Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರ ಮತ ಸೆಳೆಯಲು “ಕೈ” ನಾಯಕರ ತಂತ್ರಗಾರಿಕೆ

✍️ ಕೆ.ಸಿ.ಮಂಜುನಾಥ್,  ಪತ್ರಕರ್ತರು. ಕಲ್ಲಹಳ್ಳಿ.

2023 ರ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ “ಕೈ” ಪಾಳಯದ ಒಕ್ಕಲಿಗ ನಾಯಕರು ಪಕ್ಷದ ಅಭ್ಯರ್ಥಿಗಳ ಪರವಾಗಿ ಸಮುದಾಯದ ಮತ ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ರಾಜಧಾನಿ ಬೆಂಗಳೂರಿನ ಶಾಂಗ್ರಿಲಾ ಹೊಟೇಲ್‌ನಲ್ಲಿ ಡಿ.15ರ ಗುರುವಾರದಂದು ರಾಜ್ಯದ ವಿವಿಧ ಜಿಲ್ಲೆಗಳ ಒಕ್ಕಲಿಗ ನಾಯಕರ ಸಭೆ ನಡೆದಿದೆ.

ರಾಜ್ಯದ ಪ್ರಬಲ ಕೋಮುಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯ ನಿರ್ಣಾಯಕವಾಗಿರುವ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿರುವ ಸಮುದಾಯದ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ತಂತ್ರಗಾರಿಕೆ ಬಗ್ಗೆ ಒಕ್ಕಲಿಗ ನಾಯಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಒಕ್ಕಲಿಗರ ಮತ ಸೆಳೆಯಲು "ಕೈ" ನಾಯಕರ ತಂತ್ರಗಾರಿಕೆ

ಬಹುಸಂಖ್ಯಾತ ಒಕ್ಕಲಿಗ ಮತದಾರರು ಜೆಡಿಎಸ್ ಪಕ್ಷದ ವ್ಯಾಮೋಹಿಗಳಾಗಿದ್ದು, ಅವರನ್ನು ಸೆಳೆಯಲು ಬಿಜೆಪಿ “ಹಿಂದುತ್ವ”ದ ಅಸ್ತ್ರ ಪ್ರಯೋಗಿಸಿ ಹಳೇ ಮೈಸೂರು ಪ್ರಾಂತ್ಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ ಬಿಜೆಪಿ ಪಕ್ಷದ ಒಕ್ಕಲಿಗ ನಾಯಕರಾದ ಸಿ.ಎನ್. ಅಶ್ವಥ್ ನಾರಾಯಣ್, ಆರ್. ಅಶೋಕ್, ಕೆ.ಗೋಪಾಲಯ್ಯ, ಡಾ.ಕೆ. ಸುಧಾಕರ್, ಕೆ.ಸಿ.ನಾರಾಯ ಣಗೌಡ, ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಸರಣಿ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹ ತಂತ್ರಗಾರಿಕೆ ಹೆಣೆಯಲು ಮುಂದಾಗಿದೆ.

ಒಕ್ಕಲಿಗ ಸಮುದಾಯದಿಂದ ಮೀಸಲಾತಿ ಹೆಚ್ಚಳದ ಕೂಗು ಪ್ರತಿಧ್ವನಿಸುತ್ತಿದ್ದು, ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಅನುಸರಿಸಬೇಕಾದ ನಡೆ ಬಗ್ಗೆ ಚರ್ಚಿಸಿ ಅಗತ್ಯ ಬಿದ್ದರೆ ಒಕ್ಕಲಿಗ ಸಮುದಾಯದ ಶ್ರೀಗಳನ್ನು ಭೇಟಿ ಮಾಡಿ ಬೆಂಬಲ ಕೋರಲು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಶ್ರೀನಿವಾಸ್‌ಗೌಡ ಭಾಗವಹಿ ಸಿದ್ದು ಅಚ್ಚರಿ ಎನಿಸಿದರೂ, ಉಭಯ ಶಾಸಕರು ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್.ಶ್ರೀನಿವಾಸ್ ಮಾತನಾಡಿ, ಜೆಡಿಎಸ್ ವರಿಷ್ಠರು ‘ನನ್ನ ಕ್ಷೇತ್ರಕ್ಕೆ ಬಂದು ನನ್ನ ವಿರುದ್ಧವೇ ಅಭ್ಯರ್ಥಿ ಘೋಷಿಸಿದ್ದಾರೆ. ನಾನು ಪ್ರಸ್ತುತ ಸ್ವತಂತ್ರನಾಗಿದ್ದು, ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಗಲು ಬಯಸಿದ್ದೇನೆ. ಬಜೆಟ್ ಅಧಿವೇಶನದ ಬಳಿಕ ಶಾಸಕ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ‌. ಸಮುದಾಯದ ನಾಯಕರು ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಹೀಗಾಗಿ ಬಂದಿದ್ದೇನೆ ಎಂದು ತಿಳಿಸಿದರು.

ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಪಕ್ಷದತ್ತ ಸಮುದಾಯದ ಮತ ಸೆಳೆಯಲು ರಾಜಕೀಯವಾಗಿ ಯಾವ ನಿಲುವು ಅನುಸರಿಸಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಮುದಾಯದ ಯಾವ ನಾಯಕರಿಗೆ ಉನ್ನತ ಸ್ಥಾನ-ಮಾನಗಳು ದೊರೆಯಲಿವೆ ಎಂಬುದನ್ನು ಮತದಾರರಿಗೆ ಅರ್ಥೈಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಎಂ. ಕೃಷ್ಣಪ್ಪ, ಟಿ.ಬಿ.ಜಯಚಂದ್ರ, ಎಂ.ಎಸ್. ಆತ್ಮಾನಂದ, ಕಿಮ್ಮನೆ ರತ್ನಾಕರ್, ಶಾಸಕರಾದ ಶೃಂಗೇರಿಯ ಟಿ.ಡಿ.ರಾಜೇಗೌಡ, ಹನೂರು ನರೇಂದ್ರ, ಮಾಲೂರು ನಂಜೇಗೌಡ, ಕುಣಿಗಲ್ ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಚ್.ಸಿ ಬಾಲಕೃಷ್ಣ, ಕೆ.ಬಿ.ಚಂದ್ರಶೇಖರ್, ರಮೇಶ್ ಬಾಬು ಬಂಡಿಸಿದ್ದೇಗೌಡ ,ಪಿರಿಯಾ ಪಟ್ಟಣ ವೆಂಕಟೇಶ್ ಹಾಗೂ ಪ್ರಿಯಕೃಷ್ಣ ಸೇರಿದಂತೆ 25ಕ್ಕೂ ಹೆಚ್ಚು ಒಕ್ಕಲಿಗ ನಾಯಕರು ಸಭೆಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!