Thursday, September 19, 2024

ಪ್ರಾಯೋಗಿಕ ಆವೃತ್ತಿ

“ನೀತಿ ಸಂಹಿತೆಗೆ” ನೀತಿವಂತರು ಹೆದರುವ ಅವಶ್ಯಕತೆ ಇಲ್ಲ…..

✍️ ವಿವೇಕಾನಂದ ಎಚ್ ಕೆ.

ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ‌ಒಳಗಾಗಿರುವುದು ಕಾಣುತ್ತಿದೆ.  ಕಾರಣ ನೀತಿ ಇಲ್ಲದ ಕೆಲವು ‌ಸದಸ್ಯರು ಮತ್ತು ಆಕ್ರಮಣಕಾರಿ ಮನೋಭಾವದ ಕೆಲವರು ವ್ಯಕ್ತಪಡಿಸುವ ಅಭಿಪ್ರಾಯಗಳು ಕಾನೂನಿನ ಕಣ್ಣಿಗೆ ಬಿದ್ದು ಅನಾವಶ್ಯಕವಾಗಿ ತೊಂದರೆ ಆಗಬಹುದು ಎಂಬ ಅನುಮಾನ. ‌ಆ ಸಾಧ್ಯತೆಗಳು ಇದೆ ಎಂಬುದು ವಾಸ್ತವ. ಏಕೆಂದರೆ ಈಗಿನ ಸಮಾಜದಲ್ಲಿ ಅನೀತಿವಂತರ ಸಂಖ್ಯೆ ಹೆಚ್ಚಾಗಿದೆ ಮತ್ತು ಅನೈತಿಕಯೂ ವ್ಯಾಪಾರದ ಸರಕಾಗಿ ವ್ಯಾಪಕವಾಗಿ ಬೆಳೆದಿದೆ.

ನಿಜವಾಗಿಯೂ ನೀತಿ ಸಂಹಿತೆ ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ಅದು ಒಂದು ಜೀವನ ವಿಧಾನವಾಗಿರಬೇಕು. ಅದೊಂದು‌ ಧಾರ್ಮಿಕ ಮತ್ತು ಸಾಮಾಜಿಕ ನಡವಳಿಕೆಯಾಗಿರಬೇಕು. ನೀತಿಯೇ ಬದುಕಿನ ಧ್ಯೇಯವಾಗಿರಬೇಕು.

ಯಾವುದೇ ಕ್ಷೇತ್ರವಿರಲಿ, ಯಾವುದೇ ಸಂದರ್ಭವಿರಲಿ, ಯಾವುದೇ ವ್ಯಕ್ತಿ ಇರಲಿ ಅನೀತಿ ಕೆಟ್ಟದ್ದು. ಚುನಾವಣಾ ಸಂದರ್ಭದ ಅನೀತಿ ಎಂದರೆ, ಯಾವುದೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಂಬಂಧಪಟ್ಟವರ ಅನುಮತಿ ಇಲ್ಲದೇ ಪ್ರಚಾರ ಮಾಡುವುದು, ಪಕ್ಷ ಅಥವಾ ವ್ಯಕ್ತಿಗಳ ನಿಂದನೆ ಮಾಡುವುದು, ವಿವಿಧ ರೀತಿಯ ಆಮಿಷಗಳನ್ನು ಒಡ್ಡುವುದು, ಬೆದರಿಸುವುದು, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದು ಮುಂತಾದ ಸಾಮಾನ್ಯ ವಿಷಯಗಳ ನಿಷೇಧ.

ಅದನ್ನು ಹೊರತುಪಡಿಸಿ ಎಂದಿನಂತೆ ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ, ಚುನಾವಣಾ ಅಕ್ರಮಗಳ ಜನಜಾಗೃತಿ, ಮತದಾರರ ಜವಾಬ್ದಾರಿ ನೆನಪಿಸುವ ಬರಹಗಳು, ನಮ್ಮ ಈಗಿನ ಸೈದ್ಧಾಂತಿಕ ಒಲವು – ನಿಲುವುಗಳು, ಸರ್ಕಾರ ಅಥವಾ ಜನಪ್ರತಿನಿಧಿಗಳು ಹೇಗಿರಬೇಕು ಎಂಬ ಆಶಯದ ಅಭಿಪ್ರಾಯಗಳು, ಜಾತಿ ಧರ್ಮದ ವ್ಯಾಮೋಹಗಳು, ಭ್ರಷ್ಟಾಚಾರದ ವಿವಿಧ ರೂಪಗಳು, ವ್ಯವಸ್ಥೆಯ ಶುದ್ದೀಕರಣಕ್ಕೆ ಸಂಬಂಧಿಸಿದ ಸಲಹೆಗಳು, ಚುನಾವಣಾ ಫಲಿತಾಂಶದ ವಿಮರ್ಶಾತ್ಮಕ ದಿಕ್ಕುಗಳು ಹೀಗೆ ಅನೇಕ ವಿಷಯಗಳ ಬಗ್ಗೆ ನಮ್ಮ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯ ಇರುತ್ತದೆ….

