Thursday, September 19, 2024

ಪ್ರಾಯೋಗಿಕ ಆವೃತ್ತಿ

ರಸ್ತೆ ಗುಂಡಿಗೆ ಇನ್ನೆಷ್ಟು ಮುಗ್ಧ ಜನರು ಬಲಿಯಾಗಬೇಕು?

ಮಂಡ್ಯ ನಗರವನ್ನು ಒಂದು ಬಾರಿ ಪ್ರದಕ್ಷಿಣೆ ಹಾಕಿದರೆ ಸಾಕು, ಪ್ರತಿಯೊಂದು ರಸ್ತೆಯೂ ಗುಂಡಿಮಯವಾಗಿದೆ ಎಂಬುದು ಗೊತ್ತಾಗುತ್ತದೆ. ವರ್ಷಗಳಿಂದ ಹೀಗೆ ಗುಂಡಿ ಬಿದ್ದಿದ್ದರೂ ಸರಿಪಡಿಸಿಲ್ಲ. ಈ ಗುಂಡಿಗಳಿಗೆ ಬಿದ್ದು ಇನ್ನೆಷ್ಟು ಮುಗ್ಧ ಜನರು ಬಲಿಯಾಗಬೇಕೋ ಎನ್ನುವ ಪ್ರಶ್ನೆ ಮಂಡ್ಯದ ಜನರನ್ನು ಕಾಡುತ್ತಿದೆ.

ಮಂಡ್ಯ ನಗರದ ಪ್ರತಿಯೊಂದು ರಸ್ತೆಯಲ್ಲೂ ಗುಂಡಿಗಳಿವೆ. ಅದರಲ್ಲೂ ಕೆಲವೊಂದು ಬಡಾವಣೆಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲದಂತಹ ಗುಂಡಿಗಳಿವೆ. ಇಂತಹ ಕೆಟ್ಟ ರಸ್ತೆಗಳಲ್ಲಿಯೇ ಪ್ರತಿದಿನ ಶಾಸಕರು,
ನಗರಸಭೆ ಸದಸ್ಯರು, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಓಡಾಡಿದರೂ, ಕಂಡು ಕಾಣದಂತೆ ಅದೇ ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚರಿಸುತ್ತಿರುವುದು ನಾಚಿಕೆಗೇಡಿನ ವಿಷಯ.

ನಿವೃತ್ತ ಯೋಧನ ಬಲಿಗೆ ಸರ್ಕಾರ ಕಾರಣ

ನಿವೃತ್ತ ಯೋಧನ ಬಲಿ ಪಡೆದ ಗುಂಡಿಯನ್ನು ಇನ್ನೂ ಮುಚ್ಚದಿರುವುದು

ಮಂಡ್ಯ ನಗರದ ಆನೆಕೆರೆ ಬೀದಿಯ ಕಾರಿಮನೆ ಗೇಟ್ ಬಳಿ ಕಳೆದ ಭಾನುವಾರ ನಿವೃತ್ತ ಯೋಧ ಎಸ್.ಎನ್. ಕುಮಾರ್ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯನ್ನು ತಪ್ಪಿಸಲು ಹೋಗಿ ಲಾರಿಯ ಚಕ್ರಗಳಿಗೆ ಸಿಲುಕಿ ಬಲಿಯಾದರು. ಇದಕ್ಕೆ ನಗರಸಭೆ, ಲೋಕೋಪಯೋಗಿ ಇಲಾಖೆಯ ನೇರ ಹೊಣೆ. ಅಂದರೆ ನಿವೃತ್ತ ಯೋಧನ ಬಲಿಗೆ ಸರ್ಕಾರವೇ ಕಾರಣ.

