Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಟನ್ ಕಬ್ಬಿಗೆ 4500ರೂ.ನಿಗದಿ ಮಾಡದಿದ್ದರೆ ದಸರಾಗೆ ಅಡ್ಡಿ

15 ದಿನದೊಳಗೆ ಸರ್ಕಾರ ಪ್ರತಿ ಟನ್ ಕಬ್ಬಿಗೆ 4500 ರೂ. ದರ ನಿಗದಿ ಮಾಡದಿದ್ದರೆ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಡ್ಡಿಪಡಿಸಿ ದೆಹಲಿ ಮಾದರಿಯಲ್ಲಿ ಚಳವಳಿ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಎಚ್ಚರಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರೇಳು ವರ್ಷಗಳಿಂದ ಕಬ್ಬಿಗೆ ಎಸ್‌ಆರ್ ಪಿ ದರ ನಿಗದಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಬಿಲ್ ಬಾಕಿ ಇರುವ ಹಣವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನ್ಯಾಯಯುತ ಬೇಡಿಕೆಗಳನ್ನು ಕೇಳಲು ಹೋದರೆ ಹೋರಾಟಗಾರರಿಗೆ ಅಡ್ಡಿಪಡಿಸುತ್ತಾರೆ. ಇವರಿಗೆ ನಾಚಿಕೆ ಆಗಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಸಿಎಂ ಭೇಟಿಗೆ ಐದು ಮಂದಿ ಬಂದರೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಇದಕ್ಕೆ ಒಪ್ಪದೆ ಇದ್ದಾಗ 15 ಮಂದಿ ರೈತ ಮುಖಂಡರಿಗೆ ಅವಕಾಶ ಕೊಟ್ಟಿದ್ದರು. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದರು.

ಕೇವಲ ಭತ್ತ ಖರೀದಿ ಕೇಂದ್ರವಷ್ಟೆ ಅಲ್ಲದೇ ಎಲ್ಲಾ ಬೆಳೆಗಳಿಗೆ ನಿರಂತರ ಖರೀದಿ ಕೇಂದ್ರಗಳನ್ನು ಶಾಶ್ವತವಾಗಿ ತೆರೆಯಬೇಕು. ಶೀಘ್ರದಲ್ಲೇ ಭತ್ತ-ರಾಗಿ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.

ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.

ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಂಡರೂ ಸಹ ಮುಂದೆ ಹೋಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಸ್ಪರ್ಧೆ ಖಚಿತ: ದರ್ಶನ್ ಪುಟ್ಟಣ್ಣಯ್ಯ

ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರೈತ ಸಂಘದಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟಪಡಿಸಿದರು.

ಯಾವ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲ. ಯಾರ ಬೆಂಬಲವನ್ನು ಕೇಳುವುದಿಲ್ಲ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ ಎಂದು ತಿಳಿಸಿದರು.

ಕಬ್ಬಿಗೆ ಶೇ.12ರಷ್ಟು ಇಳುವರಿ ಬಂದರೂ, ರೈತರಿಗೆ ಶೇ.8 ರಷ್ಟು ಇಳುವರಿ ಬರುತ್ತಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ತಾಲ್ಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು, ಉಪಾಧ್ಯಕ್ಷ ಶಂಕರ್, ರೈತ ಮುಖಂಡರಾದ ಮಧುಚಂದನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!