ಮುಂದಿನ 15 ದಿನಗಳವರೆಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ರಾಜ್ಯಕ್ಕೆ ಸೂಚನೆ ನೀಡಿರುವುದಕ್ಕೆ ಮಂಡ್ಯ ಜಿಲ್ಲಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದಕ್ಕೆ ಕಾರಣವಾಗಿರುವ ಕಾವೇರಿ ನೀರು ಹಂಚಿಕೆ ವಿಚಾರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಿಡಬ್ಲ್ಯುಆರ್ಸಿ ಸಭೆಯಲ್ಲಿ ಸಮಿತಿ ಅಧಿಕಾರಿಗಳು, ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯದ ನೀರಾವರಿ ತಜ್ಞರು, ವಕೀಲರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರತಿ ದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಲೇ ಬೇಕು ಅಂತ ಸಭೆಯಲ್ಲಿ ಆದೇಶಿಸಲಾಗಿದ್ದು, ಇನ್ನೂ 15 ದಿನಗಳ ಕಾಲ ಪ್ರತಿ ದಿನ ಕರ್ನಾಟಕದಿಂದ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕಾಗಿದೆ. ಈ ಸೂಚನೆ ಹೊರ ಬಿದ್ದ ನಂತರ ಜಿಲ್ಲೆಯಲ್ಲಿ ಜನರ ಆಕ್ರೋಶ ಭುಗಿಲೆದ್ದಿದೆ.
ಶ್ರೀರಂಗಪಟ್ಟಣದಲ್ಲಿ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಹರಿಸಿ ಎಂದರೆ ಹೇಗೆ ಹರಿಸಲು ಸಾಧ್ಯ. ಸರ್ಕಾರ ಮತ್ತೆ ತಮಿಳುನಾಡಿಗೆ ನೀರು ಹರಿಸಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.