Thursday, September 19, 2024

ಪ್ರಾಯೋಗಿಕ ಆವೃತ್ತಿ

ಪರಿಶ್ರಮದಿಂದ ಮಹತ್ವವಾದುದನ್ನು ಸಾಧಿಸಬೇಕು: ಚುಂಚಶ್ರೀ

ಯಾರ ಜೀವನದಲ್ಲೂ ಇದ್ದಕ್ಕಿದ್ದಂತೆ ಮಹತ್ವವಾದುದು ಘಟಿಸುವುದಿಲ್ಲ. ಸಾಕಷ್ಟು ಪರಿಶ್ರಮದಿಂದ ಅದನ್ನು ಸಾಧಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ನುಡಿದರು.

ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಬಿ.ಜಿ ನಗರದ ಯುವಾಲಯದಲ್ಲಿ ಆಯೋಜಿಸಿದ್ದ “ಡಾ. ಹೊ. ಶ್ರೀನಿವಾಸಯ್ಯ ಸಂಸ್ಮರಣೆ” ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕರ್ಮಶುದ್ಧಿ, ಭಾವಶುದ್ದಿ ಹಾಗೂ ಜೀವಶುದ್ದಿಗಳೆಂಬ ತ್ರಿವೇಣಿ ಸಂಗಮದ ಶ್ರೀನಿವಾಸಯ್ಯನವರು ಕಿರಿಯ ವಯಸ್ಸಿನಲ್ಲಿಯೇ ಗಾಂಧೀಜಿಯವರನ್ನು ಭೇಟಿ ಮಾಡಿ ಅವರ ತತ್ವ, ಆದರ್ಶಗಳನ್ನು ಜೀವನ ಮೌಲ್ಯಗಳಾಗಿ ಅನುಷ್ಠಾನ ಗೊಳಿಸಿಕೊಂಡ ಅನನ್ಯ ಸಾಧಕ, ಅನುಪಮ ದೇಶಪ್ರೇಮಿ ಎಂದು ಬಣ್ಣಿಸಿದರು.

ಎಂಜಿನಿಯರಾದರೂ ಯೋಗ, ಸಾಹಿತ್ಯ, ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಅನವರತ ನಿಸ್ವಾರ್ಥ ಕೈಂಕರ್ಯಗೈದು ಅಸಂಖ್ಯಾತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿ ರಾಷ್ಟ್ರಮನ್ನಣೆಗೆ ಪಾತ್ರರಾದರು. ಗಾಂಧೀಜಿ, ಜೆ‌ ಆರ್ ಡಿ ಟಾಟಾ, ರೂಮಿಯಾ, ಆಧ್ಯಾತ್ಮ ಹಾಗೂ ಮಂಕುತಿಮ್ಮನ ಕಗ್ಗವನ್ನು ಸಮಗೊಳಿಸಿ, ಇದರ ಅನ್ವರ್ಥವಾಗಿ ಬದುಕಿದವರು ಎಂದು ಅನೇಕ ದೃಷ್ಟಾಂತಗಳ ಮೂಲಕ ಡಾ. ಹೊ. ಶ್ರೀನಿವಾಸಯ್ಯನವರನ್ನು ಸ್ಮರಿಸಿಕೊಂಡರು.

ಉದ್ಘಾಟನಾ ನುಡಿಗಳನ್ನಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ಎ ಶೇಖರ್, ಮೌಲ್ಯಯುತ ತತ್ವಗಳನ್ನು ಹೊಂದಿದ ಜೀವನಶೈಲಿ, ಆಕರ್ಷಕ ಮುಖಭಾವದ, ಆಂತರಿಕ ಸೌಂದರ್ಯದ ಅದ್ಭುತ ವ್ಯಕ್ತಿತ್ವವುಳ್ಳವರು ಹೊ.ಶ್ರೀನಿವಾಸಯ್ಯನವರು. ಅಸಾಧಾರಣ ನಾಯಕತ್ವ ಗುಣದ ಇವರು ತಮ್ಮ ಒಡನಾಡಿಗಳನ್ನೂ ನಾಯಕರನ್ನಾಗಿಸುವ ವಿಶೇಷ ಶಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ಪ್ರಾಸ್ತಾವಿಕ ನುಡಿಯಲ್ಲಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಪ್ರೊ. ಜಿ ಬಿ ಶಿವರಾಜು ಮಾತನಾಡಿ, ಡಾ. ಹೊ. ಶ್ರೀನಿವಾಸಯ್ಯನವರ ಸಂಪೂರ್ಣ ಜೀವನ ಸಾರವನ್ನು ಸಾಕ್ಷ್ಯಚಿತ್ರ ಸಹಿತ ಸಭಿಕರ ಮುಂದಿಟ್ಟರು.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಸಂಸ್ಮರಣ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ನಾಗಮಂಗಲ ಶಾಸಕರಾದ ಕೆ ಸುರೇಶ್ ಗೌಡ, ಡಾ. ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಶಶಿಕೃಷ್ಣ, ಪ್ರೊ. ನರಸಿಂಹಮೂರ್ತಿ, ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ. ಸಿ. ಕೆ. ಸುಬ್ಬರಾಯ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ಎ. ಟಿ.ಶಿವರಾಮು, ಡಾ. ಬಿ ರಮೇಶ್, ಡಾ. ಎಂ ಜಿ ಶಿವರಾಮು, ಡಾ. ಬಿ ಕೆ ನರೇಂದ್ರ, ಪ್ರೊ. ಎನ್ ರಾಮು, ಡಾ. ಪ್ರಶಾಂತ್, ಬಿ ಕೆ ಉಮೇಶ್, ಗಾಂಧಿ ಪ್ರತಿಷ್ಠಾನದ ಹೊನ್ನೇನಹಳ್ಳಿ ಕೃಷ್ಣಪ್ಪ, ಚೌದ್ರಿ ಕೊಪ್ಪಲು ಗ್ರಾಮಸ್ಥರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!