Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ದಲಿತ ಮುಖಂಡ ಆರಂಭಿಸಿದ್ದ ಪೆಟ್ರೋಲ್ ಬಂಕ್‌ ಧ್ವಂಸ; ₹10 ಲಕ್ಷ ಮೌಲ್ಯದ ಇಂಧನವನ್ನು ಮಣ್ಣು ಪಾಲು ಮಾಡಿದರು

ದಲಿತ ಸಮುದಾಯಕ್ಕೆ ಸೇರಿದ ಮುಖಂಡರೋರ್ವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರಂಭಿಸಿದ್ದ ಪೆಟ್ರೋಲ್ ಬಂಕ್‌ಗೆ ಮಧ್ಯರಾತ್ರಿ ನುಗ್ಗಿದ ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಬೇಬಿ ಬಳಿಯ ಎನ್.ಜಿ ಪೆಟ್ರೋಲ್ ಬಂಕ್‌ನ್ನು ಕಳೆದ ಶನಿವಾರ(ಆ.19) ರಾತ್ರಿ ಧ್ವಂಸಗೊಳಿಸಿದ್ದು, ಆದಿತ್ಯವಾರ ಬೆಳಗ್ಗೆ ಸಿಬ್ಬಂದಿಗಳು ಕೆಲಸಕ್ಕೆಂದು ಬಂದಾಗ ಬೆಳಕಿಗೆ ಬಂದಿದೆ.

“>

ಎಲೆಕ್ಟ್ರಿಕ್ ಕೊಠಡಿಗೆ ಹಾಕಲಾಗಿದ್ದ ಬೀಗ ಒಡೆದು, ಸ್ಥಗಿತಗೊಳಿಸಲಾಗಿದ್ದ ಪಂಪ್‌ಗಳನ್ನು ಚಾಲು ಮಾಡಿ, ಎರಡೂ ಪಂಪ್‌ಗಳ ಪೆಟ್ರೋಲ್ ಹಾಗೂ ಡೀಸೆಲ್ ಗನ್‌ಗಳನ್ನು ನೆಲಕ್ಕೆ ಹಾಕಿ ಸುಮಾರು 10 ಸಾವಿರ ಲೀಟರ್‌ಗೂ ಅಧಿಕ ಪೆಟ್ರೋಲ್ ಹಾಗೂ ಡೀಸೆಲ್ ನೆಲಕ್ಕೆ ಹರಿಸಿ 10 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗುವಂತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಿರಿಯ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಬಸ್ತಿರಂಗಪ್ಪ ಅವರ ಮಾಲೀಕತ್ವದ ‘ಬಿ.ಎನ್.ಜಿ ಪೆಟ್ರೋಲ್ ಬಂಕ್’ ಅನ್ನು ಕಳೆದ ಜೂ.29ರಂದು ಪ್ರಾರಂಭಿಸಲಾಗಿತ್ತು.

ಶನಿವಾರ ರಾತ್ರಿ ಕಾವಲಿನಲ್ಲಿದ್ದ ಇಬ್ಬರು ಸಿಬ್ಬಂದಿಗಳು ರಾತ್ರಿ ಊಟಕ್ಕೆಂದು ಸಮೀಪದ ಅರಳಕುಪ್ಪೆ ಗ್ರಾಮಕ್ಕೆ ತೆರಳಿದ್ದರು. ಆದರೆ, ಮಳೆಯ ಕಾರಣಕ್ಕಾಗಿ ವಾಪಸ್ ಬಂದಿರಲಿಲ್ಲ.

