Saturday, May 18, 2024

ಪ್ರಾಯೋಗಿಕ ಆವೃತ್ತಿ

ಹೃದಯ ಕಾಯಿಲೆಗಳು ಬರಲು ಕಾರಣವೇನು…? ಹೃದಯ ತಜ್ಞ ಡಾ.ಆನಂದ್ ಲಿಂಗನ್ ಏನೇಳುತ್ತಾರೆ….ಇಲ್ಲಿದೆ ಮಾಹಿತಿ…

ಬದಲಾದ ಮನುಷ್ಯನ ಜೀವನ ಶೈಲಿ, ಕಡಿಮೆ ದೈಹಿಕ ಶ್ರಮ ಹಾಗೂ ಅಶುದ್ದ ಆಹಾರ ಪದಾರ್ಥಗಳ ಬಳಕೆಯಿಂದ ಹೃದಯ ಸಮಸ್ಯೆಗಳು ಹೆಚ್ಚಳವಾಗಿದ್ದು, ನವಜಾತ ಶಿಶುವಿನಿಂದ, ವಯೋವೃದ್ದರವರೆಗಿನ ಎಲ್ಲ ವಯಸ್ಕರಿಗೂ ಹೃದಯ ಕಾಯಿಲೆಯ ಸಂಭವವಿದ್ದು, ಈ ಬಗ್ಗೆ ಜಾಗೃತಿ ವಹಿಸುವುದು ಅತ್ಯಗತ್ಯವೆಂದು ನಾರಾಯಣ ಹೃದಯಾಲಯದ ಹೃದಯ ತಜ್ಞ ಡಾ.ಆನಂದ್ ಲಿಂಗನ್ ತಿಳಿಸಿದರು.

ಮಂಡ್ಯ ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೆ.29ರ ವಿಶ್ವ ಹೃದ್ರೋಗ ದಿನಾಚರಣೆ ಅಂಗವಾಗಿ ಪತ್ರಕರ್ತರೊಂದಿಗೆ ಆಯೋಜನೆಗೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ರಕ್ತ ಕಾಯಿಲೆಯ ಉಲ್ಬಣ, ಧೂಮಪಾನ, ನಿಗದಿಗಿಂತ ಹೆಚ್ಚು ತೂಕ ಹಾಗೂ ಅಶುದ್ದ ಆಹಾರ ಸೇವನೆಯಿಂದ ಹೃದಯ ಕಾಯಿಲೆಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಎಲ್ಲ ವಯೋಮಾನದವರೂ ಜಾಗೃತಿ ವಹಿಸಿ, ಸೂಕ್ತ ಚಿಕಿತ್ಸೆ ಹಾಗೂ ಪ್ರತಿನಿತ್ಯ ವ್ಯಾಯಾಮ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಹೃದಯ ಕಾಯಿಲೆಯು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರನ್ನು ಕಾಡುತ್ತಿದ್ದು, ಪುರುಷರ ಜೀವನ ಕ್ರಮಗಳು ಬದಲಾವಣೆಯಾಗಬೇಕು. ಮದ್ಯಪಾನ ಹಾಗೂ ಧೂಮಪಾನವನ್ನು ತ್ಯಜಿಸಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕೆಂದರು.

ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಾಯಿಲೆಗೆ ಒಳಗಾದವರು ಜಾಗೃತಿಯಿಂದ ಇರಬೇಕು. ಆರೋಗ್ಯದ ಬಗ್ಗೆ ನಿಗಾವಹಿಸಿ ಕಾಲ ಕಾಲಕ್ಕೆ ತಪಾಸಣೆಗೊಳಗಾಗಬೇಕು. ದೇಹವನ್ನು ದಂಡಿಸಬೇಕು. ಉದಾಸೀನ ಪ್ರವೃತ್ತಿ ತಾಳಿದರೆ ಮೆದುಳು ಪಾರ್ಶ್ವವಾಯುವಿಗೆ ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಆಹಾರ ಪದ್ದತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿರುವುದು ಹೃದಯ ಕಾಯಿಲೆಗೆ ಆಹ್ವಾನ ನೀಡಿದಂತಾಗಿದೆ. ಬೇಕರಿ ತಿನಿಸುಗಳನ್ನು ತ್ಯಜಿಸಿ, ಹಣ್ಣು ತರಕಾರಿ, ರಾಗಿ ಹಾಗೂ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಬೇಕು. ಪಾಲಿಸ್ ಅಕ್ಕಿಯನ್ನು ತ್ಯಜಿಸಿ ತೌಡಿನಾಂಶ ಇರುವ ಅಕ್ಕಿ ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಬಾಣಂತಿ ಮಹಿಳೆಯರು ಮೂಢನಂಬಿಕೆಗೆ ಜೋತು ಬಿದ್ದು ಪೌಷ್ಠಿಕಾಂಶ ಆಹಾರವನ್ನು ಸೇವಿಸದಿದ್ದರೆ ಅದು ಮೊಲೆ ಹಾಲು ಕುಡಿಯುವ ಮಕ್ಕಳ ಮೇಲೂ ಪರಿಣಾಮ ಬೀರಲಿದ್ದು, ಮೈಸೂರು ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ನವಜಾತ ಶಿಶುವಿಗೂ ಹೃದಯ ಸಮಸ್ಯೆಗಳು ಗೋ‍ಚರಿಸಿರುವುದು ಸಾಬೀತಾಗಿದ್ದು, ಬಾಣಂತಿಯರು ತರಕಾರಿ ಹಾಗೂ ಸೊಪ್ಪಿನಾಂಶ ಇರುವ ಆಹಾರ ಸೇವಿಸಬೇಕೆಂದರು.

ಸದಾ ಒತ್ತಡದ ಬದುಕಿನಲ್ಲಿ ಬಾಳ್ವೆ ನಡೆಸುವ ನಾವೆಲ್ಲರೂ ಪ್ರತಿನಿತ್ಯ ಕನಿಷ್ಟ 30 ನಿಮಿಷಗಳ ವಾಕಿಂಗ್, ಪ್ರಾಣಾಯಾಮ, ಮನಶಾಂತಿ ವೃದ್ದಿಯಂತಹ ನೈಸರ್ಗಿಕ ಪ್ರವೃತ್ತಿಗಳನ್ನು ರೂಢಿಸಿಕೊಳ್ಳಬೇಕೆಂದರು.

ಸಂವಾದದಲ್ಲಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆದರ್ಶ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!