Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೌರಕಾರ್ಮಿಕರ ದಿನಾಚರಣೆಯು ರಾಷ್ಟ್ರೀಯ ಹಬ್ಬಗಳಂತೆ ಮುಖ್ಯವಾದದ್ದು: ರವಿಕುಮಾರ್

ನಗರ ಹಾಗೂ ಇಡೀ ಊರನ್ನೇ ಸ್ವಚ್ಚವಾಗಿ ಆರೋಗ್ಯವಾಗಿಡುವ ಪೌರಕಾರ್ಮಿಕ ದಿನಾಚರಣೆ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯಷ್ಟೇ ಪ್ರಮುಖವಾದದ್ದು ಎಂದು ಶಾಸಕರಾದ ಪಿ.ರವಿಕುಮಾರ್ ಅವರು ತಿಳಿಸಿದರು.

ಮಂಡ್ಯ ನಗರಸಭೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರ ಕಾರ್ಮಿಕ ದಿನಾಚರಣೆ ಮಾಡಲು ತುಂಬಾ ಸಂತೋಷವಾಗುತ್ತದೆ. ಪೌರಕಾರ್ಮಿಕರು ಇಲ್ಲ ಎಂದರೆ ನಗರವು ಇಷ್ಟು ಸ್ವಚ್ಚವಾಗಿ ಕಾಣುತ್ತಿರಲಿಲ್ಲ ಎಂದರು.

ಪೌರಕಾರ್ಮಿಕರಿಗೆ ಸರ್ಕಾರ 18 ಸಾವಿರ ವೇತನ ನೀಡುತ್ತಿದೆ. ಜಿಲ್ಲೆಯ 100 ಜನ ಪೌರಕಾರ್ಮಿಕರು ಖಾಯಂ ಆಗಿದ್ದು, ಉಳಿದ 200 ಜನರನ್ನು ಹಂತಹಂತವಾಗಿ ಖಾಯಂ ಮಾಡಲು ಕ್ರಮಕೈಗೊಳ್ಳಲಾಗುವುದು. ಕೋವಿಡ್ ದಿನಗಳಲ್ಲಿ ಪೌರಕಾರ್ಮಿಕರ ಕೆಲಸವನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಸ್ವಚ್ಛತೆ ಕಾಪಾಡುವ ಸಿಪಾಯಿಗಳು ಎಂದರು.

nudikarnataka.com

ಪೌರಕಾರ್ಮಿಕರು‌ ಸ್ವಚ್ಛತಾ ಕೆಲಸದಲ್ಲಿ ಸದಾ ತೊಡಗಿರುತ್ತಾರೆ. ಈ ಹಿನ್ನಲೆಯಲ್ಲಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಾವು ವಾಸಿಸುವ ಸ್ಥಳಗಳು ಸ್ವಚ್ಛತೆ ಕಾಪಾಡಲು ದುಡಿಯುವ ಪೌರಕಾರ್ಮಿಕರನ್ನು ಹಾಗೂ ಅವರ ವೃತ್ತಿಯನ್ನು ಗೌರವದಿಂದ ಕಾಣಬೇಕು. ಪೌರಕಾರ್ಮಿಕರು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಸರ್ಕಾರದ ವತಿಯಿಂದ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಆನೇಕ ಯೋಜನೆಗಳನ್ನು ರೂಪಿಸಲಾಗಿದೆ. ವಸತಿ ರಹಿತರಿಗೆ ಗೃಹಭಾಗ್ಯ ಯೋಜನೆಯಡಿ ಸುಮಾರು 85 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ. 7.50 ಲಕ್ಷ ರೂ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ನೀಡಲಾಗುವುದು. ಇನ್ನೂ 15 ಫಲಾನುಭವಿಗಳಿಗೆ ಗೃಹ ಭಾಗ್ಯ ಯೋಜನೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಹಕ್ಕು ಪತ್ರ ನೀಡಿ ನಂತರ ಗೃಹಭಾಗ್ಯ ಯೋಜನೆ ಒದಗಿಸಲಾಗುವುದು. ಪೌರಕಾರ್ಮಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರ ವೃತ್ತಿ ಮಾಡಿಕೊಂಡು ಮಂಡ್ಯ ಜಿಲ್ಲೆಗೆ ಸೀಮಿತವಾಗುವುದು ಬೇಡ. ವಿದ್ಯಭ್ಯಾಸ ಮಾಡಿ ಬೇರೆ ಬೇರೆ ಉದ್ಯೋಗಗಳನ್ನು ಮಾಡಿ ರಾಜ್ಯ, ರಾಷ್ಟ್ರಾದ್ಯಂತ ಹೆಸರು ಮಾಡಿ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ‌ ತುಷಾರ ಮಣಿ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ರೂಪಿಸಿದಾಗ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಹಲವಾರು ಶುಲ್ಕಗಳಿಗೆ ಹಣ ಪಾವತಿಸಲು ಅನುದಾನ ಮೀಸಲಿಡಲಾಗಿದೆ. ಇದಕ್ಕಾಗಿ ಯಾರು ಅರ್ಜಿ ಸಲ್ಲಿಸಲು ಮುಂದೆ ಬರುವುದಿಲ್ಲ. ಪೌರಕಾರ್ಮಿಕರು ಉದ್ದಿಮೆಗಳನ್ನು ಪ್ರಾರಂಭಿಸಿ ಉದ್ಯೋಗದಾತರಾಗುವ ನಿಟ್ಟಿನಲ್ಲಿ ಏಕೆ ಚಿಂತಿಸಬಾರದು ಎಂದು ಅಭಿಪ್ರಾಯ ‌ವ್ಯಕ್ತ‌ಪಡಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!