Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಂಚಾಯತ್ ರಾಜ್‌ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ


  • ಗ್ರಾ.ಪಂ ಅಧ್ಯಕ್ಷರಿಗೆ ಹಣಕಾಸಿನ ಅಧಿಕಾರ ಮುಂದುವರೆಸಲು ಆಗ್ರಹ

  • ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಬೃಹತ್ ಪ್ರತಿಭಟನೆ

ಸಂವಿಧಾನದ 73 ನೇ ತಿದ್ದುಪಡಿಯ ಮುಖಾಂತರ ಆಸ್ತಿತ್ವಕ್ಕೆ ಬಂದಿರುವ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಅಧಿಕಾರ ಕಿತ್ತುಕೊಳ್ಳಲು ಪಂಚಾಯತ್ ರಾಜ್‌ ಅಧಿನಿಯಮ ( ಕಾಯ್ದೆ) ಕ್ಕೆ ತಿದ್ದುಪಡಿ ತರುವುದನ್ನು ವಿರೋಧಿಸಿ ಮಂಡ್ಯ ತಾಲ್ಲೂಕು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರುಗಳ ಒಕ್ಕೂಟ ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಜಮಾಯಿಸಿ ಮಂಡ್ಯ ತಾಲ್ಲೂಕು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಗ್ರಾ.ಪಂ.ಗಳು ಸ್ಥಳೀಯ ಸರ್ಕಾರಗಳಾಗಿ ಗ್ರಾಮೀಣ ಅಭಿವೃದ್ಧಿಯನ್ನು ಮಾಡುತ್ತಿವೆ, ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯತ್‌ ರಾಜ್ ಬಲ ಪಡಿಸುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಆದರೆ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ 1993 ರ ಪ್ರಕರಣಗಳಿಗೆ ತಿದ್ದುಪಡಿ ತರಲು ಹೊರಟಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಕಿಡಿಕಾರಿದರು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ಅಧಿನಿಯಮ ಪ್ರಕರಣ 64 ರಿಂದ 70 ಕ್ಕೆ ತಿದ್ದುಪಡಿ ತಂದು ಲೈಸನ್ಸ್‌ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಿ ಚುನಾಯಿತ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದೆ,  ಈ ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣಾ ಪಟ್ಟಿ ನಮುನೆ – II, I|ಬಿ. ಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ನಮೂನೆಗಳನ್ನು ವಿತರಿಸಿ ಪಂಚಾಯಿತಿಯ ಅನುಮತಿ ಇಲ್ಲದೆ ಕ್ರಮವಹಿಸಲು ತಿದ್ದುಪಡಿ ತರುವುದು ಎಂದು ದೂರಿದರು.


ಇದನ್ನೂ ಓದಿ: ಅಧಿಕಾರ ವಿಕೇಂದ್ರೀಕರಣಕ್ಕೆ ಎಳ್ಳು-ನೀರು ಬಿಡಲೊರಟ ಸರ್ಕಾರ


 

ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ನಿರ್ವಹಿಸಲು ಅಧಿಸೂಚನೆ ಹೊರಡಿಸುವ ಬಗ್ಗೆ ನಡಾವಳಿ ಮಾಡಿರುವುದು ಕಾನೂನು ಬಾಹಿರವಾಗಿದೆ. ಇದರಿಂದಾಗಿ ಗ್ರಾ.ಪಂ ಅಧ್ಯಕ್ಷರ ಅಧಿಕಾರವನ್ನು ಪರೋಕ್ಷವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಆ,19,2022 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಮಾಡಿರುವ ಸಭೆಯ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್‌ (ಗ್ರಾ.ಪಂ.ಆಯವ್ಯಯ ಮತ್ತು ಲೆಕ್ಕ ಪತ್ರಗಳು) ನಿಯಮಗಳು 2006 ರಲ್ಲಿ ಗ್ರಾ.ಪಂ ಹಣಕಾಸಿನ ವ್ಯವಹಾರಗಳನ್ನು ಸರ್ಕಾರ ಅಧಿಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರ ನಿರ್ವಹಿಸಲು ಉಪಬಂಧವಿದ್ದು, ಅದರಂತೆ ಅಧಿಸೂಚನೆ ಮೂಲಕ ಗ್ರಾ.ಪಂ. ಹಣಕಾಸಿನ ವ್ಯವಹಾರವನ್ನು ಗ್ರಾ.ಪಂ. ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸಲು ಕಲ್ಪಿಸಿರುವ ಅವಕಾಶವನ್ನು ಕೂಡಲೇ ಮಾರ್ಪಡಿಸಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಗ್ರಾ.ಪಂ ಅಧ್ಯಕ್ಷರಿಗೆ ನೀಡಿರುವ ಹಣಕಾಸಿನ ಅಧಿಕಾರವನ್ನು ಕಾಯ್ದೆಯ ವ್ಯಾಪ್ತಿಯೊಳಗೆ ತರಬೇಕು ಒತ್ತಾಯಿಸಿದರು.


ಇದನ್ನೂ ಓದಿ : ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್: ಹಿಂದಿನ ಲೆಕ್ಕಾಚಾರಗಳೇನು?


 

ಮಂಡ್ಯ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ಮಹೇಶ್ ಉಪ್ಪರಕನಹಳ್ಳಿ, ಗ್ರಾ.ಪಂ.ಸದಸ್ಯ ಮಹೇಶ್ ಬೇವಿನಹಳ್ಳಿ, ಗ್ರಾ.ಪಂ.ಸದಸ್ಯರಾದ ಶ್ರೀಕಾಂತ್, ಹಳುವಾಡಿ ಕೃಷ್ಣೇಗೌಡ, ನಂದೀಶ್ ಬಿ.ಹೊಸೂರು, ಪುಟ್ಟಸ್ವಾಮಿಗೌಡ, ಪ್ರದೀಪ್, ದೊಡ್ಡಮ್ಮತಾಯಿ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!