Friday, September 20, 2024

ಪ್ರಾಯೋಗಿಕ ಆವೃತ್ತಿ

ಮತ್ತೊಮ್ಮೆ ಬಿರುಸು ಪಡೆದುಕೊಂಡ ಲಿಂಗಾಯತ ಧರ್ಮದ ಹೋರಾಟ

✍️ ವಿವೇಕಾನಂದ ಎಚ್. ಕೆ

ತುಂಬಾ ಹಳೆಯದಾದ ಆದರೆ ಐದಾರು ವರ್ಷಗಳ ಹಿಂದೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ.

ಇದೇ 26 ರಂದು ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ನಡೆದ ಕಾರ್ಯಕ್ರಮ ಮತ್ತು ಮಾರ್ಚ್ 4 ಮತ್ತು 5 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮತ್ತೊಂದು ಮಹಾ ಅಧಿವೇಶನ ನಡೆಯುತ್ತಿದೆ……

ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ….

ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.
” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿಯಲ್ಲಿ ಮುಖ್ಯವಾಗಿ ಬಸವಣ್ಣನವರು ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತಾರೆ….

12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯೆಯರನ್ನು ನಿಕೃಷ್ಟವಾಗಿ ನೋಡುವಾಗ ವೇಶ್ಯೆಯರಿಗೂ ಅನುಭವ ಮಂಟಪದ ಸದಸ್ಯತ್ವ ನೀಡಿ ಪುರುಷ ಸಮಾನ ಗೌರವ ನೀಡಿ ಸಾಹಿತ್ಯ ರಚಿಸಲು ಅನುವು ಮಾಡಿಕೊಟ್ಟದ್ದು, ಅಪರಾಧಿಗಳು ಸಹ ಶರಣಾಗುವುದಾದರೆ ಅದನ್ನು ಕ್ಷಮಿಸಿ ಸ್ವೀಕರಿಸಲು ಸಿದ್ದ ಎಂಬ ಸಂದೇಶ ನೀಡಿದ್ದು ಬಹುಶಃ ಜಗತ್ತಿನ ಅದ್ಭುತಗಳಲ್ಲಿ ಒಂದು……

ಇಂತಹ ಸಮಾನತೆಯ ತತ್ವಗಳ ಆಧಾರದ ಮೇಲೆ ಕನಿಷ್ಠ ಕರ್ನಾಟಕದಲ್ಲಾದರೂ ಮಾನವ ಧರ್ಮ ಈಗಾಗಲೇ ದೊಡ್ಡ ಮಟ್ಟದ ಅಸ್ತಿತ್ವ ಕಂಡುಕೊಳ್ಳಬೇಕಿತ್ತು. ಅತ್ಯಂತ ಸರಳ ಸಹಜ ಮಾನವ ಪ್ರೀತಿಯ ಬದುಕಿನ ಸಾರ್ಥಕತೆಯ ಈ ಧರ್ಮ ಇನ್ನೂ ಹೋರಾಟದ ಹಂತದಲ್ಲಿ ಇರುವುದು ವಿಪರ್ಯಾಸ……..

ಅದಕ್ಕೆ ಹಲವಾರು ಕಾರಣಗಳಿವೆ. ಅತಿಮುಖ್ಯವಾಗಿ, ಸನಾತನ ಧರ್ಮದ ಆಚರಣೆಗಳು ಆಳವಾಗಿ ಬೇರೂರಿರುವುದು, ಜಾತಿ ವ್ಯವಸ್ಥೆ ಈಗಲೂ ಅನುವಂಶೀಯವಾಗಿರುವುದು, ಪ್ರಜಾಪ್ರಭುತ್ವ ಆಡಳಿತದ ಚುನಾವಣಾ ರಾಜಕೀಯ, ಕಾರ್ಪೊರೇಟ್ ಸಂಸ್ಕೃತಿಯ ಹೊಸ ಆರ್ಥಿಕ ಗುಲಾಮಿತನ, ಮನುಷ್ಯ ಸಹಜ ನಡವಳಿಕೆಯಾದ ಭಯ, ಸ್ವಾರ್ಥ, ದುರಾಸೆ, ಸಾಯುವ ಸೋಲುವ ಆತಂಕ ಹೀಗೆ ಎಲ್ಲವೂ ಸೇರಿ ಬಸವ ಧರ್ಮ ಅದರ ಅರ್ಹತೆಗೆ ತಕ್ಕಂತ ಬೆಳವಣಿಗೆ ‌ಸಾಧ್ಯವಾಗಿಲ್ಲ.