ರಸ್ತೆ ಗುಂಡಿಗೆ ನಿವೃತ್ತ ಯೋಧ ಕುಮಾರ್ ಅವರು ಬಲಿಯಾಗಿ ಮೂರು ದಿನಗಳಾದರೂ ಕೂಡ ಇಂದಿಗೂ ನಗರಸಭೆಯಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ, ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿಗಳನ್ನು ಮುಚ್ಚಿಸಿಲ್ಲ. ಇಂದು ಭಜರಂಗಸೇನೆ ಸಂಘಟನೆಯವರು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ನಿಷ್ಕ್ರಿಯವಾಗಿದೆ, ಸರ್ಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ತಾತ್ಕಾಲಿಕವಾಗಿ ಜಲ್ಲಿ ಮತ್ತು ಡಸ್ಟ್ ಹಾಕಿ ನಾಲ್ಕಾರು ಗುಂಡಿಗಳನ್ನು ಮುಚ್ಚಿಸಿದರು.

ಈ ಮೂಲಕ ಸರ್ಕಾರಕ್ಕೆ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವುದಕ್ಕೂ ಹಣವಿಲ್ಲದ ದೈನೇಸಿ ಸ್ಥಿತಿ ಉಂಟಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಿದರು. ಇದೆಲ್ಲ ಆದರೂ ಕೂಡ ಭಂಡ ಅಧಿಕಾರಿಗಳಿಗೆ ಬುದ್ಧಿ ಬಂದಿಲ್ಲ. ದಪ್ಪ ಚರ್ಮದ ಸರ್ಕಾರಿ ಅಧಿಕಾರಿಗಳು ಗುಂಡಿ ಮುಚ್ಚಿಸದೆ ಭಂಡಾಟವಾಡುತ್ತಿದ್ದಾರೆ.

ಶಾಲಾ ಮಕ್ಕಳ ಓಡಾಟ

ಮಂಡ್ಯದಿಂದ ನಾಗಮಂಗಲಕ್ಕೆ, ನಾಗಮಂಗಲದಿಂದ ಮಂಡ್ಯಕ್ಕೆ ಬರುವ ಪ್ರಮುಖ ಸಂಪರ್ಕ ರಸ್ತೆಯಾದ ಕಾರಿಮನೆ ಗೇಟ್ ಬಳಿ 50 ಮೀಟರ್ ದೂರದಲ್ಲಿ ನೂರಾರು ಗುಂಡಿಗಳಿವೆ. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಈ ಗುಂಡಿ ಬಿದ್ದ ರಸ್ತೆಯಲ್ಲಿಯೇ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.

ಕಾರಿಮನೆ ಗೇಟ್ ಬಳಿ ಬಾಯ್ತೆರೆದಿರುವ ಸಾಲು ಸಾಲು ಗುಂಡಿಗಳು

ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಬ್ಬಿನ ಲಾರಿ, ಕಾರುಗಳು, ಬೈಕ್ ಸವಾರರು ಚಲಿಸುತ್ತಾರೆ. ಅತ್ಯಂತ ಜನನಿಬಿಡ ಮಾರ್ಗವಾಗಿರುವ ಈ ರಸ್ತೆಯಲ್ಲಿ ಇರುವ ಗುಂಡಿಗಳನ್ನು ನೋಡಿಯೂ ಕೂಡ ಸುಮ್ಮನೆ ಇರುವ ಭಂಡ ಅಧಿಕಾರಿಗಳಿಗೆ ಸ್ವಲ್ಪವೂ ನಾಚಿಕೆ ಇಲ್ಲ. ಎಂದು ಆನೆಕೆರೆ ಬೀದಿಯ ಸಂತೋಷ್ ಆರೋಪಿಸಿದರು.

