Friday, September 20, 2024

ಪ್ರಾಯೋಗಿಕ ಆವೃತ್ತಿ

ರಾತ್ರೋರಾತ್ರಿ ಬಸ್ ನಿಲ್ದಾಣದ ಚಿತ್ರಣ ಬದಲು; ಜೆಡಿಎಸ್ ಶಾಸಕರ ವಿರುದ್ದ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ತಾಲೂಕಿನಲ್ಲಿ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದು ರಾತ್ರೋರಾತ್ರಿ ಪಟ್ಟಣದ ಪ್ರವಾಸಿ ಮಂದಿರದ ತಂಗುದಾಣದಲ್ಲಿ ಅಳವಡಿಸಿದ್ದ ಮಾಜಿ ಸಚಿವ ಡಾ.ನಾರಾಯಣ ಗೌಡರ ಪೋಟೋ ಇದ್ದ ನಾಮಫಲಕವನ್ನು ತೆಗೆಸಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ತಮ್ಮ ಭಾವಚಿತ್ರವನ್ನು ಬಸ್ ತಂಗುದಾಣಕ್ಕೆ ಹಾಕಿಸಿಕೊಂಡಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೆ.ಆರ್.ಪೇಟೆ ಶಾಸಕರಾಗಿದ್ದ ರಾಜ್ಯದ ಮಾಜಿಸಚಿವ ಡಾ.ನಾರಾಯಣಗೌಡರ ಶಾಸಕರ ಪ್ರದೇಶಾಭಿವೃದ್ಧಿ ಅನುಧಾನವನ್ನು ಬಳಸಿಕೊಂಡು ಪ್ರವಾಸಿ ಮಂದಿರದ ಬಳಿ ನಾರಾಯಣಗೌಡ ತಂಗುದಾಣ ಹಾಗೂ ಆಟೋ ಚಾಲಕರಿಗೆ ಆಟೋ ಸ್ಟ್ಯಾಂಡನ್ನು ಪಟ್ಟಣದಲ್ಲಿ ಎರಡು ಕಡೆ ಹಾಗೂ ಹೊಸಹೊಳಲಿನಲ್ಲಿ
ಒಂದು ಕಡೆ ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಬದಲಾದ ಕಾಲಘಟ್ಟದಲ್ಲಿ ನಾರಾಯಣ ಗೌಡ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತು ಅವರ ಬದ್ಧ ಎದುರಾಳಿಯಾಗಿದ್ದ ಹೆಚ್.ಟಿ.ಮಂಜು ಶಾಸಕರಾಗಿ ಆಯ್ಕೆಯಾದ ನಂತರ ತಾಲೂಕಿನಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಧಿಕಾರಿಗಳ ಮೂಲಕ ಬ್ರೇಕ್ ಹಾಕಿಸಿ ವಿಕೃತಿ ಮೆರೆದಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಹಿಂದೆ ಶಾಸಕರಾಗಿದ್ದ ನಾರಾಯಣಗೌಡರ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸಿರುವ ಪ್ರವಾಸಿಗರ ತಂಗುದಾಣಕ್ಕೆ ನಾರಾಯಣಗೌಡರ ಹೆಸರಿನಲ್ಲಿದ್ದ ಭಾವಚಿತ್ರವನ್ನು ತೆಗೆಸಿ ತಮ್ಮ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರವಿರುವ ಬೋರ್ಡು ಗಳನ್ನು ಹಾಕಿಸಿಕೊಂಡಿರುವ ಶಾಸಕ ಹೆಚ್.ಟಿ.ಮಂಜು ಅವರ ಕ್ರಮವು ರಾಜಕೀಯ ದ್ವೇಷ ಹಾಗೂ ಸೇಡಿನ ಕ್ರಮವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಮಂಜು ಅವರು ತಮ್ಮ ಶಾಸಕರ ಅನುದಾನದಲ್ಲಿ ಅಥವಾ ತಮ್ಮ ಸ್ವಂತ ಹಣದಿಂದ ಹೊಸದಾಗಿ ಬಸ್ ಪ್ರಯಾಣಿಕರ ತಂಗುದಾಣ ಅಥವಾ ಆಟೋ ನಿಲ್ದಾಣ ನಿರ್ಮಿಸಿ, ತಮ್ಮ ಹಾಗೂ ತಮ್ಮ ಪಕ್ಷದ ನಾಯಕರ ಪೋಟೋ ಹಾಕಿಸಿಕೊಳ್ಳಬೇಕು ಅದನ್ನು ಬಿಟ್ಟು, ಬೇರೊಬ್ಬರು ನಿರ್ಮಿಸಿರುವ ಬಸ್ ತಂಗುದಾಣಕ್ಕೆ ಹಾಕಿಸಿಕೊಂಡಿರುವ ನಾಮಫಲಕವನ್ನು ಕೂಡಲೇ ತೆರವು ಮಾಡಿಸಬೇಕು. ಇಲ್ಲದಿದ್ದರೆ  ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ನಾರಾಯಣ ಗೌಡರ ಆಪ್ತ ಸಹಾಯಕ ದಯಾನಂದ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶೀರ್ ಬಿಲ್ಲೇನಹಳ್ಳಿ ಮಂಜುನಾಥ್ ಎಚ್ಚರಿಸಿದ್ದಾರೆ..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!