Saturday, May 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಮಾತ್ರ ಈ ಸಲ ಎಲೆಕ್ಷನ್ ಮಾಡೋದು 25 ಕ್ಷೇತ್ರಗಳಲ್ಲಿ ಮಾತ್ರ !

✍️ ಮಾಚಯ್ಯ ಎಂ ಹಿಪ್ಪರಗಿ

ಕಾಂಗ್ರೆಸ್, ಜೆಡಿಎಸ್ ಪಕ್ಷಗಳು 2023ರ ಅಸೆಂಬ್ಲಿ ಚುನಾವಣೆಯಲ್ಲಿ ಎಷ್ಟೆಷ್ಟು ಕ್ಷೇತ್ರಗಳಲ್ಲಿ ಚುನಾವಣೆ ನಡೆಸುತ್ತವೋ ಗೊತ್ತಿಲ್ಲ, ಆದರೆ ಬಿಜೆಪಿ ಮಾತ್ರ ಈ ಸಲ ಎಲೆಕ್ಷನ್ ಮಾಡೋದು 25 ಕ್ಷೇತ್ರಗಳಲ್ಲಿ ಮಾತ್ರ!

ಇದು ಹೇಗೆ ಸಾಧ್ಯ? ವಿವರಣೆ ಮುಂದಿದೆ…

ಬಿಜೆಪಿಯ ಲೆಕ್ಕಾಚಾರಗಳು ಪರ್ಫೆಕ್ಟಾಗಿವೆ. ಈ ಸಲ ಏನೇ ತಿಪ್ಪರಲಾಗ ಹಾಕಿದರೂ, ತಾವು ಮತ್ತೆ ಗೆದ್ದು ಅಧಿಕಾರಕ್ಕೆ ಬರಲಾರೆವು ಎಂಬುದು ಖಾತ್ರಿಯಾಗಿದೆ. ಅಧಿಕಾರದ ಸನಿಹಕ್ಕೆ ಬರುವುದಿರಲಿ, ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗುವ ಅವಕಾಶವೂ ನಮ್ಮ ಮುಂದೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ವಿಧಾನಸೌಧದ ಮೂಲಗಳ ಪ್ರಕಾರ ಪಕ್ಷದ ಈ ಸೋಲನ್ನು ಧಮ್ಮು ಕಟ್ಟಿ, ತಾಕತ್ ಹಾಕಿ, ಬಾಂಡ್ ಪೇಪರ್‌ ಮೇಲೆ ಬರೆದುಕೊಡುವಷ್ಟು ಭರವಸೆ ಖುದ್ದು ಸಿಎಂ ಬೊಮ್ಮಾಯಿಯವರಿಗೆ ಬಂದಿದೆಯಂತೆ.

ಹಾಗಾದರೆ, ಮುಂದೇನು?

ಸೋಲನ್ನು ಅಷ್ಟು ಸಲೀಸಾಗಿ ಒಪ್ಪಿಕೊಳ್ಳುವ ಸಾಧ್ಯವೇ? ಅದೂ, 2024ರ ಪಾರ್ಲಿಮೆಂಟ್ ಚುನಾವಣೆಗೆ ದಕ್ಷಿಣ ಭಾರತದಿಂದ ಭರವಸೆ ಅಂತ ಇರುವ ಕರ್ನಾಟಕದ (ಕಳೆದ ಸಲ 25 ಎಂಪಿ ಸೀಟುಗಳನ್ನು ಬಿಜೆಪಿಗೆ ಧಾರೆ ಎರೆದಿತ್ತು) ಅಧಿಕಾರವನ್ನು ಅಷ್ಟು ಸುಲಭವಾಗಿ ಕೈಚೆಲ್ಲಲು ಸಾಧ್ಯವೇ? ಖಂಡಿತ ಇಲ್ಲ! ಆವಾಗ ಮೈದಳೆದಿದ್ದೇ ಈ ‘ಟಾರ್ಗೆಟ್ 25’ ಸ್ಟ್ರ್ಯಾಟಜಿ!

