Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾವಯವ ಬೆಲ್ಲ ಬಳಕೆಯಿಂದ ಆರೋಗ್ಯ ವೃದ್ಧಿ- ಡಾ.ಕೇಶವಯ್ಯ.

ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಬೆಲ್ಲವನ್ನು ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ವಿ.ಸಿ ಫಾರಂ ಬೆಲ್ಲದ ಪಾರ್ಕ್ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಕೇಶವಯ್ಯ ತಿಳಿಸಿದರು.

ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಮೂರನೇ ದಿನದ ಅಂಗವಾಗಿ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಡ್ಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ರೈತ ದಸರಾ ಕಾರ್ಯಕ್ರಮದ ಅಂಗವಾಗಿ ಕಿಸಾನ್ ಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.

ಬೆಲ್ಲವನ್ನು ಔಷಧಿಯಾಗಿ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಖಾದ್ಯವನ್ನು ಸಿಹಿ ಸಿಹಿಯಾಗಿಸುವುದಲ್ಲದೆ, ಆರೋಗ್ಯವನ್ನು ಕೂಡ ಸಿಹಿಯಾಗಿಸುತ್ತದೆ. ಬೆಲ್ಲವು ತೂಕವನ್ನು ಇಳಿಸಿಕೊಳ್ಳಲು, ಹೊಟ್ಟೆಯ ಸಮಸ್ಯೆಯನ್ನು ಶಮನ ಮಾಡಿಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದರು.

ರಕ್ತ ಮತ್ತು ಶ್ವಾಸಕೋಶವನ್ನು ನಿರ್ವಿಷಗೊಳಿಸುವುದಲ್ಲದೆ, ಶ್ವಾಸಕೋಶದ ದಕ್ಷತೆಯನ್ನು ಹೆಚ್ಚಿಸುತ್ತದೆ. ಬೆಲ್ಲ ವಿಶೇಷವಾಗಿ ಉಸಿರಾಟದ ಸಮಸ್ಯೆಗಳ ತಡೆಗಟ್ಟಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಮಧುಮೇಹ ಹೊಂದಿರುವವರು ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಪ್ಪ ಮಾತನಾಡಿ, ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯನ್ನು ಬೆಳೆಯಬೇಕಾದರೆ, ರೈತರ ಕೃಷಿ ಜಮೀನು ಹೇಗೆ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಗೊಬ್ಬರ ಬಳಸುವ ವಿಧಾನ ಜೊತೆಗೆ ಸಾವಯವ ಗೊಬ್ಬರವನ್ನು ರೈತರೆ ಉತ್ಪಾದನೆ ಮಾಡುವುದರಿಂದ ಇಳುವರಿ ಪಡೆಯಬಹುದು ಹಾಗೂ ಚಂದ್ರಿಕೆಗಳ ಆಧುನೀಕರಣ ಮತ್ತು ರೇಷ್ಮೆಯ ಹಿಪ್ಪುನೇರಳೆ ಬೆಳೆಯುವುದು, ಕೀಟನಾಶಕಗಳ ಸಿಂಪಡಿಕೆ ಎಚ್ಚರಿಕೆಯಿಂದ ಬಳಸುವ ಬಗ್ಗೆ ತಿಳಿಸಿದರು.

ಪಶು ಆಹಾರ ತಜ್ಞ ಹಾಗೂ ಸಲಹೆಗಾರದ ಡಾ.ಚನ್ನೇಗೌಡ ಹೆಚ್‌.ಕೆ ಮಾತನಾಡಿ, ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚು, ಆದರೆ ಒಂದು ಹಸು ನೀಡುವ ಹಾಲಿನ ಪ್ರಮಾಣ ಬೇರೆ ದೇಶದ ಹಸುಗಳಿಗೆ ಹೋಲಿಸಿದರೆ ಕಡಿಮೆ, ಆದ್ದರಿಂದ ಜಾನುವಾರುಗಳಿಗೆ ದೈನಂದಿನ ನೀಡುವ ಆಹಾರ ಪದ್ಧತಿಯ ಬದಲಾವಣೆ ಮಾಡಿ ಗುಣಮಟ್ಟದ ಮೇವನ್ನು ನೀಡಿದರೆ ಹಾಲಿನ ಪ್ರಮಾಣ ಹೆಚ್ಚುತ್ತದೆ, ಆದ್ದರಿಂದ ಹಸುಗಳ ಪಾಲನೆ – ಪೋಷಣೆ ಬಹು ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ವಿ.ಎಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಸುರೇಶ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಬಾಬಾ ಸಾಬ್ ಬಿ.ಹೆಚ್., ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಹಾಗೂ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!