Friday, September 20, 2024

ಪ್ರಾಯೋಗಿಕ ಆವೃತ್ತಿ

ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ : ರವೀಂದ್ರ ಶ್ರೀಕಂಠಯ್ಯ

ನಮ್ಮ ಕುಟುಂಬದಲ್ಲಿ ಜನಸೇವೆ ಮಾಡು, ಬಡವರ ಪರ ಇರು ಎಂದು ನನ್ನನ್ನು ರಾಜಕಾರಣಕ್ಕೆ ಕಳುಹಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಎಲ್ಲಾ ವರ್ಗದ ಜನರ ಜೊತೆ ನಿಂತು ನ್ಯಾಯ ಸಿಗಲು ಹೋರಾಟ ನಡೆಸುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಪಂಪಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗರಹಳ್ಳಿ ಮಂಟಿಯ 300 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ರಾಜಕಾರಣಕ್ಕೆ ಬರುವುದು ಜನರ ಸೇವೆ ಮಾಡಲು. ಸಮಾಜದಲ್ಲಿರುವ ಬಡವರು, ಅಶಕ್ತರಿಗೆ ನಮ್ಮ ಕೈಲಾದ ಸೇವೆ ಮಾಡುವ ಮೂಲಕ ಸಮಾಜದಲ್ಲಿರುವ ಬಡವರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಆಶಯ ವಾಗಬೇಕು. ಪಕ್ಷ, ರಾಜಕೀಯ ಮಾಡುವುದು ಬೇರೆ,ಆದರೆ ಜನರ ಪರ ಅಭಿವೃದ್ಧಿ ಕೆಲಸ ಮಾಡುವಾಗ ಪಕ್ಷಾತೀತವಾಗಿ ಇರಬೇಕು ಎಂದರು.

ಮೊಗರಹಳ್ಳಿ ಮಂಟಿಯ ನಿವಾಸಿಗಳಿಗೆ ಹಕ್ಕುಪತ್ರ ಕೊಡುವುದು ಹೇಗೆ ಎಂಬುದು ನನ್ನ ಆಲೋಚನೆಯಾದರೆ, ಅನೇಕ ಮುಖಂಡರು ಇದನ್ನು ತಡೆಯುವುದು ಹೇಗೆ ಎಂದು ಪ್ರಯತ್ನ ನಡೆಸಿದ್ದರು. ಅವರಿಗೆ ಈ ಜಾಗ 10 ರಿಂದ 15 ಲಕ್ಷ ಬೆಲೆ ಬಾಳುತ್ತದೆ. ಇಂತಹ ಆಸ್ತಿಯನ್ನು ಏಕಾಏಕಿ ಸುಮ್ಮನೆ ಕೊಡುವುದು ಹೇಗೆ ಎಂಬ ದುರುದ್ದೇಶ ಅವರದ್ದು. ಅದಕ್ಕಾಗಿ ಇದನ್ನು ತಪ್ಪಿಸಲು ಅನೇಕ ಪ್ರಯತ್ನ ಮಾಡಿದರು‌. ಆದರೆ ನಾನು ಒಳ್ಳೆಯ ಅಧಿಕಾರಿಗಳ ಬೆಂಬಲ ಪಡೆದು ಇಂದು ಇಲ್ಲಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿರುವುದು ಸಂತೋಷ ತಂದಿದೆ. ನಾವು ಸಣ್ಣತನವನ್ನು ಬಿಟ್ಟು ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ ಎಂದು ತಿಳಿದುಕೊಂಡರೆ ಒಳ್ಳೆಯದು ಎಂದರು.

