Saturday, July 13, 2024

ಪ್ರಾಯೋಗಿಕ ಆವೃತ್ತಿ

ಜನಮಾನಸದಲ್ಲಿ ಶಾಶ್ವತ ಸ್ಥಾನ ಕೃಷ್ಣರಿಗಿದೆ

ರಾಜಕೀಯ ಕ್ಷೇತ್ರಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೌಲ್ಯ ತಂದು ಕೊಟ್ಟ ಮಂಡ್ಯದ ಗಾಂಧಿ ಎಂದೇ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದವರು ನಮ್ಮ ಕೆ.ಆರ್.ಪೇಟೆ ಕೃಷ್ಣ ಎಂದು ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಬಣ್ಣಿಸಿದರು.

ಕೆ‌.ಆರ್.ಪೇಟೆ ಪಟ್ಟಣದ ಹೊರವಲಯದ ಜಯಮ್ಮರಾಮಸ್ವಾಮಿ ಸಮುದಾಯ ಭವನದಲ್ಲಿಂದು ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನವು ಕೃಷ್ಣರ ನಿಧನದ ಒಂದು ವರ್ಷದ ಸವಿನೆನಪಿಗಾಗಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಮ್ಮ ಜೀವನದುದ್ದಕ್ಕೂ ಸರಳವಾಗಿ ಜೀವನ ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಹಾಗೂ ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಟ ನಡೆಸಿದ ಕೃಷ್ಣರವರು ನುಡಿದಂತೆ ನಡೆದ, ದಕ್ಷ ಪ್ರಾಮಾಣಿಕ ಆಡಳಿತ ನೀಡಿದ ಧೀಮಂತ ರಾಜಕಾರಣಿಯಾಗಿದ್ದಾರೆ. ಕೃಷ್ಣ ಅವರಿಂದಾಗಿ ಕೆ.ಆರ್.ಪೇಟೆಯ ಗೌರವ ಹೆಚ್ಚಾಯಿತು.

ಕೃಷ್ಣರ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ನಿಟ್ಟಿನಲ್ಲಿ ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಕೃಷ್ಣ ಅವರ ಹೆಸರನ್ನಿಟ್ಟು ಕೃಷ್ಣರ ಪುತ್ಥಳಿಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ. ಕೃಷ್ಣ ಪ್ರತಿಷ್ಠಾನದ ಶೈಕ್ಷಣಿಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ನನ್ನ ತಂದೆ,ತಾಯಿಗಳ ಹೆಸರಿನಲ್ಲಿ ವೈಯಕ್ತಿಕವಾಗಿ 5 ಲಕ್ಷ ರೂ.ಹಣ ನೀಡುತ್ತೇನೆ ಎಂದು ಸಚಿವ ನಾರಾಯಣಗೌಡ ಘೋಷಿಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನನ್ನಂತಹ ನೂರಾರು ಯುವ ರಾಜಕಾರಣಿಗಳಿಗೆ ಕೃಷ್ಣರವರು ಆದರ್ಶವಾಗಿದ್ದರು. ಇಂದಿನ ಯುವಜನರು ಕೃಷ್ಣ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯುವ ಮೂಲಕ ಆದರ್ಶ ಜೀವನ ನಡೆಸಬೇಕು. ಕೃಷ್ಣ ಅವರಂತಹ ಸಜ್ಜನ ರಾಜಕಾರಣಿಗಳು ಕಲುಷಿತಗೊಂಡಿರುವ ಇಂದಿನ ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಬೇಕಾಗಿದ್ದಾರೆ ಎಂದರು.

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ,ಕೃಷ್ಣ ಅವರ ಗರಡಿಯಲ್ಲಿ ಪಳಗಿರುವ ನಾನು ಅವರಂತೆ ಜೀವನ ನಡೆಸಲು ಸಾಧ್ಯವಾಗದಿದ್ದರೂ, ಪ್ರಾಮಾಣಿಕ ಜೀವನ ನಡೆಸಿ, ಮೌಲ್ಯಗಳು ಹಾಗೂ ತತ್ವಸಿದ್ಧಾಂತಗಳ ಉಳಿವಿಗಾಗಿ ಹೋರಾಡುತ್ತಾ ಬಂದಿದ್ದೇನೆ. ಕೃಷ್ಣ ಅವರಿಂದಾಗಿ ಕೆ.ಆರ್.ಪೇಟೆಗೆ ಹೆಸರು ಬಂತು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಅವರ ಮನಸ್ಥಿತಿಯು ಅವರನ್ನು ರಾಜ್ಯಮಟ್ಟದ ನಾಯಕರನ್ನಾಗಿ ರೂಪಿಸಿತು ಎಂದು ಹೇಳಿದರು.

ಚನ್ನರಾಯಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ ಒಬ್ಬ ಸಾಮಾನ್ಯ ರೈತನ ಮಗನಾಗಿ ಹುಟ್ಟಿದ ಕೃಷ್ಣ ಅವರು ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರಾಗಿ ಹಾಗೂ ವಿಧಾನಸಭಾ ಅಧ್ಯಕ್ಷರಾಗಿ ಕೆಲಸ ಮಾಡಿದರೂ ಸರಳತೆಯನ್ನು ಬಿಡದೇ ಜೀವನದುದ್ದಕ್ಕೂ ಪಾಲಿಸಿಕೊಂಡು ಇತರರಿಗೆ ಮಾದರಿಯಾದರು ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷ್ಣರ ಧರ್ಮಪತ್ನಿ ಇಂದಿರಮ್ಮ, ಅಳಿಯ ಶ್ರೀಧರ್, ಪುತ್ರಿ ಮಂಜುಳಾ, ಮಾಜಿ ಶಾಸಕರಾದ ರಮೇಶಬಾಬು ಬಂಡಿಸಿದ್ಧೇಗೌಡ, ಬಿ.ಪ್ರಕಾಶ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಸಮಾಜಸೇವಕ ವಿಜಯರಾಮೇಗೌಡ, ಶೀಳನೆರೆ ಅಂಬರೀಶ್, ಹಾದನೂರು ಪರಮೇಶ್, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ, ಪದಾಧಿಕಾರಿಗಳಾದ ಕತ್ತರಘಟ್ಟ ವಾಸು, ಅಂಚಿ ಸಣ್ಣಸ್ವಾಮಿಗೌಡ, ಹೆಮ್ಮನಹಳ್ಳಿ ರಮೇಶ್, ಐಚನಹಳ್ಳಿ ಶಿವಣ್ಣ ಸೇರಿದಂತೆ ಸಹಸ್ರಾರು ಜನರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!