Friday, September 20, 2024

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರ ಸ್ಥಳ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಪ್ರಕರಣ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸೋಮವಾರ ಮಳವಳ್ಳಿ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಪೊಲೀಸ್ ಅಧಿಕಾರಿಗಳು ಮತ್ತು ಮನೆಯ ಮಾಲೀಕನಿಂದ ಹಲವು ಮಾಹಿತಿಯನ್ನು ಪಡೆದರು.

ನಂತರ ಬಾಲಕಿ ದಿವ್ಯ ನಡೆದು ಕೊಂಡು ಟ್ಯೂಷನ್ ಸೆಂಟರ್ ಗೆ ಬರುತ್ತಿದ್ದ ಕಾಲು ದಾರಿಯಲ್ಲಿ ಸ್ವತಃ ನಡೆದುಕೊಂಡೇ ಆಕೆಯ ಮನೆ ತಲುಪಿದ ಅಲೋಕ್ ಕುಮಾರ್ ಬಾಲಕಿಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಪೈಶಾಚಿಕವಾಗಿ ತಮ್ಮ ಮಗುವನ್ನು ಹತ್ಯೆ ಮಾಡಿರುವ ಆರೋಪಿಗೆ ಶೀಘ್ರವಾಗಿ ಗಲ್ಲು ಶಿಕ್ಷೆ ಕೊಡಿಸುವ ಕುರಿತು ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೋಷಕರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅವರು ಇನ್ನೂ 15 ದಿನಗಳ ಒಳಗಾಗಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿ ಕಠಿಣ ಶಿಕ್ಷೆಯಿಂದ ಆತ ಯಾವುದೇ ಕಾರಣಕ್ಕೂ ತಪ್ಪಿಸಿ ಕೊಳ್ಳದಂತೆ ಎಲ್ಲಾ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಾರ್ವಜನಿಕ ಸಂಪರ್ಕ ಸಭೆ

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಳವಳ್ಳಿ  ಪಟ್ಟಣದ ಪುರ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಲೋಕ್‌ಕುಮಾರ್, 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ, ಒಬ್ಬ ಕಾಮ ಪಿಶಾಚಿಯಿಂದ ಇಡೀ ರಾಜ್ಯವೇ ನಲುಗಿದೆ, ಬಾಲಕಿ ಕೊಲೆ ಆರೋಪಿ ವಿರುದ್ದ 12-15 ದಿನಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿ ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕ ಕೆಲಸ ಮಾಡಲಿದೆ ಎಂದರು.

ಕೆಲವು ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸದ ವೇಳೆ ಒತ್ತಡ ಇರುತ್ತದೆ, ಆದರೇ ಈ ಪ್ರಕರಣದಲ್ಲಿ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ, ನಮ್ಮ ಇಲಾಖೆಯಲ್ಲಿಯೂ ಕೆಲವು ಲೋಪದೋಷಗಳಿದ್ದು, ಮಾನವ ಎಂದೆ ಮೇಲೆ ಎಲ್ಲವೂ ಇದ್ದೇ ಇರುತ್ತದೆ. ನಾವು ಕರ್ತವ್ಯ ನಿರ್ವಹಿಸುವ ಎಲ್ಲರನ್ನು ಸಮಾನವಾಗಿ ಕಾಣಬೇಕು, ಆ ಮಾತ್ರ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದರು.

ಸಾರ್ವಜನಿಕರ ದೂರಿನಂತೆ ಗಾಂಜಾ ಮಾರಾಟ ಸೇರಿದಂತೆ ಅನೈತಿಕ ಚಟುವಟಿಕೆಗಳ ತಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ, ಗ್ರಾಮೀಣ ಪ್ರದೇಶದಲ್ಲಿನ ಮದ್ಯ ಮಾರಾಟ ತಡೆ ಸಂಬಂಧ ಅಬಕಾರಿ ಇಲಾಖೆಯ ಜತೆ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಮನೆಯ ಗಂಡು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ರೀತಿಯ ನಡವಳಿಕೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು, ಸಮಾಜದಲ್ಲಿ ಜವಾಬ್ದಾರಿ ಅರಿತು ಎಲ್ಲರೂ ಜವಾಬ್ದಾರಾಗಬೇಕು, ಅಪರಾಧ ನಡೆದಾಗ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಅಂತಹ ಘಟನೆಯ ನಡೆಯುವ ಮೊದಲೇ ಎಲ್ಲರೂ ಕಾನೂನು ಪಾಲನೆ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಮಧುಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಡಿವೈಎಸ್ ಪಿ ಎನ್.ನವೀನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ನಾಗರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!