Saturday, May 18, 2024

ಪ್ರಾಯೋಗಿಕ ಆವೃತ್ತಿ

ಈ ಚುನಾವಣೆಯಲ್ಲಿ ಸಿವಿಲ್ ಸೊಸೈಟಿಯ ಪಾತ್ರವೇನು?

✍️ ಮಾಚಯ್ಯ ಎಂ ಹಿಪ್ಪರಗಿ

ಕರ್ನಾಟಕದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ 10ಕ್ಕೆ ಎಲೆಕ್ಷನ್, ಮೇ 13ಕ್ಕೆ ಫಲಿತಾಂಶ. ಇನ್ನು ರಾಜಕೀಯ ಪಕ್ಷಗಳು ಮತ್ತಷ್ಟು ಚುರುಕುಗೊಂಡು ಅಖಾಡಕ್ಕಿಳಿಯತ್ತವೆ. ಕಣ ರಂಗೇರುತ್ತದೆ. ಪ್ಯಾನೆಲ್ ಚರ್ಚೆಗಳು ಕಾವೇರುತ್ತವೆ. ಇದರ ನಡುವೆ ಈ ಚುನಾವಣೆಯಲ್ಲಿ ಸಿವಿಲ್ ಸೊಸೈಟಿಯ ಪಾತ್ರವೇನು? ಎಂಬ ಪ್ರಶ್ನೆಯನ್ನು ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ಕೇಳಿಕೊಳ್ಳಬೇಕಿದೆ. ಯಾಕೆಂದರೆ ಇದು ಎಂದಿನಂತೆ ನಡೆಯುತ್ತಿರುವ ಮತ್ತೊಂದು ಚುನಾವಣೆಯಲ್ಲ! ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಪಣಕ್ಕಿಟ್ಟಿರುವ ಚುನಾವಣೆ. ಈ ನಿಟ್ಟಿನಿಂದ ನಾವು ಸುಮ್ಮನೆ ಕೂರುವಂತಹ ಚುನಾವಣೆಯಂತೂ ಇದಲ್ಲ.

ಈಗಾಗಲೇ ಒಂದಷ್ಟು ಹಿರಿಯರು, ಪ್ರಜ್ಞಾವಂತರು ಹಲವು ವೇದಿಕೆಗಳ ಮೂಲಕ ಜನಜಾಗೃತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ. ಅಂತಹ ಬಹುಪಾಲು ಯತ್ನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವುಗಳು ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು, ಈಗಿರುವ ಕೋಮುವಾದಿ ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುವ ತುಂಬಾ ನೀರಸ ಪ್ರಯತ್ನಗಳಿಗಷ್ಟೇ ತಮ್ಮನ್ನು ಸೀಮಿತವಾಗಿಸಿಕೊಂಡಿವೆ. ಹಾಗಂತ ಅವರ ಪ್ರಯತ್ನಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಈಗಾಗಲೇ ಹೇಳಿದಂತೆ ಇದು not just a, one more election. ಈಗಿರುವ ಸರ್ಕಾರ ಅದೆಷ್ಟು ಗಾಢವಾಗಿ ಆಡಳಿತವಿರೋಧಿ ಅಲೆಯನ್ನು ತಬ್ಬಿಹಿಡಿದಿದೆ ಎಂದರೆ, ಅದರಿಂದ ಹೊರಬರುವ ಹತಾಶೆಯಲ್ಲಿ ಒಂದೊಂದಾಗಿ ಹೊಸ ಲಂಗರುಗಳನ್ನು ಮೈಮೇಲೆಳೆದುಕೊಂಡು ಮುಳುಗುತ್ತಿದೆ. ಸಾರಾಸಗಟಾಗಿ ಮೀಡಿಯಾಗಳು, ಪ್ರಧಾನವಾಗಿ ದೃಶ್ಯ ಮಾಧ್ಯಮಗಳು, ಕೋಮುವಾದಿ ಪಕ್ಷದ ಮುಖವಾಣಿಯಾಗಿ ಬದಲಾಗಿದ್ದರೂ ಸಹಾ, ಅವುಗಳೂ ಈ ಸರ್ಕಾರವನ್ನು ಬಚಾವು ಮಾಡಲು ಯಾವುದೇ ದಾರಿ ಕಾಣದೆ ಕೈಕೈ ಹಿಸುಕಿಕೊಳ್ಳುತ್ತಿವೆ. ಆ ಪಕ್ಷ ನಡೆಸುತ್ತಿರುವ ವಿಜಯದ ಯಾತ್ರೆಗಳಿಗೆ ಜನರನ್ನು ಒಟ್ಟುಗೂಡಿಸುವುದೂ ದುಸ್ಥರವಾಗುತ್ತಿದೆ. ಪ್ರತಿ ಸಮಾವೇಶದ ನಂತರ ಖಾಲಿ ಕುರ್ಚಿಗಳೋ, ಜನರಿಲ್ಲದೆ ವ್ಯರ್ಥವಾಗಿ ಮಣ್ಣುಮುಚ್ಚಿದ ಅನ್ನಾಹಾರವೋ ಚರ್ಚೆಗೀಡಾಗುತ್ತಿವೆ. ಇದೆಲ್ಲದರ ಸಾರಾಂಶ, ಅಧಿಕಾರ ನಡೆಸುತ್ತಿರುವ ಸರ್ಕಾರ ಸಂಪೂರ್ಣವಾಗಿ ಜನವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದನ್ನು ಸಾಬೀತು ಮಾಡುತ್ತವೆ.