ಹಾಗೆ ಒಮ್ಮೆ ಕಣ್ಣಾಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳ ಅತ್ಯಂತ ಹೇಯ ರೀತಿಯ ದ್ವೇಷ ಮತ್ತು ಹಿಂಸಾತ್ಮಕ ಭಾಷಣಗಳು, ವಿಭಜನಾತ್ಮಕ ಮತ್ತು ದೇಶದ್ರೋಹಿ ಲೇಖನಗಳು, ಸುಳ್ಳು ಇತಿಹಾಸದ ಸೃಷ್ಟಿಗಳು, ಮಾಧ್ಯಮಗಳ ಅತಿರೇಕದ ಚರ್ಚೆಗಳು, ಮತದಾರರಿಗೆ ಬಹಿರಂಗವಾಗಿಯೇ ಅನೇಕ ರೀತಿಯ ಹಣ ವಸ್ತುಗಳ ಹಂಚಿಕೆ ಎಲ್ಲವೂ ನಮ್ಮ ಅರಿವಿನ ಅಂತರದಲ್ಲಿಯೇ ನಡೆಯುತ್ತಿದೆ. ಅದನ್ನು ತಡೆಯಲು ನಮ್ಮ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ಬಹುತೇಕ ವಿಫಲವಾಗಿದೆ. ಮಾಧ್ಯಮಗಳು ಅದಕ್ಕೆ ವೇದಿಕೆಯನ್ನು ಕಲ್ಪಿಸಿವೆ.

ಇಂತಹ ಸನ್ನಿವೇಶದಲ್ಲಿ ಸಾಮಾನ್ಯ ಜನ ಬಾಯಿ ಮುಚ್ಚಿಕೊಂಡು ಕುಳಿತು ಕೊಳ್ಳಬೇಕು ಎಂಬ ನಿರೀಕ್ಷೆ ಅಥವಾ ನೀತಿ ಸಂಹಿತೆ ಪ್ರಜಾಪ್ರಭುತ್ವಕ್ಕೆ ಮಾರಕ.

ಯಾರೋ ಕೆಲವು ದುಷ್ಟ ಶಕ್ತಿಗಳು ಕಾನೂನು ಬಾಹಿರವಾಗಿ, ಅನೈತಿಕವಾಗಿ, ಅಸಭ್ಯವಾಗಿ ವರ್ತಿಸಿದರೆ ಅವರು ಶಿಕ್ಷೆಗೆ ಅರ್ಹರು, ಅವರನ್ನು ಶಿಕ್ಷಿಸಿ. ಆದರೆ ಆ ನೆಪದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಅತ್ಯಂತ ಸಭ್ಯವಾಗಿ, ವಾಕ್ ಸ್ವಾತಂತ್ರ್ಯ ಮಿತಿಯಲ್ಲಿ ಅತ್ಯುತ್ತಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಒಂದು ಜನಾಭಿಪ್ರಾಯ ರೂಪಿಸುವ ಸ್ವಾತಂತ್ರ್ಯವನ್ನು ಖಂಡಿತ ಹೆದರದೆ ಬಳಸಿಕೊಳ್ಳಬೇಕು.

ಅನೇಕ ವ್ಯಕ್ತಿಗಳು ಕ್ರಿಮಿನಲ್ ಕೆಲಸಗಳನ್ನು ಬಹಿರಂಗವಾಗಿ, ಧೈರ್ಯವಾಗಿ ಮಾಡುತ್ತಿರುವಾಗ ಉದಾಹರಣೆ ಹಣ ಹೆಂಡ ಕುಕ್ಕರ್ ಹಂಚಿಕೆ, ದ್ವೇಷ ಭಾಷಣ, ಜಾತಿ ಸಂಘರ್ಷ, ಗೌಪ್ಯ ಮತದಾನದ ಪಾವಿತ್ಯದ ಉಲ್ಲಂಘನೆಯ ಸಮೀಕ್ಷೆಗಳು ನಡೆಸುತ್ತಿರುವಾಗ ಒಳ್ಳೆಯ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಲು ಭಯವೇಕೆ.