ಜನರ ಅಯೋಗ್ಯತನ, ಅಜ್ಞಾನ, ಅಪ್ರಬುದ್ಧತೆ ಯಾವ ಮಟ್ಟದಲ್ಲಿದೆ ಎಂದರೆ, ಧರ್ಮವೆಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್ ಎಂದೇ ಅರ್ಥ ಮಾಡಿಕೊಳ್ಳುತ್ತಾರೆ. ನಿಜವಾದ ಧರ್ಮವೆಂದರೆ ಒಳ್ಳೆಯತನ, ಸನ್ನಡತೆ, ಉತ್ತಮ ಜೀವನ ಶೈಲಿ ಎಂದು ಭಾವಿಸುವುದೇ ಇಲ್ಲ. ಅದರ ಪರಿಣಾಮ ಬಸವ ತತ್ವ ರಾಜ್ಯವನ್ನು ಸಂಪೂರ್ಣ ಆವರಿಸುವಲ್ಲಿ ವಿಫಲವಾಗಿದೆ.

ಬಸವ ತತ್ವದ ಆಧಾರದ ಮೇಲೆ ಸೃಷ್ಟಿಯಾದ ಮಠ ಮಾನ್ಯಗಳು ಇಂದು ಜಾತೀಯತೆಯ ಪೋಷಕರಾಗಿರುವುದು, ರಾಜಕೀಯ ಬಾಲಂಗೋಚಿಯಾಗಿರುವುದು, ಜಾತಿ ಮೀಸಲಾತಿಯ ಹೋರಾಟ ಮಾಡುವುದು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸುವುದು, ಅಸಮಾನತೆ – ಮೌಡ್ಯ ಹೆಚ್ಚಿಸುವ ವಿಚಾರ ಬಿತ್ತುವುದು ಹೀಗೆ ಸಾಗುತ್ತಿರುವಾಗ……..ಲಿಂಗಾಯತ ಧರ್ಮದ ಹೋರಾಟ ಪ್ರಬಲವಾಗುತ್ತಿದೆ.

ವೀರಶೈವ ಪಂಥದ ಪ್ರತಿಪಾದಕರು ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂತಲೂ, ಲಿಂಗಾಯತ ಪಂಥ ಮತ್ತು ಹೆಸರಿನ ಪ್ರತಿಪಾದಕರು ಪ್ರತ್ಯೇಕ ಎಂದೂ ಪ್ರತಿಪಾದಿಸುತ್ತಾರೆ. ಒಟ್ಟಿನಲ್ಲಿ ಎರಡೂ ಪಂಥದವರು ಸನಾತನ ಧರ್ಮದಿಂದ ಪ್ರತ್ಯೇಕತೆಯ ವಾದ ಮಂಡಿಸುತ್ತಾರೆ. ಸ್ವತಂತ್ರ ಧರ್ಮದ ಬೇಡಿಕೆ ಇದೆ. ಇದರಲ್ಲಿ ತುಂಬಾ ಆಸಕ್ತಿ ಇರುವವರು ಇತಿಹಾಸದ ಆಳಕ್ಕೆ ಇಳಿದು ವೀರಶೈವ ಮತ್ತು ಲಿಂಗಾಯತ ಪದದ ಉಗಮ – ಅರ್ಥ, ರೇಣುಕಾಚಾರ್ಯ ಎಂಬ ಮೂಲ ಪುರುಷ ( ಪೌರಾಣಿಕ ) ಮತ್ತು ಬಸವಣ್ಣನವರ ಹುಟ್ಟು ಮತ್ತು ಬೆಳವಣಿಗೆಗಳನ್ನು ‌ಅಧ್ಯಯನ ಮಾಡಬಹುದು.

ಸಾಮಾನ್ಯ ತಿಳುವಳಿಕೆಗಾಗಿ ಈಗಿನ ಸಂಘರ್ಷದ ಒಂದು ಸರಳ ವಿಮರ್ಶೆ………..

ವೀರಶೈವರೆಂದರೆ….‌

ಸಂಪ್ರದಾಯವಾದಿ ಅಥವಾ ಪುರೋಹಿತಶಾಹಿ ಎಂದು ಕರೆಯಲ್ಪಡುವ ವರ್ಗದ ನಂಬಿಕೆ ಸಂಸ್ಕಾರ ಸಂಪ್ರದಾಯ ಆಚರಣೆಗಳನ್ನು ಹೊಂದಿರುವ ರೇಣುಕಾಚಾರ್ಯ ಎಂಬ ದೇವರಲ್ಲಿ ನಂಬಿಕೆ ಇರುವ ಸನಾತನ ಹಿಂದುತ್ವದ ಪ್ರತಿಪಾದಕ ಆರ್ ಎಸ್ ಎಸ್ ಸಹಾನುಭೂತಿ ಹೊಂದಿರುವ ಸಮುದಾಯವೇ ವೀರಶೈವ ಎಂದು ಗುರುತಿಸಲಾಗುತ್ತದೆ.