ಮೊದಲಿನಂತೆ, ಫಲಿತಾಂಶ ಹೊರಬಂದಾಗ ’ಈ ಜನಾಭಿಪ್ರಾಯಕ್ಕೆ ನಾವು ತಲೆಬಾಗುತ್ತೇವೆ’ ಅನ್ನೋ ಹೇಳಿಕೆ ಕೊಟ್ಟು, ತಮ್ಮ ಸೋಲುಮೋರೆಯ ಮೇಲೆ ಟವೆಲ್ ಹಾಕಿಕೊಂಡು ಗೊಳೋ ಅಂತ ಕಣ್ಣೀರಿಡುವ ಕಾಲ ದೂರ ಸರಿದು ಬಹಳ ಕಾಲವೇ ಆಗಿದೆ. ಈಗೇನಿದ್ದರೂ, ಶತಾಯಗತಾಯ ಅಧಿಕಾರ ಹಿಡಿಯಬೇಕೆನ್ನುವುದೇ ರಣತಂತ್ರ, ಅದುವೇ ಚಾಣಕ್ಯನೀತಿ!! ಕುಮಾರಸ್ವಾಮಿಯವರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಅದಾಗಲೇ, ’ನಮ್ಮ ಪಕ್ಷ ಎಷ್ಟೇ ಕಮ್ಮಿ ಸೀಟು ಗಳಿಸಿದರೂ, ಮುಂದಿನ ಸರ್ಕಾರ ಬಿಜೆಪಿಯದ್ದೇ’ ಅಂತ ಹೇಳಿಕೆ ಕೊಟ್ಟಿದ್ದಾರೆ. ರಮೇಶ್ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆಹೋದರೂ, ಬಿಜೆಪಿಯ ಇತ್ತೀಚಿನ A Buy and Benefit ಕಾರ್ಯತಂತ್ರಗಳನ್ನು ನೋಡಿದರೆ ಬೇರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸುವುದು ಅದಕ್ಕೇನು ಹೊಸದಲ್ಲ. ಈಗ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರವೂ ಅಂತದ್ದೇ ಬೈಪ್ರೊಡಕ್ಟು!

ಸರಿ, ಆ ಒಂದು ಸಾಧ್ಯತೆಯನ್ನಾದರೂ ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಒಂದಷ್ಟು ಗಣನೀಯ ಸೀಟುಗಳನ್ನು ಗೆಲ್ಲಬೇಕಲ್ಲವೇ? ಈಗಿರುವ ಪರಿಸ್ಥಿತಿಯಲ್ಲಿ, ಅಧಿಕಾರ ವೈಫಲ್ಯ-40% ಕಮೀಷನ್ ಆರೋಪ-ಜನರ ಭ್ರಮಾನಿರಸನದ ನಡುವೆ ಐವತ್ತರ ಗಡಿ ದಾಟುವುದೂ ಬಿಜೆಪಿಗೆ ಕಷ್ಟವಿದೆ ಎಂಬ ಅಭಿಪ್ರಾಯಗಳಿವೆ. ಅದಕ್ಕಿಂತ ಮುಖ್ಯವಾಗಿ, ಫಲಿತಾಂಶದ ನಂತರ ತಾವು ‘ಆಪರೇಷನ್ ಆಟ ಆಡಬೇಕೆಂದರೆ, ಕಾಂಗ್ರೆಸ್ ಅನ್ನು 100-110ರ ಗಡಿಯೊಳಗೆ ಕಟ್ಟಿಹಾಕಬೇಕು ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿರುವುದರಿಂದಲೇ ಟಾರ್ಗೆಟ್ 25 ಎಂಬ ಅಸ್ತ್ರವಿಡಿದು ಅಖಾಡಕ್ಕಿಳಿದಿದೆ.

