ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರವೀಣ್‌ಕುಮಾರ್ ರವರ ವಿರುದ್ಧ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಪಕ್ಷದ ಪದಾಧಿಕಾರಿಗಳು ಎಸ್ ಸಿ ಪಿ/ಟಿಎಸ್ ಪಿ ಹಣ ದುರುಪಯೋಗ ಸಂಬಂಧ ಸುಳ್ಳು ಆರೋಪ ಮಾಡಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಡವಪುರ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಪ್ರವೀಣ್‌ಕುಮಾರ್ ರವರು 2018-19 ನೇ ಸಾಲಿನಲ್ಲಿ ಎಸ್‌ಸಿಪಿ ಹಾಗೂ ಟಿಎಸ್ ಪಿ ಯೋಜನೆಯ ಹಣ ದುರುಪಯೋಗ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಪತ್ರಿಕಾಗೋಷ್ಠಿ ನಡೆಸಿರುವುದು ಖಂಡನೀಯ.ಅವರ ವಿರುದ್ದ ಯಾವುದೇ ದಾಖಲೆ ನೀಡದೆ ಆರೋಪ ಮಾಡಿರುವ ಕೃಷ್ಣ ಹಾಗೂ ಪದಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಬಿ .ಬಿ. ಪ್ರವೀಣ್ ಕುಮಾರ್ ಅವರು 2018- 19 ಸಾಲಿನಲ್ಲಿ ಮಂಡ್ಯ ತಾಲೂಕಿನಲ್ಲಿ ಎಸ್ ಸಿ ಪಿ/ಟಿಎಸ್ ಪಿ ಯೋಜನೆಯಡಿ ಸ್ವೀಕೃತ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಿ ಉಪನಿರ್ದೇಶಕರ ಮುಖಾಂತರ ಕುಕ್ಕುಟ ಮಂಡಳಿ ಮೈಸೂರು ಅವರಿಗೆ ಸಲ್ಲಿಸಿರುತ್ತಾರೆ. ಫಲಾನುಭವಿಗಳ ಆಯ್ಕೆಪತ್ರವಾಗಲಿ, ಸಹಾಯ ಧನದ ಚೆಕ್ ಆಗಲಿ ಪ್ರವೀಣ್ ಕುಮಾರ್ ಅವರು ಪಡೆದಿರುವುದಿಲ್ಲ. ಕುಕ್ಕುಟ ಮಂಡಳಿ ಮೈಸೂರು ಅವರೇ ನೇರವಾಗಿ ಕೋಳಿ ಸಾಕಾಣಿಕೆ ಸಂಘದ ಕಾರ್ಯದರ್ಶಿಗಳ ಮುಖಾಂತರ ಬ್ಯಾಂಕಿಗೆ ಸಲ್ಲಿಸಿರುತ್ತಾರೆ .ಇದಕ್ಕೆ ಬ್ಯಾಂಕಿನವರು ಸದ್ವಿನಿಯೋಗ ಪತ್ರ ನೀಡಿದ್ದಾರೆ. ವಸ್ತು ಸ್ಥಿತಿ ಹೀಗಿದ್ದರೂ ಕೂಡ ಅವರ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಈ ಸಂಬಂಧ ಮೈಸೂರಿನ ಪಶುಪಾಲನ ಇಲಾಖೆಯ ಜಂಟಿ ನಿರ್ದೇಶಕರು ವಿಚಾರಣೆ ನಡೆಸಿ ಡಾ. ಪ್ರವೀಣ್ ಕುಮಾರ್ ಅವರಿಗೂ ಯೋಜನೆಯ ಹಣ ದುರುಪಯೋಗಕ್ಕೂ ಯಾವುದೇ ಸಂಬಂಧವಿಲ್ಲವೆಂದು ಆಯುಕ್ತರಿಗೆ ಅಭಿಪ್ರಾಯ ನೀಡಿದ್ದಾರೆ. ಹೀಗಿದ್ದರೂ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ದಾಖಲೆ ಕೂಡ ಇದೆ ಎಂದರು.
ಸೇವೆಗೆ ಅನಧಿಕೃತ ಗೈರು ಹಾಜರಾಗಿ ವೇತನ ಪಡೆದಿರುವ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ.ಅನಾರೋಗ್ಯ ಪೀಡಿತರಾಗಿದ್ದ ಡಾ. ಪ್ರವೀಣ್ ಕುಮಾರ್ ಅವರಿಗೆ ಕಿವಿನೋವು ಬಂದ ಕಾರಣ ಹನ್ನೆರಡು ದಿನ ಸರ್ಕಾರಿ ಕೆಲಸಕ್ಕೆ ಬರಲು ಸಾಧ್ಯವಾಗಿರಲಿಲ್ಲ.ಈ ಬಗ್ಗೆ ವೈದ್ಯಕೀಯ ಮಂಡಳಿ ದೃಢೀಕರಣ ಪತ್ರ ಹಾಗೂ ಮಹಾಲೇಖಪಾಲರಿಂದ ರಜಾ ಮಂಜೂರಾಗಿತ್ತು ಎಂದರು.
ಪ್ರವೀಣ್ ಕುಮಾರ್ ಅವರು ವಿಸಿ ಫಾರಂನ ಕೃಷಿ ವಿಶ್ವ ವಿದ್ಯಾಲಯದಲ್ಲಿ ತಮ್ಮ ಕೆಲಸದ ಅವಧಿ ಮುಗಿದ ನಂತರ ಅಥವಾ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಒಂದಷ್ಟು ವೇತನ ನೀಡಿರಬಹುದು. ಆದರೆ ಕೃಷ್ಣ ಅವರು ಒಂದೇ ಅವಧಿಯಲ್ಲಿ ಎರಡೆರಡು ಕಡೆ ವೇತನ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ಒಬ್ಬ ಕರ್ತವ್ಯನಿರತ ಅಧಿಕಾರಿಯ ಮೇಲೆ ಈ ರೀತಿ ತೇಜೋವಧೆ ಮಾಡಲು ಪ್ರಯತ್ನಿಸುವುದು ಅಕ್ಷಮ್ಯ ಅಪರಾಧ. ಅಧಿಕಾರಿಗಳು ದಕ್ಷತೆಯಿಂದ ನಿರ್ಭೀತಿಯಿಂದ ಕೆಲಸ ಮಾಡಲು ಆರ್ ಟಿಐ ಮುಖಾಂತರ ಅರ್ಜಿ ಹಾಕಿ ಅಡ್ಡಿಪಡಿಸುವ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷೆ ಸುಜಾತಕೃಷ್ಣ,ಪದಾಧಿಕಾರಿಗಳಾದ ಬಿ.ಆರ್.ಕೃಷ್ಣೇಗೌಡ ಮಂಗಳ ಗೌಡ, ಹರೀಶ್ ಪದ್ಮಮ್ಮ ಇತರರಿದ್ದರು.