Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಮೋದ್ ಮುತಾಲಿಕ್ ಜಿಲ್ಲೆಗೆ ಬಾರದಂತೆ ಶಾಶ್ವತ ನಿರ್ಬಂಧ ಹೇರಬೇಕು

ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಋಷಿಕುಮಾರ ಮತ್ತು ಪ್ರಮೋದ್ ಮುತಾಲಿಕ್ ರಂತಹ ವ್ಯಕ್ತಿಗಳು ಮಂಡ್ಯ ಜಿಲ್ಲೆಗೆ ಬಾರದಂತೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಜಗದೀಶ್ ಕೊಪ್ಪ, ಜಿಲ್ಲೆಯಲ್ಲಿ ಕೋಮುವಾದ ಸೃಷ್ಟಿ ಮಾಡಲು ಕಾಳಿ ಸ್ವಾಮಿ ಮತ್ತು ಮುತಾಲಿಕ್ ಜಿಲ್ಲೆಗೆ ಆಗಮಿಸಿದ್ದಾರೆ. ಅವರ ಆಗಮನದಿಂದ ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಹದಗೆಡಲಿದೆ ಹಿಗಾಗಿ ಅವರಿಗೆ ಶಾಶ್ವತ  ನಿರ್ಬಂಧ ವಿದಿಸುವಂತೆ ಆಗ್ರಹಿಸಿದರು.

ಪ್ರಮೋದ್ ಮುತಾಲಿಕ್ ಮತ್ತು ಋಷಿಕುಮಾರ ಜಿಲ್ಲೆಗೆ ಬಾರದಂತೆ ಜಿಲ್ಲಾಧಿಕಾರಿಗಳಿಗೆ ಕೋರಿಕೆ

ಮಂಡ್ಯ ಜಿಲ್ಲೆಯು ಕರ್ನಾಟಕದ ಪ್ರಮುಖ ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು ಇಲ್ಲಿನ ಜನತೆ, ರೈತರು, ದಲಿತರು, ಮುಸಲ್ಮಾನರು ಬೌದ್ಧರು ಮತ್ತು ಕ್ರೈಸ್ತರು ಎಂಬ ಬೇಧ ಭಾವವಿಲ್ಲದೆ ಅಣ್ಣ ತಮ್ಮಂದಿರಂತೆ ಬದುಕುತ್ತಿರುವುದು ಈ ನೆಲದ ಪ್ರಧಾನ ಸಂಸ್ಕೃತಿಯಾಗಿದೆ. ಮಂಡ್ಯದ ಈ ಗುಣವು ಇತರೆ ಜಿಲ್ಲೆಗಳಿಗೂ ಮಾದರಿಯಾದುದ್ದಾಗಿದೆ.

ಇಲ್ಲಿನ ರೈತ ಮತ್ತು ದಲಿತ ಸಂಘಟನೆಗಳು ಹಾಗೂ ಕೃಷಿ ಕೂಲಿಕಾರ್ಮಿಕರ ಸಂಘಟನೆಗಳಲ್ಲದೆ ಎಲ್ಲಾ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಮಂಡ್ಯ ಜಿಲ್ಲೆಯ ಈ ಭಾತೃತ್ವದ ಸಂಸ್ಕೃತಿಯ ಭವ್ಯಪರಂಪರೆಯನ್ನು ಸದಾ ಕಾಪಾಡಿಕೊಂಡು ಬಂದಿರುವುದು ವಿಶೇಷವಾಗಿದೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ 70ರ ದಶಕದ ನಂತರ ಯಾವುದೇ ಕೋಮುಗಲಭೆಗಳು ಈವರೆಗೆ ನಡೆಯಲು ಸಾಧ್ಯವಾಗಿಲ್ಲ. ಹಾಗೆಯೇ ಜಾತಿ ಗಲಭೆಗಳನ್ನೂ ನಿಗ್ರಹಿಸಿ ತಡೆಗಟ್ಟುವಲ್ಲಿ ಇಲ್ಲಿನ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಮುಖಂಡರು ಜಾಗ್ರತೆ ವಹಿಸಿ ಶಾಂತಿ ಕಾಪಾಡಿಕೊಂಡು ಬರುವಲ್ಲಿ ಶ್ರಮಿಸಿದ್ದಾರೆ.