2013ರ ಫಲಿತಾಂಶವೇ ಅಡಿಪಾಯ

ಈ ಅಸ್ತ್ರವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ನಾವು 2013ರ ಚುನಾವಣಾ ಫಲಿತಾಂಶದತ್ತ ಒಮ್ಮೆ ಹಿನ್ನೋಟ ಬೀರಬೇಕು. ಅವತ್ತು ಹೆಚ್ಚೂಕಮ್ಮಿ ಬಿಜೆಪಿ, ಇವತ್ತಿದ್ದಂತಹ ಪರಿಸ್ಥಿತಿಯಲ್ಲೇ ಇತ್ತು. ಆಂತರಿಕ ಭಿನ್ನಮತಗಳಿಂದ ಜರ್ಝರಿತವಾಗಿತ್ತು. ಯಡಿಯೂರಪ್ಪನವರನ್ನು ಅರ್ಧದಲ್ಲೇ ಕುರ್ಚಿಯಿಂದ ಇಳಿಸಿ, ಸದಾನಂದಗೌಡರನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಕೊನೆಗೆ ಅವರೂ ಕುರ್ಚಿಯಿಂದ ಕೆಳಗಿಳಿದು, ‘ಲಿಂಗಾಯತ’ ಟ್ರಂಪ್‌ಕಾರ್ಡ್ ಬಳಸಿ ಜಗದೀಶ್ ಶೆಟ್ಟರ್ ಸಿಎಂ ಗಾದಿಗೇರಿದ್ದರು. ಆಂತರಿಕ ಕಚ್ಚಾಟದಿಂದಾಗಿ ಆಡಳಿತ ಕುಸಿದುಬಿದ್ದಿತ್ತು. ಗಣಿ ಹಗರಣ, ಭ್ರಷ್ಟಾಚಾರದ ಆರೋಪಗಳು ಬಿಜೆಪಿಯನ್ನು ಹೈರಾಣು ಮಾಡಿದ್ದವು. ಎಲೆಕ್ಷನ್ ಸಮೀಪವಿರುವಾಗ, ಯಡಿಯೂರಪ್ಪನವರು ಪಕ್ಷದಿಂದ ಹೊರಹೋಗಿ ಕೆಜೆಪಿ ಕಟ್ಟಿಕೊಂಡಿದ್ದರು. (ಇವತ್ತು ಅವರು ಹೊರಹೋಗಿಲ್ಲವಾದರೂ, ಬಿಜೆಪಿಗೆ ಒಳ ಏಟು ಕೊಡಲು ಸಕಲ ಸನ್ನದ್ಧರಾಗಿದ್ದಾರೆ ಎಂಬುದು ಸತ್ಯ). ಇನ್ನು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಪ್ರಧಾನ ಪೈನಾನ್ಷಿಯರ್ ಪಾತ್ರ ನಿರ್ವಹಿಸಿದ್ದ ಜನಾರ್ಧನ ರೆಡ್ಡಿ ಕೂಡಾ, ಬಿಜೆಪಿಯಿಂದ ಹೊರಹೋಗಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಈ ಸಲವೂ ಅವರು ಹೊಸ ಪಕ್ಷ ಘೋಷಿಸಿದ್ದಾರೆ. ಇವತ್ತು ಹೆಚ್ಚೂಕಮ್ಮಿ ಯಾವ ಪರಿಸ್ಥಿತಿ ಬಿಜೆಪಿಗಿದೆಯೋ, ಅದೇ ಪರಿಸ್ಥಿತಿ ಅವತ್ತು ಸಹಾ ಇತ್ತು. ಅಷ್ಟೆಲ್ಲ ಹಿನ್ನಡೆಗಳ ನಡುವೆಯೂ ಆ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗಳಿಸಿತ್ತು. ಈ ಮ್ಯಾಜಿಕ್ ನಂಬರ್ ‘ನಲವತ್ತೇ’ ಬಿಜೆಪಿಯ ಇವತ್ತಿನ ಟಾರ್ಗೆಟ್ 25ರ ಬಂಡವಾಳ.