ಇಂತಹ ಸಂದರ್ಭದಲ್ಲಿ ಸಿವಿಲ್ ಸೊಸೈಟಿಯ ಪ್ರಯತ್ನದ ಭಾಗವಾಗಿ ನಮ್ಮ ಪ್ರಯೋಗಗಳನ್ನು ಜನಜಾಗೃತಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಜಿಸಬೇಕಾದ ತುರ್ತು ಇದೆ. ಈಗಾಗಲೇ ಜನರ ಮನಸ್ಸಿನಲ್ಲಿ ಯಾವುದು ದೃಢವಾಗಿದೆಯೋ ಅದನ್ನೇ ಮತ್ತೆ ದೃಢಮಾಡುತ್ತೇವೆ ಅಂತ ಪ್ರಯತ್ನಕ್ಕಿಳಿಯುವುದು ಸಮಯದ ವ್ಯರ್ಥ ಮಾತ್ರವಲ್ಲ, ಸಿವಿಲ್ ಸೊಸೈಟಿಯ ಅಗತ್ಯತೆ ನಿಜಕ್ಕೂ ಎಲ್ಲಿದೆಯೋ ಅಲ್ಲಿಗೆ ಹೋಗದಂತೆ ನಮ್ಮನ್ನು ನಾವು ಡೈಲ್ಯೂಟ್ ಮಾಡಿಕೊಳ್ಳುವ ಅಪಾಯವೂ ಹೌದು! ಇವತ್ತು ಸೋಶಿಯಲ್ ಮೀಡಿಯಾ ಎಷ್ಟು ಸಕ್ರಿಯವಾಗಿ Individual Personalityಗಳನ್ನು ತನ್ನೊಳಗೆ ತೊಡಗಿಸಿಕೊಳ್ಳುತ್ತಿದೆಯೆಂದರೆ, ದೊಡ್ಡ ಯೋಜನೆ, ಅಪಾರ ಹಣ, ವಿಪರೀತ ಎನ್ನುವ ನೆಟ್‌ವರ್ಕ್ ಸಹ ಇಲ್ಲದೆ ತುಂಬಾ ಸರಳವಾಗಿ ಅಭಿಪ್ರಾಯಗಳನ್ನು ರೂಪಿಸಬಹುದು. ದಿನಬೆಳಗಾದರೆ, ಯಾರದೋ ವೈಯಕ್ತಿಕ ಬರಹ ಅಥವಾ ಪೋಸ್ಟರ್, ವೀಡಿಯೋ ಅಥವಾ ಯಾರೋ ಸಾರ್ವಜನಿಕ ವ್ಯಕ್ತಿಯ ಆಕ್ರೋಶ ಸಿಕ್ಕಾಪಟ್ಟೆ ವೈರಲ್ ಆಗಿರುತ್ತದೆ. ಆಡಳಿತವಿರೋಧಿ ಅಲೆಗೆ ಸಿಕ್ಕಿಕೊಂಡಿರುವ ಈ ಕೋಮುವಾದಿ ಪಕ್ಷದ ವಿರುದ್ಧ ಅಂತಹ ಸಾಕಷ್ಟು ಸೋಶಿಯಲ್ ಮೀಡಿಯಾ ಕಂಟೆಂಟ್‌ಗಳು ಹರಿದು ಬರುತ್ತಿವೆ. ಅದರ ನಡುವೆ, ಮಹತ್ತರವಾದದ್ದನ್ನು ಸಾಧಿಸುವ ಸಾಮರ್ಥ್ಯ, ಪ್ರಭಾವ, ಮತ್ತು ನೆಟ್‌ವರ್ಕ್ ಇರುವವರು ಸಹಾ ಅಂತದೇ ಕೆಲಸಗಳನ್ನು ಮಾಡುತ್ತಾ ಕೂರುವುದಕ್ಕೆ ಇದು ಸಮಯವಲ್ಲ ಅನ್ನುವುದು ನನ್ನ ಅಭಿಪ್ರಾಯ.