ಇದೀಗ ಮಂಡ್ಯ ಜಿಲ್ಲೆಯ ಶಾಂತಿಯುತ ಬದುಕಿಗೆ ಜಿಲ್ಲೆಯ ಹೊರಗಿನ ವ್ಯಕ್ತಿಗಳಾದ ಬೆಂಗಳೂರಿನ ಕಾಳಿಮಠದ ಋಷಿಕುಮಾರಸ್ವಾಮಿ ಎಂಬಾತ ಮತ್ತು ಹುಬ್ಬಳ್ಳಿಯ ಆನಂದ ನಗರದ ನಿವಾಸಿ ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಮತ್ತಿತರರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಜುಮ್ಮಾ ಮಸೀದಿಯ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ಮಸೀದಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಮಂಡ್ಯ ಜಿಲ್ಲೆಯ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಋಷಿ ಕುಮಾರಸ್ವಾಮಿ ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ನಿನ್ನೆ ಬೆಂಗಳೂರಿನಲ್ಲಿ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಮೂಲಕ ಹೋಗಿ ಮಸೀದಿ ಇರುವ ಜಾಗದಲ್ಲಿ ಅಂಜನೇಯ ದೇವಾಲಯ ನಿರ್ಮಿಸುತ್ತೀನಿ ಎಂದು ಹೇಳಿಕೆ ನೀಡಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದು ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಕೋಮು ಸಂಘರ್ಷವನ್ನುಂಟುಮಾಡುವ ಪ್ರಯತ್ನವಾಗಿದೆ.

ಹಾಗಾಗಿ, ತಾವುಗಳು ದಯವಿಟ್ಟು ಶಾಂತಿ ಸೌಹಾರ್ದತೆಯನ್ನು ಹಾಳುಮಾಡುವ ಹಾಗೂ ಕೋಮು ಸಂಘರ್ಷವನ್ನು ಉದ್ದೇಪಿಸುವ ಇಂತಹ ವ್ಯಕ್ತಿಗಳ ಮೇಲೆ ಭಾರತೀಯ ದಂಡ ಸಂಹಿತೆ ಪ್ರಕಾರ ಮೊಕದ್ದಮೆ ಹಾಕುವುದರ ಮೂಲಕ ಇವರನ್ನು ಶಾಶ್ವತವಾಗಿ ಮಂಡ್ಯ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಬೇಕೆಂದು  ಜಿಲ್ಲಾಧಿಕಾರಿಯವರಿಗೆ ಮಂಡ್ಯದ ರೈತ,ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವೇದಿಕೆಯು ವಿನಂತಿಸಿದೆ.

ಪ್ರತಿಭಟನೆಯಲ್ಲಿ ಪ್ರೊ. ಹುಲ್ಕೆರೆ ಮಹದೇವು, ಗುರುಪ್ರಸಾದ್ ಕೆರಗೋಡು,  ಪ್ರೊ. ಜಿ. ಟಿ.ವೀರಪ್ಪ, ರೈತ ಸಂಘದ ಸುನಂದಾ ಜಯರಾಂ, ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ, ಜನಶಕ್ತಿಯ ಪೂರ್ಣಿಮ, ಎಂ.ಬಿ. ನಾಗಣ್ಣಗೌಡ, ಕೃಷ್ಣೇಗೌಡ ಟಿ, ಎಲ್, ಟಿ.ಯಶವಂತ್, ಸಿ.ಕುಮಾರಿ, ಟಿಡಿ ನಾಗರಾಜ್, ಹಾಲಹಳ್ಳಿ ಮುಕುಂದಪ್ಪ, ಎಂ.ವಿ.ಕೃಷ್ಣ ಕುಬೇರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!