ಲಿಂಗಾಯತರೆಂದರೆ…….

ವಚನ ಸಾಹಿತ್ಯ ಚಳವಳಿಯ ಆಧಾರದಲ್ಲಿ ಸಮಾನತೆಯ ಸಮ ಸಮಾಜ ಪ್ರತಿಪಾದಿಸುವ, ಬಸವಣ್ಣನವರನ್ನು ದೈವ ಸ್ವರೂಪಿ ಶರಣರೆಂದು ನಂಬಿರುವ ಇಷ್ಟ ಲಿಂಗದ ಆರಾಧಕರಾಗಿರುವ, ಸಂಪ್ರದಾಯ ವಿರೋಧದ, ಪ್ರಗತಿಪರ ಅಥವಾ ವೈಚಾರಿಕ ನಿಲುವುಗಳನ್ನು ಹೊಂದಿರುವ ಮನೋಭಾವವಿರುವ ಜನರ ಬೆಂಬಲ ಹೊಂದಿರುವ ಸಮುದಾಯವನ್ನು ಲಿಂಗಾಯತ ಎಂದು ಪರಿಗಣಿಸಲಾಗುತ್ತದೆ.

ಮೂಲಭೂತವಾಗಿ ಮನುಷ್ಯನೇ ಒಂದು ಜಾತಿ ಅಥವಾ ವರ್ಗ ಅಥವಾ ಸಮೂಹ. ಉಳಿದ ಎಲ್ಲಾ
ಪಂಥ ಧರ್ಮಗಳು ನಂತರವೇ ಉಗಮವಾಗಿದೆ. ಆ ಅರ್ಥದಲ್ಲಿ ನಾವೆಲ್ಲರೂ ಒಂದೇ. ಆದರೆ ಕಾಲಾನಂತರ ಭಿನ್ನತೆಗಳು ಪ್ರಾರಂಭವಾದವು.

ಭಾರತದ ಸನಾತನ ಧರ್ಮ ತುಂಬಾ ವೈವಿಧ್ಯಮಯವಾಗಿ ಬೆಳವಣಿಗೆ ಹೊಂದಿ ತನ್ನ ಆಚರಣೆಗಳಿಂದ ಅನೇಕ ಕವಲುಗಳಾಗಿ ಒಡೆಯಿತು. ಅದರಲ್ಲಿ ವೀರಶೈವ ಸಮುದಾಯವೂ ಒಂದು.

ಆದರೆ ಬಸವೇಶ್ವರರು ಆಗಿನ ಕಾಲದಲ್ಲಿ ಆಚರಣೆಯಲ್ಲಿದ್ದ ಎಲ್ಲಾ ಅಸಮಾನತೆಯ ಮತ್ತು ಅಮಾನವೀಯ ಸಂಪ್ರದಾಯಗಳನ್ನು ವಿರೋಧಿಸಿ ಮಾನವ ಧರ್ಮವನ್ನು ಪ್ರತಿಪಾದಿಸಿ ಅದರ ನೀತಿ ನಿಯಮಗಳನ್ನು ವಚನಗಳ ಮುಖಾಂತರ ವಿವರಿಸಿದರು. ಸಮಾಜವನ್ನು ಆ ಅಂಶಗಳ ಆಧಾರದಲ್ಲಿ ಒಂದು ಗೂಡಿಸಲು ಪ್ರಯತ್ನಿಸಿದರು. ಅನಂತರದಲ್ಲಿ ಅವರ ಅನುಯಾಯಿಗಳ ಒಂದು ಸಮುದಾಯವೇ ಉಗಮವಾಯಿತು. ಅದೇ ಲಿಂಗಾಯತ ಎಂದು ಜನಪ್ರಿಯವಾಯಿತು.

ಆಚರಣೆಗಳಲ್ಲಿ ಹಿಂದುತ್ವದ ಸಂಪ್ರದಾಯಕ್ಕೆ ಸ್ವಲ್ಪ ಭಿನ್ನವಾಗಿದ್ದ, ದೇವಸ್ಥಾನಕ್ಕೆ ಬದಲಾಗಿ ಮಠ ಮಾನ್ಯಗಳ ಸಂಸ್ಕೃತಿಗೆ ಶರಣಾದ ಈ ಎರಡೂ ಸಮುದಾಯಗಳು ಮೇಲ್ನೋಟಕ್ಕೆ ಒಟ್ಟಿಗೆ ಸಾಗುತ್ತಿದ್ದವು.

