Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರಿನಿಂದ ಬೆಂಗಳೂರಿಗೆ 2,000 ಕೃಷಿ ಕೂಲಿಕಾರರ ಪಾದಯಾತ್ರೆ

ಕೃಷಿ ಕೂಲಿಕಾರರ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹಿಸಿ, ಉದ್ಯೋಗ ಖಾತ್ರಿಯಡಿ 600 ರೂ. ಕೂಲಿ ನಿಗದಿಗೆ ಒತ್ತಾಯಿಸಿ, ವಿದ್ಯುತ್‌ ಖಾಸಗೀಕರಣ ಕೈಬಿಟ್ಟು, ಭಾಗ್ಯಜ್ಯೋತಿ, ಕುಟೀರ ಜ್ಯೋತಿಗಳಿಗೆ ವಿದ್ಯುತ್ ಸಂಪರ್ಕ ಪಡೆದ ಮನೆಗಳಿಗೆ 100 ಯೂನಿಟ್ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ಮದ್ದೂರಿನಿಂದ ಬೆಂಗಳೂರಿಗೆ 2,000 ಕೃಷಿ ಕೂಲಿಕಾರರ ಪಾದಯಾತ್ರೆಯನ್ನು ಫೆಬ್ರವರಿ 6 ರಿಂದ 8ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಭಾಗ್ಯ, ದೀನದಾಯಾಳ್‌, ಬೆಳಕು ಯೋಜನೆಗಳಿಗೂ ಉಚಿತ ವಿದ್ಯುತ್ ಒದಗಿಸಬೇಕು. ಜಲಜೀವನ್ ಯೋಜನೆಯಲ್ಲಿ ಮೀಟರಿಕರಣ ಕೈಬಿಡಬೇಕು. ಎಲ್ಲಾ ಬಡವರಿಗೂ 2 ಲಕ್ಷದ ವರೆಗೆ ಸಾಲ ನೀಡಬೇಕೆಂಬ ಬೇಡಿಕೆಗಳನ್ನಿಟ್ಟು ಪಾದಾಯಾತ್ರೆ ಕೈಗೊಳ್ಳಲಾಗಿದೆ ಎಂದರು.

ಕೇರಳ, ತಮಿಳುನಾಡು, ತ್ರಿಪುರ ರಾಜ್ಯಗಳಲ್ಲಿ ಕಲ್ಯಾಣ ಮಂಡಳಿಗಳನ್ನು ಕೃಷಿ ಕೂಲಿಕಾರರಿಗೆ ನೀಡಿರುವುದರಿಂದ ಅಲ್ಲಿ 58 ವರ್ಷ ತುಂಬಿದ ಕೃಷಿ ಕೂಲಿಕಾರರಿಗೆ ಪಿ.ಎಫ್ ನೀಡುತ್ತಿದ್ದು, ಇಎಸ್‌ಐ ಜೊತೆಗೆ ಫೆನ್ಸನ್ ನೀಡುತ್ತಿದ್ದಾರೆ. ಮನೆ ಕಟ್ಟಿಕೊಳ್ಳಲು 7 ಲಕ್ಷ ರೂ. ಅನುದಾನ ನೀಡುತ್ತಿದ್ದಾರೆ ಮತ್ತು 16 ಜೀವನಾವಶ್ಯಕ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಇಂತಹ ಹಲವಾರು ಅನುಕೂಲಗಳು ಸಿಗುತ್ತಿದ್ದು, ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದ್ದು, ಅದೇ ರೀತಿಯ ಕಲ್ಯಾಣ ಮಂಡಳಿಯನ್ನು ಕರ್ನಾಟಕದಲ್ಲಿ ಜಾರಿ ಮಾಡಬೇಕೆಂದು ಸಂಘವು ಒತ್ತಾಯಿಸುತ್ತದೆ ಎಂದರು.

ಅಲ್ಲದೆ ಹಲವು ವರ್ಷಗಳಿಂದ ಬಗೆಹರಿಯದೇ ಕಗ್ಗಂಟಾಗಿರುವ ಮನೆ ನಿವೇಶನ, ಸ್ಮಶಾನ, ಬಗರ್ ಹುಕುಂ ಭೂಮಿ ಸಮಸ್ಯೆಗಳು ಬಗೆಹರಿಯಬೇಕಿದೆ. ಉದ್ಯೋಗ ಖಾತ್ರಿಯಡಿ ಕಡಿತ ಮಾಡಿರುವ ಸಲಕರಣ ವೆಚ್ಚ 10 ರೂಗಳನ್ನು ವಾಪಸ್ ನೀಡಬೇಕು. 8ನೇ ತರಗತಿಯ ನಿಯಮವನ್ನು ಕಾಯಕ ಬಂಧುಗಳಿಗೆ ವಿಧಿಸಬಾರದು.  ವಂಚಿತ ಸಿಳ್ಳೇಕ್ಯಾತ ಜನರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಶಿವಪುರ ಸತ್ಯಾಗ್ರಹ ಸೌಧದಿಂದ ಆರಂಭ 

ಫೆಬ್ರವರಿ 6ರ ಸೋಮವಾರ 11 ಗಂಟೆಗೆ ಐತಿಹಾಸಿಕ ಶಿವಪುರ ಸತ್ಯಾಗ್ರಹ ಸೌಧದಿಂದ ಪಾದಾಯಾತ್ರೆಯನ್ನು  ಪ್ರಾರಂಭಿಸಲಾಗುವುದು.

ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಪಾದಯಾತ್ರೆ ಚಾಲನೆ ನೀಡುವರು. ಸಿ.ಪಿ.ಐ.ಎಂ.ನ ಜಿ.ಎನ್‌. ನಾಗರಾಜ್, ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ಸಿ.ಪಿ.ಎಂ. ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ನಿತ್ಯಾನಂದ ಸ್ವಾಮಿ, ಚಂದ್ರಪ್ಪ ಹೊಸ್ಕರ ಹಾಗೂ ಹಲವಾರು ಸಂಘಟನೆಯ ಮತ್ತು ಪ್ರಗತಿಪರ ಮುಖಂಡರು ಭಾಗವಹಿಸುವರು ಎಂದರು.

ಫೆಬ್ರವರಿ 7ರಂದು ಕೇರಳ ಸಂಸತ್‌ ಸದಸ್ಯರಾದ ಶಿವದಾಸನ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು. ಸಮಾರೋಪದಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಬಿ. ವೆಂಕಟ್ ಸೇರಿದಂತೆ ಇತರರು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಸಂಘದ ರಾಜ್ಯ ಸಹ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಜಿಲ್ಲಾ ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ರಾಜು, ಮುಖಂಡರಾದ ಅಮಾಸಯ್ಯ, ರಾಮಣ್ಣ, ಕಪನಿಗೌಡ, ಪಾಪಣ್ಣ ಹಾಗೂ ಶುಭಾವತಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!