ನಮಗಿರುವ ಸಾಮಾನ್ಯ ಜ್ಞಾನ ಉಪಯೋಗಿಸಿಕೊಂಡು ಒಳ್ಳೆಯ ಕೆಲಸ ಮಾಡೋಣ. ಅನಾವಶ್ಯಕವಾಗಿ ಹೆದರಿಕೊಂಡು ದುಷ್ಟ ಜನರಿಗೆ ಅಧಿಕಾರದ ರೂಪದಲ್ಲಿ ನಮ್ಮ ಜುಟ್ಟು ನೀಡಿ ಗುಲಾಮರಾಗುವುದು ಬೇಡ.

ಯಾರೋ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಇನ್ಯಾರೋ ಗ್ರೂಪ್ ನಿರ್ವಾಹಕರನ್ನು ಹೊಣೆ ಮಾಡುವುದು ಹಾಸ್ಯಾಸ್ಪದ. ಪೋಲೀಸರು ಮತ್ತು ನ್ಯಾಯಾಲಯಗಳೇ ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳ ನಿರ್ವಾಹಕರಿಗೆ ಅದನ್ನು ತಡೆಯಲು ಸಾಧ್ಯವೇ….

ಆದ್ದರಿಂದ ಸಭ್ಯತೆಯ ಗೆರೆ ‌ದಾಟದೆ, ಕಾನೂನಿನ ವ್ಯಾಪ್ತಿ ಮೀರದೆ ನಾವೇ ಸ್ವಯಂ ನಿಯಂತ್ರಣ ಹಾಕಿಕೊಂಡು ರಾಜಕೀಯ ಅಭಿಪ್ರಾಯಗಳನ್ನು ಸಹ ನೇರವಾಗಿ ವ್ಯಕ್ತಪಡಿಸೋಣ. ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ.

ಚುನಾವಣಾ ಆಯೋಗ ನಿಜವಾಗಿ ಹೆಚ್ಚು ಆಸಕ್ತಿ ವಹಿಸಬೇಕಿರುವುದು ರಾಜಕೀಯ ಪಕ್ಷಗಳ ಅಕ್ರಮ ತಡೆಯಲೇ ಹೊರತು ಸಾಮಾನ್ಯ ಜನರ ಸಾಮಾನ್ಯ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲಲ್ಲ.

ರಾಜಕೀಯ ನಮಗೇಕೆ ಎಂದು ನಿರ್ಲಕ್ಷ್ಯ ಮಾಡಿದರೆ ಇಡೀ ವ್ಯವಸ್ಥೆಯೇ ನಮ್ಮನ್ನು ನಿರ್ಲಕ್ಷ್ಯ ಮಾಡಿ ಹೊಗಳು ಸಾಹಿತ್ಯ ರಚಿಸುವಂತೆ ಮಾಡಿ, ಗಾಳಿ ನೀರು ಆಹಾರ ಆಡಳಿತ ಕಲುಷಿತ ಮಾಡಿ ನಮ್ಮ ಮೇಲೆ ‌ಸವಾರಿ ಮಾಡುತ್ತದೆ.

ದಯವಿಟ್ಟು ಎಚ್ಚರಗೊಳ್ಳಿ. ನಮ್ಮನ್ನು ‌ಪ್ರತಿನಿಧಿಸುವ ವ್ಯಕ್ತಿಗಳು ಅತ್ಯಂತ ಉತ್ತಮ ವ್ಯಕ್ತಿತ್ಬದವರು ಆಗಿರಲು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸೋಣ.
ನಮ್ಮ ಜೀವನಮಟ್ಟ ಉತ್ತಮ ಪಡಿಸಿಕೊಳ್ಳೋಣ. ನಾವು ನಿಂತಿರುವ ನೆಲೆಯಿಂದದಲೇ ನಮ್ಮ ಕೈಲಾದಷ್ಟು.

ಆ ರೀತಿಯ ಹೋರಾಟದಿಂದಲೇ ನಮಗೆ ಸ್ವಾತಂತ್ರ್ಯ ದೊರೆತದ್ದು ಎಂದು ನೆನಪಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!