ಮಂಡ್ಯ ಜನರ ಪ್ರೀತಿಯ ಐದು ರೂಪಾಯಿ ಡಾಕ್ಟರ್ ಶಂಕರೇಗೌಡರ ಆರೋಗ್ಯ ಚೇತರಿಸಿದ್ದು, ಗುಣಮುಖರಾಗಿ ಪೋರ್ಟಿಸ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡು ಮಂಡ್ಯದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಷಯ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಡಾಕ್ಟರ್ ಶಂಕರೇಗೌಡರು ಆರೋಗ್ಯ ಸುಧಾರಿಸಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸಿದೆ.
ಮಂಡ್ಯದ ಐದು ರೂಪಾಯಿಯ ಮೆಚ್ಚಿನ ಡಾಕ್ಟರ್ ಗುಣಮುಖರಾಗಿ ಮರಳಿ ಮನೆಗೆ ಬಂದಿರುವುದರಿಂದ ಸಂತಸಗೊಂಡಿರುವ ಅವರ ಪ್ರೀತಿಯ ಅಭಿಮಾನಿಗಳು, ಹಿತೈಷಿಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಒಂದು ತಿಂಗಳ ನಂತರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ಶಂಕರೇಗೌಡರಿಗೆ ಹೃದಯಾಘಾತವಾಗಿ ಮೈಸೂರಿನ ಅಪೋಲೋ ಆಸ್ಪತ್ರೆ ನಂತರ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಸರಿಯಾದ ಮಾಹಿತಿಯಿಲ್ಲದೆ,ಡಾ.ಶಂಕರೇಗೌಡರು ಇನ್ನಿಲ್ಲ ಎಂದೆಲ್ಯ ಇಲ್ಲ ಸಲ್ಲದ ಪೋಸ್ಟ್ ಗಳನ್ನು ವಾಟ್ಸಾಪ್,ಫೇಸ್‌ಬುಕ್ ಗಳಲ್ಲಿ ಹಾಕಿದ್ದು, ಜಿಲ್ಲೆಯ ಜನರು ಮಾತ್ರವಲ್ಲದೆ ಡಾ.ಶಂಕರೇಗೌಡ ಅವರಿಂದ ಚಿಕಿತ್ಸೆ ಪಡೆದಿದ್ದ ಎಲ್ಲರ ನೆಮ್ಮದಿಯನ್ನು ಹಾಳು ಮಾಡಿತ್ತು.
ಕೊನೆಗೆ ಅವರ ಪತ್ನಿ ರುಕ್ಮಿಣಿ ಶಂಕರೇಗೌಡ ಹಾಗೂ ಕುಟುಂಬದವರೇ ಶಂಕರೇಗೌಡರು ಆರೋಗ್ಯವಾಗಿದ್ದಾರೆ. ಈ ರೀತಿ ಭಯ ಪಡುವ ಆಗತ್ಯವಿಲ್ಲ, ಇಲ್ಲ ಸಲ್ಲದ ಪೋಸ್ಟ್ ಗಳನ್ನು, ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ಮನವಿ ಮಾಡಿದ್ದರು.
ಡಾ.ಶಂಕರೇಗೌಡ ಅವರು ಆರೋಗ್ಯವಾಗಲಿ ಎಂದು ಅಭಿಮಾನಿಗಳು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಮುಂದೆ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದರು. ಶಿವಳ್ಳಿ, ಮಂಡ್ಯ ಸೇರಿದಂತಡ ಹಲವೆಡೆ ಜನರು ಶಂಕರೇಗೌಡ ಅವರ ಆರೋಗ್ಯ ಸುಧಾರಿಸಲಿ ಎಂದು ಪೂಜೆ ಸಲ್ಲಿಸಿದ್ದರು.
ಒಟ್ಟಾರೆ ಡಾ.ಶಂಕರೇಗೌಡ ಅವರು ಆರೋಗ್ಯದಿಂದ ಮರಳಿ ಮನೆಗೆ ಬಂದಿರುವುದು ಜನರಲ್ಲಿ ನೆಮ್ಮದಿ ತಂದಿದೆ.
ನೆಲದನಿ ಬಳಗದ ಲಂಕೇಶ್ ನುಡಿ ಕರ್ನಾಟಕ.ಕಾಮ್ ನೊಂದಿಗೆ ಮಾತನಾಡಿ, ನಮ್ಮ ಡಾಕ್ಟರ್ ಆರೋಗ್ಯ ಚೇತರಿಸಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿ ಹರ್ಷ ವ್ಯಕ್ತಪಡಿಸಿದರು.