2013ರ ಫಲಿತಾಂಶವನ್ನು ಸೂಕ್ಷ್ಮವಾಗಿ ಅನಲೈಸ್ ಮಾಡಿದಾಗ ಒಂದು ಅಂಶ ಸ್ಪಷ್ಟವಾಗುತ್ತೆ. ಕರ್ನಾಟಕದ ಮಟ್ಟಿಗೆ ಬಿಜೆಪಿಗೆ ಗಟ್ಟಿ ವೋಟ್‌ಬ್ಯಾಂಕ್ ಇದೆ ಎಂದು ಹೇಳಲಾಗುವುದು ಎರಡು ಆಯಾಮದಿಂದ. ಒಂದು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪ್ರಾಬಲ್ಯವಿರುವ ಪ್ರಾಂತ್ಯ. ಅದು ಯಡಿಯೂರಪ್ಪನವರ ಕಾರಣಕ್ಕೆ ಅನ್ನೋದು ಹೊಸ ವಿಚಾರವಲ್ಲ. ಇನ್ನು ಎರಡನೆಯದು, ಕರಾವಳಿ ಪ್ರಾಂತ್ಯ. ಅಲ್ಲಿ ವ್ಯವಸ್ಥಿತವಾಗಿ ಸಂಘ ಪರಿವಾರ ಹೆಣೆದಿರುವ ಕೋಮುವಾದಿ ಹೆಣಿಗೆಗಳ ಕಾರಣಕ್ಕೆ. ಆದರೆ 2013ರಲ್ಲಿ ಈ ಎರಡೂ ಕಡೆ ಬಿಜೆಪಿಯ ಸಾಧನೆ ಕಳಪೆ ಮಟ್ಟದ್ದಾಗಿತ್ತು. ಆ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಗೆದ್ದಿದ್ದು 6 ಕ್ಷೇತ್ರಗಳಲ್ಲಿ ಮಾತ್ರವಾದರೂ, ಲಿಂಗಾಯತರ ಮತಗಳನ್ನು ಅದು ಗಂಭೀರ ಪ್ರಮಾಣದಲ್ಲಿ ಬಿಜೆಪಿಯಿಂದ ವಿಮುಖಗೊಳಿಸಿ ಸುಮಾರು, 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಿತ್ತು. ಇನ್ನು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯ 19 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಮೂರು ಕ್ಷೇತ್ರಗಳಲ್ಲಿ ಮಾತ್ರ. ಇವತ್ತಿನ ಹಿಜಾಬ್ ದಾಂಧಲೆ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಧನ ಸಾಗಣೆ, ಅನೈತಿಕ ಪೊಲೀಸ್‌ಗಿರಿಯ ದಾಳಿಯಂತೆ ಅವತ್ತು ಸಹಾ ಬಿಜೆಪಿ ಆಡಳಿತದಲ್ಲಿ ಚರ್ಚ್ ಮೇಲಿನ ದಾಳಿ, ಅನೈತಿಕ ಪೊಲೀಸ್‌ಗಿರಿ, ಹೆಣ ರಾಜಕಾರಣ ನಡೆಸಿದ್ದರೂ ಬಿಜೆಪಿ ಅಲ್ಲಿ ನೆಲಕಚ್ಚಿತ್ತು ಮತ್ತು ಅವುಗಳಿಗೆ ಪ್ರತಿಕ್ರಿಯೆ ಎನ್ನುವಂತೆ ಕರಾವಳಿಗರು 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದರು.