50 ಕೋಟಿ ಅನುದಾನ ತರದ ಶಾಸಕ

ಮಂಡ್ಯ ನಗರದ ಗುಂಡಿಬಿದ್ದ ರಸ್ತೆಯಲ್ಲಿಯೇ ದಿನನಿತ್ಯ ಶಾಸಕ ಎಂ.ಶ್ರೀನಿವಾಸ್ ಅವರು ಓಡಾಡುತ್ತಿದ್ದರೂ ಕಾಣದಂತೆ ಇರುವುದೇಕೆಂದು ಗೊತ್ತಾಗುತ್ತಿಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಿಡುಗಡೆ ಮಾಡಿದ್ದ 50 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ, ಇದನ್ನು ತರಲು ಶಾಸಕರಿಗೆ ಸಾಧ್ಯವಾಗಿಲ್ಲ ಎಂದರೆ ಇವರ ಕಾರ್ಯವೈಖರಿ ಹೇಗಿದೆ ಎಂಬುದು ಗೊತ್ತಾಗುತ್ತದೆ. ಒಂದು ಕ್ಷೇತ್ರದ ಜವಾಬ್ದಾರಿಯುತ ಶಾಸಕರಾಗಿ ಒಂದು ರಸ್ತೆಯನ್ನೂ ಸರಿ ಮಾಡಿಸಲಿಲ್ಲ ಎಂದರೆ ಹೇಗೆ ಎಂದು ಮಂಡ್ಯದ ಜನತೆ ಪ್ರಶ್ನಿಸುತ್ತಿದ್ದಾರೆ.

ತೆರಿಗೆ ಏಕೆ ಕೊಡಬೇಕು

ಜನರಿಂದ ಮನೆ ಕಂದಾಯ, ರಸ್ತೆ ತೆರಿಗೆ, ಆ ತೆರಿಗೆ ಈ ತೆರಿಗೆ ಎಂದೆಲ್ಲಾ ಸಂಗ್ರಹಿಸಿದ್ದರೂ ಈ ಸರ್ಕಾರಕ್ಕೆ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಕ್ಕೂ ಆಗದ ದಿವಾಳಿ ಸ್ಥಿತಿ ತಲುಪಿದೆಯೇ ಎಂದು ಜನರು ಕೇಳುತ್ತಿದ್ದಾರೆ.

ಹಲವಾರು ತೆರಿಗೆಗಳನ್ನು ಸಂಗ್ರಹಿಸುವ ನಗರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದಕ್ಕೆ ಮಂಡ್ಯ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳೇ ಸಾಕ್ಷಿಯಾಗಿವೆ. ಅಧ್ಯಕ್ಷರು, ನಗರಸಭೆಯ ಸದಸ್ಯರು ದಿನನಿತ್ಯ ಈ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದರೂ, ಅವರಿಗೆ ಈ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಆಲೋಚನೆ ಬರದಿರುವುದು ನಾಚಿಕೆಗೇಡಿನ ಸಂಗತಿ.

ಒಂದು ರಸ್ತೆ ಸರಿ ಮಾಡದ ನಗರಸಭೆಗೆ ಏಕೆ ಕಂದಾಯ ಕಟ್ಟಬೇಕು ಎಂದು ಅಶೋಕನಗರದ ನಿವಾಸಿ ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಮಂಡ್ಯ ನಗರದಲ್ಲಿ ರಸ್ತೆಗಳೇ ಇಲ್ಲ. ಇರೋದು ಬರೀ ಗುಂಡಿಗಳು, ಇವರ ಯೋಗ್ಯತೆಗೆ ಒಂದು ರಸ್ತೆ ಗುಂಡಿ ಮುಚ್ಚಿಸಲು ಆಗದವರು ಆಡಳಿತದಲ್ಲಿದ್ದಾರೆ‌. ಸರ್ಕಾರ ಕೂಡ ನಿಷ್ಕ್ರಿಯವಾಗಿದೆ. ಇಂತಹವರ ನಡುವೆ ಇರುವ ನಮ್ಮ ಗೋಳು ಕೇಳೋರೆ ಇಲ್ಲ ಎಂಬುದು ಕಲ್ಲಹಳ್ಳಿಯ ನಿವಾಸಿ ಮಹೇಶ್ ಅಳಲು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!