Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ಕುಮಾರಸ್ವಾಮಿ ಅಭಿನಂದನಾ ಸಮಾರಂಭ ಮುಂದೂಡಿಕೆ: ಸಿ.ಎಸ್.ಪುಟ್ಟರಾಜು

ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಜೂ.16 ರಂದು ಮಂಡ್ಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದ ನಾಗರಿಕ ಅಭಿನಂದನಾ ಸಮಾರಂಭವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಮಾಜಿ ಸಂಸದ ಸಿ .ಎಸ್ .ಪುಟ್ಟರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ ಅವರ ಮೇಲೆ ನ್ಯಾಯಾಲಯ ಕಾನೂನಾತ್ಮಕವಾಗಿ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಈ ಪ್ರಕರಣದ ವಿಚಾರಣೆ ಕಾನೂನಾತ್ಮಕವಾಗಿ ಮುಗಿದ ನಂತರ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ಅವರು ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀವು ಸಂಸದರನ್ನು ಆಯ್ಕೆ ಮಾಡುತ್ತಿಲ್ಲ. ಬದಲಿಗೆ ಕೇಂದ್ರದ ಪ್ರಭಾವಿ ಸಚಿವರನ್ನು ಗೆಲ್ಲಿಸುತ್ತಿದ್ದೀರಿ. ಹಾಗಾಗಿ ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದರು. ಆದ ಕಾರಣ ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಕುಮಾರಸ್ವಾಮಿಯವರು ಕಾನೂನಾತ್ಮಕವಾಗಿ ವಿಚಾರ ಬಗೆಹರಿದ ನಂತರ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಜೂ.15ರಂದು ಮಧ್ಯಾಹ್ನ 2 ಗಂಟೆಗೆ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಲಿದ್ದಾರೆ. ನಂತರ ನೂತನ ಲೋಕಸಭಾ ಸದಸ್ಯರ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ,ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದರ ಜೊತೆಗೆ ಮಂಡ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು, ಕಾರ್ಯಕರ್ತರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದರು.

ನಾಳೆ ನೂತನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದ್ದೂರಿನಲ್ಲಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಸ್ವಾಗತಿಸಲಿದ್ದಾರೆ. ಹಾಗೆಯೇ ಹನಕೆರೆ ಗ್ರಾಮದ ಬಳಿ ರಾಮಚಂದ್ರ ಅವರು ಸ್ವಾಗತಿಸಲಿದ್ದು ನಂತರ ಮಂಡ್ಯದ ಸಂಜಯ ವೃತ್ತದಿಂದ ತೆರೆದ ವಾಹನದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ನೂತನ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಕರೆತರೆಲಾಗುವುದು ಎಂದರು.

ಗೋಷ್ಠಿಯಲ್ಲಿ  ಮನ್ಮುಲ್ ಮಾಜಿ ಅಧ್ಯಕ್ಷ  ರಾಮಚಂದ್ರು, ಡಿ.ರಮೇಶ್, ನವೀನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!