ಈ ವಿಷಯ ತಿಳಿದ ದುಷ್ಕರ್ಮಿಗಳು ಮಧ್ಯ ರಾತ್ರಿ ದಾಳಿ ನಡೆಸಿ ಎಲೆಕ್ಟ್ರಿಕ್ ಕೊಠಡಿಗೆ ಹಾಕಲಾಗಿದ್ದ ಬೀಗ ಒಡೆದು ಸ್ಥಗಿತಗೊಳಿಸಲಾಗಿದ್ದ ಪಂಪ್ ಗಳನ್ನು ಆನ್ ಮಾಡಿದ್ದಲ್ಲದೆ, ಎರಡೂ ಪಂಪ್ ಗಳ ನಾಲ್ಕೂ ಗನ್‌ಗಳನ್ನು ನೆಲಕ್ಕಿಟ್ಟು ಸುಮಾರು 8 ಸಾವಿರ ಲೀಟರ್ ಡೀಸೆಲ್ ಹಾಗೂ 2 ಸಾವಿರ ಲೀಟರ್‌ಗೂ ಅಧಿಕ ಪೆಟ್ರೋಲ್ ನೆಲಕ್ಕೆ ಹರಿದು ಹೋಗುವಂತೆ ಮಾಡಿ ಪರಾರಿಯಾಗಿದ್ದಾರೆ. ಇದೇ ವೇಳೆ ಪಂಪ್, ಶೌಚಾಲಯ ಹಾಗೂ ಸೇಲ್ಸ್ ರೂಮಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಸಿಸಿ ಕ್ಯಾಮರಾ ಹಾಗೂ ರಾತ್ರಿ ಕಾವಲಿನ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿಯೇ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದು ಸ್ಥಳೀಯ ಪೆಟ್ರೋಲ್ ಬಂಕ್ ಮಾಲೀಕರು ಕುಮ್ಮಕ್ಕು ನೀಡಿ, ವ್ಯಾವಹಾರಿಕ ದ್ವೇಷದಿಂದಲೇ ಈ ದಾಂಧಲೆ ನಡೆಸಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ಉಂಟು ಮಾಡಿದೆ.

ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ.

ಘಟನೆಯ ಬಗ್ಗೆ ಮಾತನಾಡಿರುವ ಪೆಟ್ರೋಲ್ ಬಂಕ್ ಮಾಲೀಕ ಬಸ್ತಿರಂಗಪ್ಪ, “ಇದು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿ ಗೊತ್ತಿರುವವರದ್ದೇ ಕೃತ್ಯ. ಯಾಕೆಂದರೆ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವುದು ಚಾಲು ಆಗಬೇಕಾದರೆ ರಹಸ್ಯ ಸ್ವಿಚ್ ಒಂದು ಇರುತ್ತದೆ. ಅದು ಅಲ್ಲಿನ ಸಿಬ್ಬಂದಿಯ ಮುಖ್ಯಸ್ಥ ಮತ್ತು ಮಾಲೀಕನಿಗೆ ಬಿಟ್ಟರೆ ಯಾರಿಗೂ ಗೊತ್ತಿರುವುದಿಲ್ಲ. ಆದರೆ ಇದು ಗೊತ್ತಿರುವವರೇ ಮಾಡಿರುವ ಕೃತ್ಯ. 10 ಲಕ್ಷ ನಷ್ಟವುಂಟಾಗಿದೆ. ಹೊಸ ಪೆಟ್ರೋಲ್ ಬಂಕ್ ಆಗಿರುವುದರಿಂದ ಸಿಸಿಟಿವಿ ಹಾಕುವ ಕಾಮಗಾರಿ ನಡೆಯುತ್ತಿತ್ತು. ಅಷ್ಟರಲ್ಲಿ ಈ ರೀತಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ಪೆಟ್ರೋಲ್ ಮತ್ತು ಡೀಸೆಲ್ ಕಳ್ಳತನ ಮಾಡಿದ್ದರೆ ಬೇಸರವಾಗುತ್ತಿರಲಿಲ್ಲ. ಎರಡೂ ಪಂಪ್‌ಗಳ ನಾಲ್ಕೂ ಗನ್‌ಗಳನ್ನು ನೆಲಕ್ಕಿಟ್ಟು ಸುಮಾರು 8 ಸಾವಿರ ಲೀಟರ್ ಡೀಸೆಲ್ ಹಾಗೂ 2 ಸಾವಿರ ಲೀಟರ್‌ಗೂ ಅಧಿಕ ಪೆಟ್ರೋಲ್ ನೆಲಕ್ಕೆ ಹರಿದು ಹೋಗುವಂತೆ ಮಾಡಿದ್ದಾರೆ. ಇದಕ್ಕೆ ಏನು ಹೇಳೋಣ? ನನಗೆ 10 ಲಕ್ಷ ನಷ್ಟವಾಗಿದೆ’ ಎಂದು ಬಸ್ತಿರಂಗಪ್ಪ ಬೇಸರ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!