ಖಾತೆ ಮಾಡಿಸಿಕೊಳ್ಳಿ
ಈ ಹಕ್ಕು ಪತ್ರವನ್ನು ಯಾರಾದರೂ ಕೇಳಿದರೆ ಕೊಡಬಾರದು. ಬಹಳ ಜೋಪಾನವಾಗಿ ಇಟ್ಟುಕೊಂಡು, ನೇರವಾಗಿ ಪಂಚಾಯಿತಿಗೆ ಹೋಗಿ ಖಾತೆ ಮಾಡಿಸಿಕೊಳ್ಳಬೇಕು.ನಾನು ಖಾತೆ ಮಾಡಿಸಿಕೊಡುತ್ತೇನೆ ಎಂದು ಯಾರಾದರೂ ದಲ್ಲಾಳಿ ಕೆಲಸ ಮಾಡಲು ಬಂದರೆ ದಯವಿಟ್ಟು ಯಾರಿಗೂ ಒಂದು ರೂಪಾಯಿ ಕೊಡಬಾರದು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೆಂದಿಲ್ ಹಾಗೂ ಕಂದಾಯ ನಿರೀಕ್ಷಕ ಉಮೇಶ್ ರವರು ಬಹಳ ಶ್ರಮವಹಿಸಿ ಹಕ್ಕುಪತ್ರ ಸಂಬಂಧ ಸಾಕಷ್ಟು ಹೋರಾಟ ಮಾಡಿದ್ದಾರೆ. ಸೆಂದಿಲ್ ಹಾಗೂ ಉಮೇಶ್ ರವರು ಹಕ್ಕುಪತ್ರ ಕೊಡಿಸುವ ಮೂಲಕ ನನ್ನ ಕೈ ಬಲಪಡಿಸುವ ಕೆಲಸ ಮಾಡಿದ್ದಾರೆ. ತಹಶೀಲ್ದಾರ್ ಅಶ್ವಿನಿ ಇವರು ಸೇರಿದಂತೆ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

‘ಮಾರಿಕಣ್ಣು ಹೋರಿ ಮ್ಯಾಗೆ’ ಎನ್ನುವ ಹಾಗೆ ಮೊಗರಹಳ್ಳಿ ಮಂಟಿಯ ಹಕ್ಕುಪತ್ರದ ಮೇಲೆ ಹಲವರ ಕಣ್ಣು ಬಿದ್ದಿದೆ. ನೀವು ಯಾರಿಗೂ ಅಂಜಬೇಕಾಗಿಲ್ಲ, ಇದು ನಿಮಗೆ ಸೇರಬೇಕಾದ ಜಾಗ. ನಾನು ಯಾವ ಪಕ್ಷ ಅಂತೆಲ್ಲ ಯೋಚಿಸುವುದಿಲ್ಲ. ಇದರ ಹಿಂದೆ ಪಕ್ಷಾತೀತವಾಗಿ ಎಲ್ಲರ ಸಹಕಾರವಿದೆ. ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಿದಾಗ ಇಂತಹ ಒಳ್ಳೆಯ ಕೆಲಸಗಳು ನಡೆಯುತ್ತವೆ ಎಂದರು.

ನಾನು ಚುನಾವಣೆಯಲ್ಲಿ ಮತ ಕೇಳಲು ಬರುತ್ತೇನೆ. ಈಗ ನಾನು ಏನನ್ನು ಕೇಳುವುದಿಲ್ಲ.ಜನರಿಗೆ ಗೊತ್ತಿದೆ ಯಾವ ಬೀಜದ ಬಿತ್ತನೆ ಹಾಕಿದರೆ ಬೆಳೆ ಜಾಸ್ತಿ ಎಂದು. ನೀವು ಉತ್ತಮ ಬಿತ್ತನೆ ಬೀಜವನ್ನು ನಾಟಿ ಮಾಡಿ ಬೆಳೆ ಬಂದ ನಂತರ ಕುಯ್ದುಕೊಳ್ಳಿ ಎಂದು ತಿಳಿಸಿದರು.