ನಂತರದ ಬೆಳವಣಿಗೆಯಲ್ಲಿ ಈ ಸಮುದಾಯವು ಸ್ವತಂತ್ರ ಧರ್ಮದ ಗುಣಲಕ್ಷಣಗಳನ್ನು ಗುರುತಿಸಿ ಅದಕ್ಕೆ ಮಾನ್ಯತೆ ಪಡೆಯಲು ಪ್ರಯತ್ನಿಸಿದಾಗ ಪ್ರಾರಂಭದಲ್ಲಿ ಒಂದಾಗಿದ್ದ ಇವು ಸ್ವಾತಂತ್ರ್ಯ ಪೂರ್ವದಲ್ಲೇ ಭಿನ್ನತೆಯ ರಾಗ ಹಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಅದು ಸ್ಪಷ್ಟವಾಗಿ ಎರಡು ವಿಭಿನ್ನ ಗುಂಪುಗಳಾಗಿ ವೀರಶೈವ ಮತ್ತು ಲಿಂಗಾಯತ ಎಂಬ ಹೋರಾಟ ಮುಂಚೂಣಿಗೆ ಬಂದಿದೆ. ಪಕ್ಷಾತೀತ ಎಂದು ಹೇಳಿಕೊಂಡರು ಎರಡೂ ಸಮುದಾಯಗಳನ್ನು ಒಂದೊಂದು ಪಕ್ಷಗಳು ಬೆಂಬಲಿಸುವ ಮುಖಾಂತರ ರಾಜಕೀಯವೂ ಇದರಲ್ಲಿ ನುಸುಳಿದೆ.

ಯಾವುದು ಸರಿ ಎಂದು ನಿರ್ಧರಿಸುವ ಸ್ವಾತಂತ್ರ್ಯ ನಿಮಗಿದೆ

ಈ ಆಧುನಿಕ ಕಾಲದಲ್ಲಿ ನಿಂತು ಯೋಚಿಸಿದಾಗ ಮನುಷ್ಯ ಸೃಷ್ಟಿಯ ಒಂದು ಜೀವಿ. ಧರ್ಮಗಳು ಒಂದು ಕಾಲಕ್ಕೆ ಸಮಾಜವನ್ನು ಕ್ರಮಬದ್ಧ ರೀತಿಯಲ್ಲಿ ಮುನ್ನಡೆಸಿರುವುದು ನಿಜ. ಆದರೆ ಇಂದು ಅವು ವಿಶ್ವದ ವಿನಾಶಕ್ಕೆ ಕಾರಣವಾಗುತ್ತಿದೆ. ಅಪಾರ ಸಾವು ನೋವುಗಳು ಸಂಭವಿಸುತ್ತಿವೆ. ಮಾನವೀಯತೆ ಮಾಯವಾಗಿದೆ.

ಸಮ ಸಮಾಜದ ಮತ್ತೆ ಕಲ್ಯಾಣ….

ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ……

12 ನೆಯ ಶತಮಾನದಲ್ಲಿಯೇ ಒಬ್ಬ ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನನ್ನು ಏನೆಂದು ಕರೆಯುವುದು. 2023 ರ ಈ ಸಂದರ್ಭದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು.

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ ಚಮ್ಮಾರ ಹೊಲೆಯ ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ 8 ಶತಮಾನಗಳ ಹಿಂದೆಯೇ ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದ ಎಂಬುದನ್ನು ಊಹಿಸಿಕೊಳ್ಖಲು ಸಾಧ್ಯವೇ…..

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು….

ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ.

ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಜನಪ್ರಿಯವಾಗಿರುವಾಗ ಮತ್ತೆ ಕಲ್ಯಾಣ ಸಾಧ್ಯವೇ….

ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ ಮತ್ತೆ ಕಲ್ಯಾಣ ಯಾವಾಗ,.‌……

ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ ಮತ್ತೆ ಕಲ್ಯಾಣ ಎಂದು…..

ಆದರೆ,
ಮತ್ತೆ ಕಲ್ಯಾಣ ಒಂದು ಅದ್ಭುತ ಚಿಂತನೆ

ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ.
ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ.
ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ.

ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. ಆ ನಿಟ್ಟಿನಲ್ಲಿ ಹೋರಾಟಗಳು ನಡೆದರೆ ಅದನ್ನು ಸ್ವಾಗತಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!