ಅಂದರೆ, ಸ್ಟ್ರಾಂಗ್ ವೋಟ್‌ಬ್ಯಾಂಕ್ ಏರಿಯಾಗಳು ಕೈಕೊಟ್ಟಾಗಿಯೂ, ಹಗರಣ, ಭ್ರಷ್ಟಾಚಾರಗಳ ನಡುವೆಯೂ ರಾಜ್ಯಾದ್ಯಂತ 40 ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಯಡಿಯೂರಪ್ಪ ಮತ್ತು ಕೋಮುವಾದವನ್ನು ಹೊರತುಪಡಿಸಿಯೂ ಈ ನಲವತ್ತು ಸ್ಥಾನಗಳು ಬಿಜೆಪಿಯ ಮಿನಿಮಮ್ ಗ್ಯಾರಂಟಿ. ಈ ಸಲವೂ ಮಿನಿಮಮ್ ಕ್ಷೇತ್ರಗಳು ಬಿಜೆಪಿಯ ಕೈಹಿಡಿಯಲಿವೆ. ಇದು 2013ರ ಮಾತು. ಅಂದರೆ, ರಾಷ್ಟ್ರ ರಾಜಕಾರಣದಲ್ಲಿ ಮೋದಿ ಉದಯಿಸುವುದಕ್ಕಿಂತ ಹಿಂದಿನ ಕಥೆ. 2014ರಲ್ಲಿ ಮೋದಿಯವರು ಪ್ರಧಾನಿಯಾದ ನಂತರ ರಾಜಕೀಯ ಚಿತ್ರಣದಲ್ಲಿ ಒಂದಷ್ಟು ಹೊಸ ವ್ಯಾಖ್ಯಾನಗಳನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ. ’ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ವೋಟು ಕೊಡಿ’, ’ಮೋದಿ ಪ್ರಧಾನಿಯಾದ ಮೇಲೆ ಭಾರತ ವಿಶ್ವಗುರುವಾಗಿದೆ’, ’ಬಿಜೆಪಿ-ಆರೆಸ್ಸೆಸ್ ಕೆಟ್ಟವು ಆದರೆ ಮೋದಿ ಒಳ್ಳೆಯವರು’, ’ಆರೆಸ್ಸೆಸ್ ಎದುರು ಹಾಕಿಕೊಂಡು ಮೋದಿ ಒಳ್ಳೆಯ ಕೆಲಸ ಮಾಡಲು ಹೆಣಗಾಡುತ್ತಿದ್ದಾರೆ’ ಇಂಥಾ ಮಿಥ್ಯಗಳನ್ನು ಜನರ ನಡುವೆ ಬೇರೂರಿಸಿ, ಜನ ಇವತ್ತು ತಮ್ಮ ಆದ್ಯತೆಗಳ ಮೇಲೆ ಮತ ಚಲಾಯಿಸುವ ವಿವೇಚನೆಯನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಜನಸಾಮಾನ್ಯರ ಮಾತು ಒತ್ತಟ್ಟಿಗಿರಲಿ, ತಮ್ಮ ಜೀವಮಾನವಿಡೀ ಕೋಮುವಾದವನ್ನು, ಜಾತಿವಾದವನ್ನು ಕಟುವಾಗಿ ವಿಮರ್ಶಿಸುತ್ತಲೇ ಬಂದ ಲಂಕೇಶರ ಶಿಷ್ಯ ಎಂದೇಳಿಕೊಳ್ಳುವ ವ್ಯಕ್ತಿಗಳು ಸಹಾ ಇವತ್ತು ’ಆರೆಸ್ಸೆಸ್ ವರ್ಸಸ್ ಮೋದಿ’ ಎಂಬ ಕಾಲ್ಪನಿಕ ವೈರಸ್‌ಗೆ ತುತ್ತಾಗಿ, ಬೆಣ್ಣೆಯಲ್ಲಿ ರೇಷ್ಮೆಯ ನೂಲು ತೆಗೆದಂತೆ ದಿನಬೆಳಗಾದರೆ ವಾದಗಳನ್ನು ಅಂಕಣಗಳಲ್ಲಿ ವಾಂತಿ ಮಾಡಿಕೊಳ್ಳುವುದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ.

2013ರ ಈ ಮಿನಿಮಮ್ ಗ್ಯಾರಂಟಿಯ ಜೊತೆಗೆ, 2014ರ ನಂತರ ಸೃಷ್ಟಿಯಾಗಿರುವ ‘ಮೋದಿಯವರ ಮುಖ ತೋರಿಸಿ ಮತ ಕೇಳುವ’ ಅಸ್ತ್ರದಿಂದಾಗಿ ಬಿಜೆಪಿಗೆ ಕರ್ನಾಟಕದಲ್ಲಿ ಹತ್ತರಿಂದ ಹದಿನೈದು ಹೆಚ್ಚುವರಿ ಸ್ಥಾನ ಗೆಲ್ಲುವ ಸಾಮರ್ಥ್ಯ ಬಂದಿದೆ. ಅಂದರೆ, 50 ರಿಂದ 55 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಯಾವ ತೊಂದರೆಯೂ ಇಲ್ಲ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಬೇಕೆಂದು ವ್ಯಾಪಕ ಪ್ರಚಾರ ನಡೆಸಿ, ಚುನಾವಣೆಯ ತಂತ್ರಗಾರಿಕೆ ಹೆಣೆದರೂ ಬಿಜೆಪಿಗೆ ಈ ಸಲ ಗೆಲ್ಲಲು ಸಾಧ್ಯವಾಗೋದು ಇಷ್ಟು ಸ್ಥಾನಗಳನ್ನು ಮಾತ್ರ. ಬಿಜೆಪಿ ಇಷ್ಟಕ್ಕೆ ಸೀಮಿತಗೊಂಡುಬಿಟ್ಟರೆ, ಕಾಂಗ್ರೆಸ್ ಅನಾಯಾಸವಾಗಿ 125ರ ಗಡಿಯನ್ನು ದಾಟಿಬಿಡುತ್ತೆ. ಹಾಗಾಗಿ ಬಿಜೆಪಿ ಟಾರ್ಗೆಟ್ 25 ಪ್ಲ್ಯಾನ್‌ನ ಮೊರೆ ಹೋಗಿದೆ.

