Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಚ್ಯುಟಿ – ಮಾಸಿಕ ಪಿಂಚಣಿಗೆ ಆಗ್ರಹಿಸಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಗ್ರಾಚ್ಯುಟಿ ಹಾಗೂ ಮಾಸಿಕ ಪಿಂಚಣಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ನಿವೃತ್ತ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಕಳೆದ 48 ವರ್ಷಗಳಲ್ಲಿ ಸುಮಾರು 20 ರಿಂದ 30 ವರ್ಷಗಳ ಕಾಲ ನಿರಂತರವಾಗಿ ದುಡಿದು ನಿವೃತ್ತರಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕನಿಷ್ಠ ರೂ.5,000 (ಐದು ಸಾವಿರ) ಮಾಸಿಕ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ರಾಜ್ಯದಲ್ಲಿಯೂ ಗ್ರಾಚ್ಯುಟಿ ಸೌಲಭ್ಯವನ್ನು ಶಾಸನಾತ್ಮಕವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತ್ತರಾದಾಗ ಅತೀ ಕನಿಷ್ಠ ಪ್ರಮಾಣದ ಇಡುಗಂಟನ್ನು ನೀಡಿ ಸರ್ಕಾರ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ನಿವೃತ್ತರಾದ ನಂತರ ಜೀವನಕ್ಕೆ ಅಗತ್ಯವಾಗಿರುವ ಪಿಂಚಣಿ, ಆರೋಗ್ಯದಂತಹ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಲು ಆಸಕ್ತಿ ವಹಿಸುವುದಿಲ್ಲ. ಇದರ ಪರಿಣಾಮ ನಿವೃತ್ತಿಗೊಂಡಿರುವ ಸಾವಿರಾರು ಸಂಖ್ಯೆಯ ಕಾರ್ಯಕರ್ತೆಯರು-ಸಹಾಯಕಿಯರು ಬಿಪಿ, ಶುಗರ್ ಮೊದಲಾದ ಆರೋಗ್ಯ ಸಮಸ್ಯೆಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.
ಔಷಧಿ-ಉಪಚಾರಕ್ಕೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಜೀವನ ನಿರ್ವಹಣೆಯು ಕಷ್ಟಕರವಾಗುತ್ತಿದೆ.
ಆದುದರಿಂದ ಸರ್ಕಾರ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕನಿಷ್ಠ ರೂ.5000 (ಐದುಸಾವಿರ) ಮಾಸಿಕ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಬೇಕು ಹಾಗೂ ಗ್ರಾಚ್ಯುಟಿ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಶಿವಲಿಂಗಮ್ಮ, ಪುಟ್ಟತಾಯಮ್ಮ, ರುಕ್ಮಿಣಮ್ಮ, ಪಾರ್ವತಮ್ಮ, ಮೀನಾಕ್ಷಿ, ಸುಲೋಚನ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!