Thursday, September 19, 2024

ಪ್ರಾಯೋಗಿಕ ಆವೃತ್ತಿ

ಗಂಗಾಮತಸ್ಥ ಸಮುದಾಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ; ಪ್ರಮೋದ್ ಮಧ್ವರಾಜ್

ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆಲ್ಲಬೇಕು, ಯಾರು ಸೋಲಬೇಕು ಎನ್ನುವ ತೀರ್ಮಾನ ಮಾಡುವ ಶಕ್ತಿ ಯಾರಿಗಾದರೂ ಇದ್ದರೆ ಅದು ಗಂಗಾಮತಸ್ಥ ಸಮುದಾಯಕ್ಕೆ ಮಾತ್ರ, ಆದರೆ ಗಂಗಾಮತಸ್ಥ ಸಮುದಾಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೇಸರ ವ್ಯಕ್ತಪಡಿಸಿದರು.

ಮಂಡ್ಯ ನಗರದ ಹಿಂದಿ ಭನದಲ್ಲಿ ಜಿಲ್ಲಾ ಗಂಗಾಮತಸ್ಥರ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, 70 ಶಾಸಕರನ್ನು ಆಯ್ಕೆ ಮಾಡುವಲ್ಲಿ ಗಂಗಾಮತಸ್ಥ ಸಮುದಾಯ ನಿರ್ಣಾಯಕವಾದರೂ, ರಾಜ್ಯದಲ್ಲಿ ಎಷ್ಟು ಶಾಸಕರಿದ್ದಾರೆ ಎಂದು ಪ್ರಶ್ನಿಸಿದರು.

28 ಲೋಕಸಭಾ ಕ್ಷೇತ್ರದಲ್ಲಿ ಒಂದೇ ಒಂದು ಎಂಪಿ ಗಂಗಾಮತಸ್ಥ ಸಮುದಾಯದಿಂದ ಆಯ್ಕೆಯಾಗಿಲ್ಲ. ನಮ್ಮ ಸಮುದಾಯದ ಎಂಪಿ ಒಬ್ಬರಾದರೂ ದೆಹಲಿಯಲ್ಲಿದ್ದರೆ ಕಡತ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಯಾವುದೇ ಕೆಲಸವಾಗುವುದಿಲ್ಲ ಎಂದರು.

28 ಲೋಕಸಭಾ ಕ್ಷೇತ್ರಗಳ ಪೈಕಿ ನನ್ನ ಪ್ರಕಾರ ಕನಿಷ್ಠ 10 ಶಾಸಕರು, 4 ಮಂದಿ ಲೋಕಸಭಾ ಸದಸ್ಯರು ಅತಿ ಶೀಘ್ರದಲ್ಲಿ ಆಯ್ಕೆಯಾಗುವ ನಿಟ್ಟಿನಲ್ಲಿ ಯೋಚನೆ ಮಾಡುವ ಕಾಲಘಟ್ಟ ಹತ್ತಿರ ಬಂದಿದೆ ಎಂಬುದನ್ನು ಹೇಳಲು ಇಚ್ಚಿಸುತ್ತೇನೆ. ಇಲ್ಲದಿದ್ದರೆ ಸಮುದಾಯದ ಯಾವುದೇ ಕೆಲಸಗಳಾಗುವುದಿಲ್ಲ. ಇದನ್ನು ಸಮುದಾಯ ಅರಿಯಬೇಕೆಂದರು.

ಒಂದು ಸಮುದಾಯ ಮೇಲಕ್ಕೆ ಬರಬೇಕಾದರೆ ಸರ್ಕಾರದ ಸಹಾಯ ಬಹಳ ಮುಖ್ಯ. ಕಟ್ಟ ಕಡೆಯ ವ್ಯಕ್ತಿ ಹಾಗೂ ಅದಾನಿ, ಅಂಬಾನಿ ಅಂತಹ ಶ್ರೀಮಂತರಿಗೂ ಸರ್ಕಾರ ಮುಖ್ಯ. ಸರ್ಕಾರದ ಸಹಾಯವಿಲ್ಲದೇ ಯಾರೊಬ್ಬರು ಬದುಕಲು ಆಗುವುದಿಲ್ಲ. ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ 37 ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿಲ್ಲ ಎಂದರು.

ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಸಮುದಾಯದ ಯಾರೊಬ್ಬರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನಾಗಲಿ ಕೇಳುತ್ತಿಲ್ಲ. ಆದರೆ, ನಾನು ಕೇಳುತ್ತಿದ್ದೇನೆ, ನಾನು ಕೇಳಿದ ತಕ್ಷಣ ಕೊಡುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡಿ ಸಮುದಾಯವನ್ನು ಸಂಘಟಿಸಲು ಮುಖಂಡರ ಸಭೆ ಮಾಡಿ ನಮ್ಮ ಶಕ್ತಿಯನ್ನು ತೋರಿಸಬೇಕಿದೆ ಎಂದರು.

ಜಿಲ್ಲಾ ಗಂಗಾಮತಸ್ಥ ಸಮುದಾಯದ ಜಿಲ್ಲಾಧ್ಯಕ್ಷ ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೀನು ಮಹಾ ಮಂಡಲಿ ಅಧ್ಯಕ್ಷ ಸಿದ್ದಲಿಂಗರಾಜು, ಜಿಲ್ಲಾ ಪಂಚಯತ್ ಮಾಜಿ ಅಧ್ಯಕ್ಷ ಲಿಂಗಯ್ಯ ಹಾಗೂ ಚೆನ್ನಮ್ಮ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!