ಹಾಗಾದರೆ ಸಿವಿಲ್ ಸೊಸೈಟಿಯಾಗಿ ನಾವೇನು ಮಾಡಬಹುದು?

ಮೊದಲನೆಯದಾಗಿ ನಾವು ಒಂದಷ್ಟು ಪ್ರಾಕ್ಟಿಕಲ್ ಮತ್ತು ಫೀಲ್ಡ್-ಓರಿಯೆಂಟೆಡ್ ಪ್ರಯತ್ನಗಳಿಗೆ ನಮ್ಮನ್ನು ಅಣಿ ಮಾಡಿಕೊಳ್ಳಬೇಕಿದೆ. ಅಧಿಕಾರರೂಢ ಕೋಮುವಾದಿ ಪಕ್ಷ ತನ್ನ ದುರಾಡಳಿತದಿಂದ ಮಾತ್ರವಲ್ಲದೇ, ತನ್ನೊಳಗೇ ಭುಗಿಲೆದ್ದಿರುವ ಆಂತರಿಕ ಭಿನ್ನಾಭಿಪ್ರಾಯಗಳ ಬೇಗುದಿಯಿಂದಾಗಿ ದೊಡ್ಡಮಟ್ಟದಲ್ಲಿ ಮತಗಳಿಕೆಯನ್ನು ಕಳೆದುಕೊಳ್ಳುವ ಸಂಭವವಿದೆ. ಈಗಾಗಲೇ ಆ ಪಕ್ಷದಲ್ಲಿ ಅಂತಹ ಹತಾಶೆಯ ವರ್ತನೆಗಳು ತೋರಿಬರುತ್ತಿವೆ. ಆದರೆ ಈಗ ಪ್ರಶ್ನೆ ಇರುವುದು, ಹಾಗೆ ಆ ಪಕ್ಷ ಕಳೆದುಕೊಳ್ಳುವ ಮತಗಳು ಹೇಗೆ ಸಾಂದ್ರೀಕೃತಗೊಳ್ಳುತ್ತವೆ ಎನ್ನುವುದರ ಕುರಿತು.

ಈ ಪ್ರಶ್ನೆ ಯಾಕೆ ಮುಖ್ಯವಾಗುತ್ತದೆ ಎಂಬುದನ್ನು 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಮಗೆ ಅರ್ಥ ಮಾಡಿಸುತ್ತದೆ. ಆ ಚುನಾವಣೆಯಲ್ಲಿ ಆಡಳಿತವಿರೋಧಿ ಅಲೆಯೇ ಇರದ, ಜನಕಲ್ಯಾಣ ಸರ್ಕಾರ ಎನಿಸಿಕೊಂಡಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಕಳೆದ ಸಲಕ್ಕಿಂತ (2013) 1.4% ಅಧಿಕ ಮತಗಳಿಕೆ ಪಡೆದಿದ್ದರೂ, ಅವುಗಳನ್ನು ಶಾಸಕ ಸ್ಥಾನಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿ ಕೇವಲ 80 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಆದರೆ ಕಾಂಗ್ರೆಸ್‌ಗಿಂತ 1.79% ಕಡಿಮೆ ಮತ ಗಳಿಸಿದ್ದರೂ ಬಿಜೆಪಿ 104 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಇದನ್ನು ಗಮನಿಸಿದಾಗ, ಮತಗಳ ಸಾಂದ್ರೀಕರಣ ತುಂಬಾ ಮುಖ್ಯವಾಗುತ್ತದೆ ಎಂಬುದನ್ನು ಅರ್ಥ ಮಾಡಿಸುತ್ತದೆ.