ತನ್ನ ಮಿನಿಮಮ್ ಗ್ಯಾರಂಟಿಯ ಕ್ಷೇತ್ರಗಳನ್ನು ಹೊರತುಪಡಿಸಿ, ತಾನು ತೀರಾ ಪೈಪೋಟಿ ಕೊಟ್ಟು ಹತ್ತು ಸಾವಿರದೊಳಗಿನ ಮತಗಳ ಅಂತರದಲ್ಲಿ ಸೋಲಬಹುದಾದ 25 ಕ್ಷೇತ್ರಗಳನ್ನು ಗುರುತಿಸಿರುವ ಬಿಜೆಪಿ ಆ ಕ್ಷೇತ್ರಗಳಿಗೆ ತನ್ನ ಹಣ, ಸ್ಟ್ರ್ಯಾಟಜಿ, ಮಾನವ ಸಂಪನ್ಮೂಲ, ಆರೆಸ್ಸೆಸ್ ಬಲವನ್ನು ಬಳಸಿಕೊಳ್ಳಲು ಮುಂದಾಗಿದೆ. ಹಾಗಂತ ಇನ್ನುಳಿದ ಕ್ಷೇತ್ರಗಳಲ್ಲಿ ಅದು ಚುನಾವಣೆ ಮಾಡುವುದಿಲ್ಲ ಅಂತ ಅಲ್ಲ. ಈ 25 ಕ್ಷೇತ್ರಗಳಲ್ಲಿ ಅದರ ಗಮನ ತೀಕ್ಷ್ಣ ಮತ್ತು ತೀವ್ರವಾಗಿರಲಿದೆ. ಇವು ಯಾವುದೇ ಒಂದು ಪ್ರಾಂತ್ಯಕ್ಕೆ ಸೀಮಿತವಾದವಲ್ಲ, ರಾಜ್ಯಾದ್ಯಂತ ಹೆಚ್ಚೂಕಮ್ಮಿ ಎಲ್ಲಾ ಜಿಲ್ಲೆಗಳಲ್ಲಿ ಚದುರಿರುವ ಕ್ಷೇತ್ರಗಳು. ಮುಖ್ಯವಾಗಿ, ಕಾಂಗ್ರೆಸ್ ಗೆಲ್ಲಬಲ್ಲ ಕ್ಷೇತ್ರಗಳು!

ತೀಕ್ಷ್ಣ ತಂತ್ರಗಾರಿಕೆಯಿಂದಾಗಿ, ಕಾಂಗ್ರೆಸ್‌ಗೆ ಹೋಗಬಹುದಾದ ಈ 25 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲು ಸಾಧ್ಯವಾದರೆ, ಅದರ ನಂಬರ್ 75 ರಿಂದ 80ರವರೆಗೆ ಹಿಗ್ಗಲಿದೆ. ಅಷ್ಟಾದರೂ, ಫಲಿತಾಂಶದ ನಂತರ ಜೆಡಿಎಸ್ ಜೊತೆ ಸೇರಿ, ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸೆಳೆದು ಮತ್ತೆ ಅಧಿಕಾರ ಸ್ಥಾಪಿಸಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ನೆನಪಿರಲಿ, 2018ರ ಫಲಿತಾಂಶದ ನಂತರ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ ಬಳಿ ಇದ್ದದ್ದು, ಅಷ್ಟೇ ಸಂಖ್ಯಾಬಲ (8೦)!

