Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರ್ ಎ ಪಿ ಸಿ ಎಂ ಎಸ್ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಫೈಟ್ ಹೆಂಗಿತ್ತು ಗೊತ್ತಾ?

ಇಡೀ ಏಷ್ಯಾದಲ್ಲೇ ಪ್ರಥಮ ಎಂದು ಗಮನ ಸೆಳೆದಿರುವ ಮಂಡ್ಯದ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಡುವೆ ಜಿದ್ದಾಜಿದ್ದಿನ ಫೈಟ್ ನಡೆದಿದೆ.

ಇಂದು ನಗರದ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಎದುರು ಜನಜಂಗುಳಿಯೇ ನೆರೆದಿತ್ತು.ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ನೆರೆದು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮತದಾರರನ್ನು ಮನವಿ ಮಾಡಿದರು.

ಎರಡೂ ಪಕ್ಷಗಳಿಂದ ಕಣದಲ್ಲಿದ್ದ ಅಭ್ಯರ್ಥಿಗಳು ಕಳೆದ ಹದಿನೈದು ದಿನಗಳಿಂದ ಚುನಾವಣೆಯ ತಂತ್ರಗಾರಿಕೆಯಲ್ಲಿ ನಾನಾ ಪಟುಗಳನ್ನು ಹಾಕಿದ್ದರು.

ಅದರಂತೆ ಮತದಾನದ ದಿನವಾದ ಇಂದು ಮತದಾನ ನಡೆದರೂ ನ್ಯಾಯಾಲಯದ ಆದೇಶದ ಪ್ರಕಾರ ಫಲಿತಾಂಶ ಘೋಷಣೆಯಾಗಿಲ್ಲ.

ಆದ ಕಾರಣ ಕಣದಲ್ಲಿದ್ದ ಅಭ್ಯರ್ಥಿಗಳಿಗೆ ಫಲಿತಾಂಶ ಘೋಷಣೆ ಆಗುವವರೆಗೂ ತಳಮಳ ತಪ್ಪಿದ್ದಲ್ಲ.

ನಿತ್ಯಸಚಿವ ಎಂದೇ ಕರ್ನಾಟಕದ ರಾಜಕೀಯ ಇತಿಹಾಸದ ಪುಟಗಳಲ್ಲಿ ಹೆಸರುವಾಸಿಯಾಗಿರುವ ಕೆ.ವಿ.ಶಂಕರಗೌಡರ ಕನಸಿನ ಕೂಸು ಮಂಡ್ಯದ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘ. ಶಂಕರಗೌಡರ ನಂತರ ಹಲವು ಸಹಕಾರಿ ಧುರೀಣರ ಸಹಕಾರದಿಂದ ಆರ್ ಎಪಿಸಿಎಂಎಸ್ ಇಂದು ಆರ್ಥಿಕವಾಗಿ ಸಾಕಷ್ಟು ಬೆಳೆದಿದೆ.

ರೈತರ ಸೊಸೈಟಿ,ಸಭಾಂಗಣ,ಅಂಗಡಿ ಮಳಿಗೆಗಳ ಬಾಡಿಗೆಯಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಆಡಳಿತ ಮಂಡಳಿಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಭಾರೀ ಹಣಾಹಣಿಯೇ ನಡೆದಿದೆ.

ಎರಡೂ ಪಕ್ಷಗಳ ಅಭ್ಯರ್ಥಿಗಳು ತನು-ಮನದಿಂದ ಚುನಾವಣೆಗೆ ಧುಮುಕಿ ಸಾಕಷ್ಟು ಧನವನ್ನು ಖರ್ಚು ಮಾಡಿದ್ದಾರೆ. ಲಕ್ಷ ಲಕ್ಷ ಹಣ ಹಾಗೂ ಉಡುಗೊರೆಗಳು ಮತದಾರರ ಕೈ ತಲುಪಿಸುವಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಿಂದೆ ಬಿದ್ದಿಲ್ಲ.

ದೇವರ ಮುಂದೆ ಆಣೆ-ಪ್ರಮಾಣ ಕೂಡ ನಡೆದು ಹೋಗಿದೆ. ಪ್ರತಿಷ್ಟೆಯ ಕಣವಾಗಿದ್ದ ಆರ್ ಎಪಿಸಿಎಂಎಸ್ ಚುನಾವಣೆಯಲ್ಲಿ ಶತಾಯಗತಾಯ ತಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕೆಂದು ಶಾಸಕರಾದಿಯಾಗಿ ಮುಖಂಡರು ಹಗಲು- ರಾತ್ರಿಯೆನ್ನದೆ ಮತದಾರರ ಮನವೊಲಿಸಲು ಶ್ರಮ ಪಟ್ಟಿದ್ದಾರೆ.

ಒಬ್ಬ ಮತದಾರ ಹಲವು ಅಭ್ಯರ್ಥಿಗಳಿಗೆ ಮತ ಹಾಕುವ ಅವಕಾಶ ಇರುವುದರಿಂದ ಆತನಿಗೆ ಹತ್ತಾರು ಸಾವಿರ ರೂಪಾಯಿ ಅವನ ಕೈ ಸೇರಿದೆ. ಸೊಸೈಟಿಗಳಿಂದ ಮತದಾನದ ಹಕ್ಕು ಪಡೆದಿರುವ 42 ಮತದಾರರಿಗೆ ಲಕ್ಷಾಂತರ ಹಣ ತಲುಪಿದೆ ಎಂದು ಅಭ್ಯರ್ಥಿಗಳ ಬೆಂಬಲಿಗರೇ ಹೇಳುತ್ತಾರೆ.

ಒಟ್ಟಿನಲ್ಲಿ ಈ ಬಾರಿಯ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘಕ್ಕೆ ನಡೆದ ಚುನಾವಣೆ ಹಿಂದೆಂದೂ ಕಾಣದಂತಹ ಹಣದ ಮೇಲೆಯೇ ನಡೆದಿದೆ. ನ್ಯಾಯಾಲಯದ ಆದೇಶ ಬರುವವರೆಗೆ ಫಲಿತಾಂಶ ಘೋಷಿಸುವಂತಿಲ್ಲದ ಕಾರಣ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ.

ಫಲಿತಾಂಶದ ದಿನ ಬೇಗ ಬರಲಿ ಎಂದು ಅಭ್ಯರ್ಥಿಗಳು ಕಾಯುವಂತಾಗಿದೆ.


ಇಷ್ಟೊಂದು ಹಣ ಖರ್ಚು ಮಾಡಿ ಆಯ್ಕೆ ಆಗುವ ಸದಸ್ಯರು ಸಂಘವನ್ನು ಹೇಗೆ ಉದ್ಧಾರ ಮಾಡ್ತಾರೆ ಎಂಬ ಪ್ರಶ್ನೆ ಜನರದ್ದಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!