ಈ ಸಲ ಬಿಜೆಪಿಯನ್ನು ಕಾಂಗ್ರೆಸ್‌ನಷ್ಟೇ ತೀವ್ರವಾಗಿ ವಿರೋಧಿಸುವ ಮತ್ತೂ ಒಂದಷ್ಟು ಪಕ್ಷಗಳು ಚುನಾವಣಾ ಅಖಾಡಕ್ಕಿಳಿದಿವೆ. ಇದು ಹೊಸದೇನೂ ಅಲ್ಲ. ಹಿಂದಿನ ಚುನಾವಣೆಗಳಲ್ಲೂ ಇಂತಹ ಸ್ಪರ್ಧೆಗಳನ್ನು ಕಾಣಬಹುದು. ಇಂತಹ ಬಹುವಿಚಾರಧಾರೆ ಆಯಾಮದ ಸ್ಪರ್ಧೆಯು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು. ಆದರೆ ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟಿರುವ ಚುನಾವಣೆಯ ವಿಚಾರದಲ್ಲಿ!?

ಮತ್ತೆ 2014ರ ಚುನಾವಣೆಯಿಂದಲೇ ಉದಾಹರಣೆಯನ್ನು ಹೆಕ್ಕುವುದಾದರೆ, ನೌಹೇರಾ ಶೇಕ್ ಎಂಬ ಮಹಿಳಾ ನಾಯಕಿಯ ನೇತೃತ್ವದಲ್ಲಿ, ಚುನಾವಣೆಗು ಕೇವಲ ಆರು ತಿಂಗಳ ಹಿಂದಷ್ಟೇ ಜನ್ಮವೆತ್ತಿದ್ದ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ ಎಂಬ ಪಕ್ಷದ ಸ್ಪರ್ಧೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಎಲ್ಲಾ 224 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಆ ಪಕ್ಷದ ಮುಖ್ಯ ಉದ್ದೇಶ ಮುಸ್ಲಿಂ ಮತಗಳನ್ನು ವಿಭಜಿಸುವುದಾಗಿತ್ತು ಎಂಬುದು ಈಗ ರಹಸ್ಯವೇನೂ ಅಲ್ಲ. ಯಾಕೆಂದರೆ ಆ ಚುನಾವಣೆಯ ನಂತರ ಆ ಪಕ್ಷದ ಕಥೆ ಏನಾಯ್ತು ಅಂತ ಯಾರಿಗೂ ಗೊತ್ತಿಲ್ಲ. ಒಕ್ಕಲಿಗ, ಲಿಂಗಾಯತ, ಬಿಲ್ಲವ, ಭಂಟ ಮೊದಲಾದ ನಿರ್ಣಾಯಕ ಜಾತಿಗಳಂತೆ ಮುಸ್ಲಿಂ ಸಮುದಾಯವು ಯಾವುದೇ ಒಂದು ನಿರ್ದಿಷ್ಟ ಪ್ರಾದೇಶಿಕ ಭಾಗದ ಪ್ರಾಬಲ್ಯವನ್ನು ಹೊಂದದೆ ಸರಿಸುಮಾರು ಎಲ್ಲಾ ನಗರ ಪ್ರದೇಶಗಳಲ್ಲಿ ನೆಲೆಸಿರುವುದು ಇಲ್ಲಿ ಗಮನಾರ್ಹ. ಹಾಗಾಗಿಯೇ ಎಲ್ಲಾ ಕ್ಷೇತ್ರಗಳಲ್ಲೂ ಅದು ಸ್ಪರ್ಧಿಸಿತ್ತು. ಆ ಚುನಾವಣೆಯಲ್ಲಿ ಎಂಇಪಿ ಗಳಿಸಿದ್ದು ಕೇವಲ 0.3% ಮತಗಳನ್ನು ಮಾತ್ರ. ಮೇಲ್ನೋಟಕ್ಕೆ ಇದು ಸಣ್ಣ ಮತಗಳಿಕೆಯಂತೆ ಕಂಡುಬಂದರೂ, ಕರ್ನಾಟಕದಲ್ಲಿ ಬಲವಾದ ಸೈದ್ಧಾಂತಿಕ ನೆಲೆಗಟ್ಟು ಹೊಂದಿರುವ ಬಿಎಸ್‌ಪಿ ಪಕ್ಷ ಕೂಡಾ ಆ ಸಲ ಗಳಿಸಿದ್ದು ಅಷ್ಟೇ ಪ್ರಮಾಣದ ಮತಗಳನ್ನು ಎಂಬುದು ಗಮನಾರ್ಹ ಸಂಗತಿ! ಇನ್ನೂ ಅಚ್ಚರಿಯ ವಿಷಯವೆಂದರೆ ಸಿಪಿಎಂ ಪಾರ್ಟಿಗಿಂತಲೂ ಹೆಚ್ಚು ಶೇಕಡಾ ವಾರು ಮತಗಳನ್ನು ಎಂಇಪಿ ಗಳಿಸಿತ್ತು. ಹೊಸದಾಗಿ ಹುಟ್ಟಿದ, ಕರ್ನಾಟಕದಲ್ಲಿ ಯಾವುದೇ ಕಾರ್ಯಕರ್ತರ ನೆಲೆಯೇ ಇಲ್ಲದ ಪಕ್ಷ ಎಲ್ಲಾ 224ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆಂದರೆ, ಅದರ ಹಿಂದೆ ಮುಸ್ಲಿಂ ಮತವಿಭಜನೆಯೇ ಮೂಲ ಹುನ್ನಾರ ಎನ್ನುವುದು ಅರ್ಥವಾಗುತ್ತದೆ. ಕಾಂಗ್ರೆಸ್‌ನ ಶಾಸಕ ಸ್ಥಾನಗಳು ಕುಸಿಯುವಲ್ಲಿ ಅದು ಸಹಾ ಮುಖ್ಯವಾದ ಸಂಗತಿಗಳಲ್ಲಿ ಒಂದು.