ಇದಿಷ್ಟೇ ಬಿಜೆಪಿಯ ಲೆಕ್ಕಾಚಾರವಲ್ಲ. ಯಾಕೆಂದರೆ, ರಾಜಕೀಯದಲ್ಲಿ ಎಲೆಕ್ಷನ್ ಅನ್ನೋದು ಕಾರ್ಪೊರೇಟ್ ಶೈಲಿಯ ಟ್ಯಾಲಿಶೀಟುಗಳ ಲೆಕ್ಕಾಚಾರದಷ್ಟು ಸಲೀಸಲ್ಲ ಅಂತ ಬಿಜೆಪಿಗೆ ಗೊತ್ತು. ಹಾಗಾಗಿ ಅದು, ಈ ಟಾರ್ಗೆಟ್ 25ರ ಜೊತೆಗೆ ‘ಪ್ಲ್ಯಾನ್ ಬಿ’ಗೂ ಕಾರ್ಯೋನ್ಮುಖವಾಗಿದೆ.

ಏನದು ಪ್ಲ್ಯಾನ್ ಬಿ?

ಅಧಿಕಾರ ವೈಫಲ್ಯ, ಭ್ರಷ್ಟಾಚಾರ, ಕಮೀಷನ್ ಸರ್ಕಾರವೆಂಬ ಆರೋಪಗಳ ಕಾರಣಕ್ಕೆ ತನ್ನಿಂದ ವಿಮುಖವಾಗುತ್ತಿರುವ ಮತಗಳು, ತನಗೆ ಬರದಿದ್ದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೆ ಎದುರಾಳಿ ಕಾಂಗ್ರೆಸ್ ಪಾಲಾಗಬಾರದು ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯೇ ಅದರ ‘ಪ್ಲ್ಯಾನ್ ಬಿ’ಯ ಜೀವಾಳ. ತನ್ನ ಸ್ಥಾನಗಳನ್ನು ಹಿಗ್ಗಿಸಿಕೊಳ್ಳಲು ಏನೆಲ್ಲ ಮಾಡಬೇಕೊ ಅದನ್ನು ಮಾಡುತ್ತಲೇ, ಕಾಂಗ್ರೆಸ್ ಸಂಖ್ಯೆಯನ್ನು ಕುಗ್ಗಿಸುವತ್ತಲೂ ಅದು ಕಾರ್ಯೋನ್ಮುಖವಾಗಿದೆ. ಕಳೆದ ಸಲಕ್ಕಿಂತ, ಈ ಸಲ ತಾನು ಕಳೆದುಕೊಳ್ಳಲಿರುವ ಸ್ಥಾನಗಳು ಕಾಂಗ್ರೆಸ್‌ಗೆ ಹೋಗುವುದಕ್ಕೆ ಬದಲಾಗಿ ಜೆಡಿಎಸ್‌ಗೆ ಹೋಗಿ, ಅದರ ಸ್ಥಾನಗಳಿಕೆ ಹಿಗ್ಗಿದರೂ ಮುಂದೆ ಬಿಜೆಪಿಗೆ ಲಾಭ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಅಂತಹ ಒಳ ಒಪ್ಪಂದಗಳು ನಡೆದಿರುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಇಲ್ಲದೇ ಹೋಗಿದ್ದರೆ, ಬಿಜೆಪಿಯ ಸುಪ್ರಿಮೋ ಸ್ಥಾನದಲ್ಲಿರುವ ಬಿ ಎಲ್ ಸಂತೋಷ್, ದೇವೇಗೌಡರ ಕುಟುಂಬ ರಾಜಕಾರಣದ ಮೇಲೆ ಮಾತಿನ ದಾಳಿ ಮಾಡುತ್ತಿರುವುದಾಗಲಿ, ಕುಮಾರಸ್ವಾಮಿಯವರು ಬಿಜೆಪಿಯ ಬ್ರಾಹ್ಮಣ್ಯದ ವಿರುದ್ಧ, ಆರೆಸ್ಸೆಸ್‌ನ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕಟುವಾಗಿ ಮಾತನಾಡುತ್ತಿರುವುದಾಗಲಿ, ಇವೆಲ್ಲವೂ ಅನುಮಾನ ಮೂಡಿಸುವಂತೆಯೇ ಇವೆ. ಆ ಮೂಲಕ ಮುಸ್ಲಿಂ ಮತಗಳನ್ನು ಮಾತ್ರವಲ್ಲ, ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ವಿರೋಧಿಸುವ ಜಾತ್ಯತೀತ ಮತಗಳು ಸಹಾ ಗೊಂದಲಕ್ಕೆ ಒಳಗಾಗಿ, ಜೆಡಿಎಸ್ ಮೇಲೆ ಭರವಸೆ ತಳೆಯುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಿರಬಹುದು.

