ರಾಜ್ಯದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಹಿನ್ನಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದ್ದಾರೆ.
ಮೇ 7ರಂದು ಕ್ಷೇತ್ರದ ಉಪ ಚುನಾವಣೆ ನಡೆದಿತ್ತು. ಈ ಉಪ ಚುನಾವಣೆಯಲ್ಲಿ ರಾಜ್ಯದ ಆಡಳಿತ ಪಕ್ಷ ನಿಧನರಾಗಿದ್ದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರನ್ನು ಅಭ್ಯರ್ಥಿ ಮಾಡಿತ್ತು. ಪ್ರತಿಪಕ್ಷವಾದ ಬಿಜೆಪಿ-ಜೆಡಿಎಸ್ನಿಂದ ಮಾಜಿ ಶಾಸಕ, ಸಚಿವ ರಾಜಾ ನರಸಿಂಹ ನಾಯಕ (ರಾಜೂಗೌಡ) ಅಭ್ಯರ್ಥಿಯಾಗಿದ್ದರು.
ರಾಜಾ ವೇಣುಗೋಪಾಲ ನಾಯಕ ಅವರು 1,14,886 ಮತಗಳನ್ನು ಪಡೆದು ಎದುರಾಳಿಯಾಗಿದ್ದ ಬಿಜೆಪಿಯ ರಾಜೂ ಗೌಡ 18,320 ಮತಗಳ ಅಂತರದಿಂದ ಸೋಲಿಸಿದ್ದಾರೆ.ರಾಜೂಗೌಡ ಅವರು 96,566 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ತಂದೆಯ ನಿಧನನದ ಕಾರಣಕ್ಕೆ ಅನುಕಂಪದ ಲಾಭ ಪಡೆದಿದ್ದ ರಾಜಾ ವೇಣುಗೋಪಾಲ ನಾಯಕ ಮೊದಲ ಬಾರಿಗೆ ಚುನಾವಣೆ ಎದುರಿಸಿದರು. ಕ್ಷೇತ್ರದ ಮೂರು ಬಾರಿಯ ಶಾಸಕ, ಮಾಜಿ ಸಚಿವ ರಾಜೂ ಗೌಡರನ್ನು ಸೋಲಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.