ಈ ಸಲ ಎಂಇಪಿ ಇಲ್ಲವಾದರೂ, ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಮಣಿಸಲು ಶಕ್ಯವಿರುವ ಕಾಂಗ್ರೆಸ್ ಪಕ್ಷಕ್ಕೆ ಹೋಗಬಹುದಾದ ಮುಸ್ಲಿಂ, ದಲಿತ ಮತ್ತು ಹಿಂದುಳಿದ ಸಮುದಾಯಗಳ ಮತಗಳನ್ನು ವಿಭಜಿಸಬಲ್ಲ ಒಂದಷ್ಟು ಪಕ್ಷಗಳು ಅಖಾಡದಲ್ಲಿವೆ. ಇವುಗಳಲ್ಲೆಲ್ಲ ಬಹುಪಾಲು ಕೋಮುವಾದವನ್ನು ವಿರೋಧಿಸುವ, ಪ್ರಗತಿಪರ ಆಲೋಚನೆಗಳನ್ನು ಹೊಂದಿರುವ ನಾಯಕರೇ ಇದ್ದಾರೆ. ಅವರು ಪ್ರಗತಿಪರ ಸಿವಿಲ್ ಸೊಸೈಟಿಯ ಜೊತೆಗೆ ಗುರುತಿಸಿಕೊಂಡವರಾಗಿದ್ದಾರೆ. ಆದರೆ ತಥಾಕಥಿತ ರಾಜಕೀಯ ಅಸ್ಮಿತೆ, ಕಾಂಗ್ರೆಸ್ ಪಕ್ಷದ ಚಾರಿತ್ರಿಕ ನಡವಳಿಕೆಗಳ ಕಾರಣಕ್ಕೆ ಆ ಪಕ್ಷಗಳು ಸ್ಪರ್ಧೆಗಿಳಿದಿವೆ. ಆದರೆ ಈ ಚುನಾವಣೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಸಿವಿಲ್ ಸೊಸೈಟಿಯು, ಈಗ ಮಧ್ಯಪ್ರವೇಶಿಸಿ ಈ ಮತವಿಭಜನೆಯನ್ನು ತಡೆಯಲು ಸಾಧ್ಯವಿರುವ ಪರ್ಯಾಯ ಯತ್ನಗಳಿಗೆ ಮುಂದಾಗಬೇಕಾದ ಬಹುದೊಡ್ಡ ಹೊಣೆಯನ್ನು ಸಂದರ್ಭ ನಿರೀಕ್ಷಿಸುತ್ತಿದೆ. ಈ ಕುರಿತು ನಡೆಯಬಹುದಾದ ಸಂವಾದಗಳು, ಚರ್ಚೆಗಳು ಅಂತಹ ಹೊಸ ಪರ್ಯಾಯಗಳನ್ನು ನಮ್ಮ ಮುಂದಿರಿಸಬಲ್ಲವು.