ತಹಶೀಲ್ದಾರ್ ಡಿ‌.ಅಶ್ವಿನಿ ಅವರು ಮಾತನಾಡಿ, ಯುಗಾದಿ ಹಬ್ಬದ ದಿನದಂದು ಮೊಗರಹಳ್ಳಿ ಮಂಟಿಯ ಜನರಿಗೆ ನೈಜವಾಗಿ ಸಿಹಿ ಹಂಚಬೇಕೆಂಬ ಶಾಸಕರ ಅಭಿಲಾಷೆಯನ್ನು ಹಕ್ಕುಪತ್ರ ನೀಡುವ ಮೂಲಕ ಈಡೇರಿಸಿದ್ದೇವೆ.ಹಕ್ಕುಪತ್ರದ ದಾಖಲಾತಿಗಳಲ್ಲಿ ಯಾವುದಾದರೂ ದೋಷವಿದ್ದರೆ ಸರಿಪಡಿಸಲು ನಮ್ಮ ಇಲಾಖೆ ಬದ್ಧವಾಗಿದೆ. ಬಹಳ ವರ್ಷಗಳಿಂದ ಜನರು ಅನುಭವಿಸುತ್ತಿದ್ದ ಸಂಕಷ್ಟ ಇಂದು ನಿವಾರಣೆಯಾಗಿದೆ.ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು,ಕೆಆರ್‌ಎಸ್‌, ಬೆಳಗೊಳ,ಆನಂದೂರು ಮೊಗರಳ್ಳಿ ಮಂಟಿಯ ಜನರಿಗೆ ಹಕ್ಕುಪತ್ರ ಕೊಡಿಸುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಬಣ್ಣಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಕೋಮಲಾ ಮಾತನಾಡಿ, ನಾವು ಕಳೆದ ಐವತ್ತು ವರ್ಷಗಳಿಂದ ಇಲ್ಲಿ ವಾಸವಿದ್ದೇವೆ.ನಮ್ಮ ಹಿರಿಯರ ಕನಸು ಇಂದು ನನಸಾಗಿದೆ. ಪ್ರತಿ ಚುನಾವಣೆಯಲ್ಲೂ ಹಕ್ಕುಪತ್ರ ಕೊಡಿ, ರಸ್ತೆ, ಚರಂಡಿ ಮಾಡಿಸಿ ಎಂದು ಹಲವು ಮನವಿಯನ್ನು ಮಾಡಿದ್ದರೂ, ಯಾರೂ ಕೂಡ ಈ ಕೆಲಸಗಳನ್ನು ಮಾಡಿರಲಿಲ್ಲ.ಆದರೆ ರವೀಂದ್ರ ಶ್ರೀಕಂಠಯ್ಯನವರು ಶಾಸಕರಾಗಿ ನಮಗೆ ಹಕ್ಕು ಪತ್ರ ಕೊಡಿಸಿದ್ದಲ್ಲದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ನಮ್ಮ ಜೀವನ ದುದ್ದಕ್ಕೂ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಮುಖಂಡ ದೇವರಾಜು ಮಾತನಾಡಿ, ಈ ದಿನ ನಮ್ಮ ಮಂಟಿಯ ಜನರ ಪಾಲಿಗೆ ಸುದಿನವಾಗಿದೆ. ನಮ್ಮ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಅರ್ಜಿ ಪಡೆಯದೆ ಹಕ್ಕು ಪತ್ರ ನೀಡಿರುವ ಏಕೈಕ ಶಾಸಕ ರವೀಂದ್ರ ಶ್ರೀಕಂಠಯ್ಯ ನವರು.ಮುಂದಿನ ಚುನಾವಣೆಯಲ್ಲಿ ಬಹುಮತದ ಗೆಲುವು ನೀಡುವ ಮೂಲಕ ಅವರನ್ನು ಮತ್ತೆ ಆಯ್ಕೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯನವರು ತಹಶೀಲ್ದಾರ್ ಅಶ್ವಿನಿ, ಪಿಡಿಒ ಸೆಂದಿಲ್,ಆರ್ ಐ ಉಮೇಶ್ ಅವರನ್ನು ಸನ್ಮಾನಿಸಿದರು. ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ರವೀಂದ್ರ ಶ್ರೀಕಂಠಯ್ಯನವರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು.

ಮೊಗರಹಳ್ಳಿ ಮಂಟಿಯ ಸಾವಿರಾರು ಜನರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ದಂಪತಿಗಳು ಹೋಳಿಗೆ ಊಟ ಹಾಕಿಸಿ ಯುಗಾದಿ ಹಬ್ಬ ಆಚರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!