ಈ ‘ಪ್ಲ್ಯಾನ್ ಬಿ’ನ ಮತ್ತೊಂದು ಇಂಟರೆಸ್ಟಿಂಗ್ ಸಂಗತಿಯೆಂದರೆ, ಜನಾರ್ಧನ ರೆಡ್ಡಿಯ ಬಂಡಾಯ ಮತ್ತು ಹೊಸ ಪಕ್ಷ. 2013ರಲ್ಲಿ ಆತ ಬಂಡಾಯವೆದ್ದು ಪಕ್ಷ ಕಟ್ಟಿದಾಗ, ಪರಿಸ್ಥಿತಿ ವಿಭಿನ್ನವಾಗಿತ್ತು. ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೂ ಅಧಿಕಾರದಲ್ಲಿರಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಉಲ್ಟಾ. ಈಗ ಹೈಕಮಾಂಡ್ ಅದೆಷ್ಟು ಸ್ಟ್ರಾಂಗ್ ಆಗಿದೆಯೆಂದರೆ, ಯಡಿಯೂರಪ್ಪನವರಂತಹ ನಾಯಕರೇ ಮೂಲೆಗುಂಪಾಗಬೇಕಾಗಿ ಬಂದಿದೆ. ಇನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಐಟಿ, ಇಡಿ, ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ಕೈಗೊಂಬೆಯಾಗಿ ಬಳಸಿಕೊಳ್ಳುತ್ತಿದೆಯೆಂಬ ಆರೋಪವು ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದೆ. ಹೀಗಿರುವಾಗ, ತನ್ನ ಮೇಲೆ ಗಣಿ ಮತ್ತು ಲಂಚದ ಕೇಸುಗಳಿನ್ನೂ ಬಾಕಿಯಿರುವಾಗ, ಜನಾರ್ಧನ ರೆಡ್ಡಿ ಮೋದಿ-ಶಾ ಜೋಡಿಯ ವಿರುದ್ಧ ಸೆಡ್ಡು ಹೊಡೆಯಲು ಸಾಧ್ಯವೇ? ಅಷ್ಟು ಚೈತನ್ಯ ಆತನಲ್ಲಿ ಉಳಿದಿದೆಯೇ?

ಇದು ಸಹಾ ಬಿಜೆಪಿಯದ್ದೇ ತಂತ್ರ! ಬಿಜೆಪಿಯಿಂದ ವಿಮುಖವಾಗುವ ಮತಗಳು ಕಾಂಗ್ರೆಸ್‌ಗೆ ಹೋಗುವುದನ್ನು ತಪ್ಪಿಸಿ, ತಮ್ಮವರೇ ಆ ಮತಗಳನ್ನು ಸೆಳೆಯುವಂತೆ ಮಾಡಲು ಜನಾರ್ಧನ ರೆಡ್ಡಿಯನ್ನು ಅಖಾಡಕ್ಕೆ ಬಿಡಲಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ತಕ್ಕಮಟ್ಟಿಗೆ ಚಿತ್ರದುರ್ಗದ ಮೇಲೂ ಪ್ರಭಾವ ಹೊಂದಿರುವ ರೆಡ್ಡಿ-ರಾಮುಲು ಬಳಗ ಬಿಜೆಪಿ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ಬೈಪಾಸ್ ಮಾಡಿ, ಒಂದಷ್ಟು ಸ್ಥಾನಗಳನ್ನು ಗೆಲ್ಲಲು ಶಕ್ಯವಾದರೆ, ಕಡೇಪಕ್ಷ ಕಾಂಗ್ರೆಸ್ ಸೋಲಿಗೆ ಕಾರಣವಾದರೆ, ಅದು ಬಿಜೆಪಿಗೆ ಪರೋಕ್ಷ ಲಾಭ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!