ಇನ್ನು ಮುಖ್ಯವಾಗಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿವಿಲ್ ಸೊಸೈಟಿ ಬಲು ದೊಡ್ಡ ಜವಾಬ್ಧಾರಿ ನಿರ್ವಹಿಸಬೇಕಿದೆ. ಇವಿಎಂಗಳನ್ನು ಟ್ಯಾಂಪರ್ ಮಾಡಬಹುದೋ, ಇಲ್ಲವೋ ಎನ್ನುವುದು ಇನ್ನೂ ಸಾಬೀತಾಗಿಲ್ಲ. ಆದಾಗ್ಯೂ ಉತ್ತರ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಹಲವು ಲಾರಿಗಳಲ್ಲಿ ಅಕ್ರಮ ಇವಿಎಂ ಸಾಗಾಣಿಕೆಗಳು ಪತ್ತೆಯಾದ ಬಗ್ಗೆ ವರದಿಯಾಗಿದ್ದವು. ಚುನಾವಣೆಯನ್ನು ಶತಾಯಗತಾಯ ಗೆಲ್ಲಲು ಸರ್ವಾಧಿಕಾರಿ ಮನಸ್ಸುಗಳು ಏನು ಬೇಕಾದರು ಮಾಡಬಹುದು. ಇಂತವುಗಳನ್ನು ನಿಯಂತ್ರಿಸಬೇಕಾದ ಪೊಲೀಸ್ ಮತ್ತು ಚುನಾವಣಾ ಆಯೋಗಗಳೇ ಏಕಪಕ್ಷೀಯವಾಗುವ ಸಾಧ್ಯತೆ ಇದೆ. ಇಂಥಾ ಸಮಯದಲ್ಲಿ ರಾಜ್ಯಾದ್ಯಂತ ಉತ್ತಮ ನೆಟ್‌ವಕ್ ಹೊಂದಿದ ಒಂದು ವೇದಿಕೆಯನ್ನು ಹುಟ್ಟುಹಾಕಿ, ಅದರ ಉದ್ದೇಶಕ್ಕೆ ತುಂಬಾ ಪ್ರಚಾರಕೊಟ್ಟು, ಸಾಧ್ಯವಾದ ಮಟ್ಟಿಗೆ ಪ್ರತಿ ತಾಲ್ಲೂಕಿನಲ್ಲೂ (ಪ್ರತಿ ಊರಲ್ಲಿ ಆದರೆ ಇನ್ನೂ ಉತ್ತಮ) ಅಂತಹ ಎಂಟತ್ತು ಜನರ ತಂಡ ಕಟ್ಟಿ, ಆ ತಂಡಕ್ಕೆ ಇರಬಹುದಾದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯ ಮತ್ತು ಬೆಂಬಲ ಇದೆ ಎನ್ನುವಂತೆ ಬಿಂಬಿಸಿ, ಚುನಾವಣಾ ಅಕ್ರಮ ಎಸಗುವವರಿಗೆ ಒಂದು ಸಣ್ಣ ಆತಂಕವನ್ನು ಸೃಷ್ಟಿಸುವ ಕೆಲಸವನ್ನಾದರೂ ತುರ್ತಾಗಿ ಮಾಡಬೇಕಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ, ಇವತ್ತು ಯಾರು ಬೇಕಾದರೂ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಬಹುದು. ಅದನ್ನು ಪ್ರಾಕ್ಟಿಕಲ್ಲಾಗಿ ಬಳಸಿಕೊಳ್ಳಲು ಮುಂದಾಗಬೇಕಿದೆ.

ಹೌದು, ಈ ಯಾವ ಕೆಲಸಗಳೂ ಹೇಳಿದಷ್ಟು ಸುಲಭವಲ್ಲ; ವಿಪರೀತ ಅಪಾಯದ ಸಾಧ್ಯಂತದವು. ಆದರೆ, ‘ಪ್ರಜಾಪ್ರಭುತ್ವದ ರಕ್ಷಣೆ’ ಎಂಬ ನಮ್ಮ ಗಂಟಲಿನ ಕೂಗಿನಲ್ಲಿ ಪ್ರಾಮಾಣಿಕತೆ ಇರುವುದೇ ಆದಲ್ಲಿ, ಇಷ್ಟು ಮಾತ್ರ ಸಾಹಸಕ್ಕೆ ನಾವು ಕೈ ಹಾಕಲೇಬೇಕಿದೆ. ಯಾಕೆಂದರೆ, ಇದು ಎಂದಿನಂತೆ ಮತ್ತೊಂದು ಚುನಾವಣೆಯಲ್ಲ!

ಒಟ್ಟಾರೆಯಾಗಿ, ಕರ್ನಾಟಕ ಎದ್ದೇಳಬೇಕು; ಆ ಮೂಲಕ ಭಾರತ ಮತ್ತೆ ಎದ್ದೇಳಲು ಮುನ್ನುಡಿಯಾಗಬೇಕು ಎನ್ನುವುದಷ್ಟೇ ನನ್ನ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!