ಮಾರಣಾಂತಿಕ ಗಾಯವನ್ನು ಉಂಟುಮಾಡುವ ಸಂಭವ ಇತ್ತು” ಎಂಬ ವೈದ್ಯರ ಹೇಳಿಕೆಗಳನ್ನು ಆಧರಿಸಿ ತೀರ್ಪುಗಾರರು ಆ ವ್ಯಕ್ತಿಗೆ ಆರು ವರ್ಷಗಳ ಸೆರೆವಾಸದ ಶಿಕ್ಷೆ ನೀಡಿದ್ದರು. ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪುಗಾರರ ಆ ತೀರ್ಪನ್ನು ಮಾನ್ಯ ಮಾಡಿದ್ದರು. (ಪತ್ರಿಕಾ ವರದಿ: ‘Baburao Sentenced to Six Years’ R.I.’, The Times of India, 29 July 1955, P7)

ನಮ್ಮ ನುಡಿ ಕರ್ನಾಟಕ YouTube ಚಾನಲ್ ವೀಡಿಯೋ ಗಳನ್ನು ನೋಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ.

https://bit.ly/3DEHvvv

ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.

https://chat.whatsapp.com/KWv6TFFjpipBRKbqUKkHKJ

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!