Friday, September 20, 2024

ಪ್ರಾಯೋಗಿಕ ಆವೃತ್ತಿ

18 ತಿಂಗಳಿನಿಂದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಪಾವತಿಯಾಗಿಲ್ಲ: ಅಖಿಲೇಶ್ ಯಾದವ್

ಕೇಂದ್ರ ಸರ್ಕಾರಿ ನೌಕರರಿಗೆ 18 ತಿಂಗಳಿಂದ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿಸಲಾಗಿಲ್ಲ. ಕೇಂದ್ರವು ನೌಕರರ ಡಿಎಯನ್ನು ಬಾಕಿ ಉಳಿಸಿಕೊಂಡಿದೆ. ಜಾಗತಿಕವಾಗಿ ಆರ್ಥಿಕತೆಯಲ್ಲಿ ‘ಸೂಪರ್ ಪವರ್’ ಎಂದು ಹೇಳಿಕೊಳ್ಳುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ‘ಪವರ್’ ಎಲ್ಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅಖಿಲೇಶ್‌, “ನಿರಂತರವಾಗಿ ಹೆಚ್ಚುತ್ತಿರುವ ಜಿಎಸ್‌ಟಿ ಸಂಗ್ರಹದ ಹಣ ಎಲ್ಲಿಗೆ ಹೋಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.

‘ಜಾಗತಿಕವಾಗಿ ಆರ್ಥಿಕತೆಯಲ್ಲಿ ಭಾರತವು ಸೂಪರ್ ಪವರ್ ಆಗುತ್ತಿದೆ’ ಎಂದು ಹೇಳಿಕೊಂಡಿರುವ ಕೇಂದ್ರ ಸರ್ಕಾರದ ಹೇಳಿಕೆಯನ್ನು ಲೇವಡಿ ಮಾಡಿರುವ ಅವರು, “ಆರ್ಥಿಕತೆಯಲ್ಲಿ ‘ಸೂಪರ್ ಪವರ್’ ಆಗುತ್ತಿದೆ ಎಂದರೆ, ನೌಕರರು ತಮ್ಮ ಬಾಕಿಯನ್ನು ಪಡೆಯಲಾಗುವುದಿಲ್ಲ ಎಂದರ್ಥವೇ? ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ 18 ತಿಂಗಳ ತುಟ್ಟಿಭತ್ಯೆಯನ್ನು ಬಾಕಿ ಉಳಿಸಿಕೊಂಡಿದ್ದು, ಅದನ್ನು ಪಾವತಿಸಲು ನಿರಾಕರಿಸಿರುವುದು ಒಂದು ರೀತಿಯಲ್ಲಿ ‘ಸರ್ಕಾರಿ ಗ್ಯಾರಂಟಿ’ಯ ನಿರಾಕರಣೆಯಾಗಿದೆ,” ಕಿಡಿಕಾರಿದ್ದಾರೆ.

“ನಿರಂತರವಾಗಿ ಹೆಚ್ಚುತ್ತಿರುವ ಜಿಎಸ್‌ಟಿ ಸಂಗ್ರಹ, ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಸರ್ಕಾರ ವಿವರಿಸಬೇಕು. ಸೋರಿಕೆಯಾಗುವ ಶತಕೋಟಿ ಮೌಲ್ಯದ ಹಡಗುಗಳು ಮತ್ತು ಕಟ್ಟಡಗಳಿಗೆ ಹಣವಿದೆ. ಆದರೆ, ಸರ್ಕಾರವನ್ನು ನಡೆಸುವ ಉದ್ಯೋಗಿಗಳಿಗೆ ಪಾವತಿಸಲು ಹಣವಿಲ್ಲ. ಒಂದೆಡೆ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇನ್ನೊಂದೆಡೆ, ತುಟ್ಟಿಭತ್ಯೆ ಸಿಗದಿರುವುದು ಸೀಮಿತ ಆದಾಯ ಹೊಂದಿರುವ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡುತ್ತಿದೆ,” ಎಂದು ಅವರು ಹೇಳಿದ್ದಾರೆ.

“ಬಾಕಿ ಪಾವತಿ ಮಾಡದಿರುವುದು ಉದ್ಯೋಗಿಗಳ ದಕ್ಷತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವವರಿಗೆ ಬಿಜೆಪಿಯವರು ಸರಿಯಾದ ಸಂಬಳ ನೀಡುವುದಿಲ್ಲ. ಸರ್ಕಾರವು ವೃದ್ಧರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅವರ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿವೆ. ಆದರೆ, ಅವರ ಪಿಂಚಣಿ ಹೆಚ್ಚುತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈಗ ಹಿರಿಯ ನಾಗರಿಕರು ಪಿಂಚಣಿಗಾಗಿ ಉಪವಾಸ ಸತ್ಯಾಗ್ರಹ ನಡೆಸುವುದನ್ನು ಸರ್ಕಾರವು ಬಯಸುತ್ತದೆಯೇ? ರೈಲ್ವೇ ಪ್ರಯಾಣದಲ್ಲಿ ರಿಯಾಯಿತಿಗಳನ್ನು ನಿಲ್ಲಿಸುವ ಮೂಲಕ ಹಿರಿಯ ನಾಗರಿಕರನ್ನು ಬಿಜೆಪಿ ಅವಮಾನಿಸಿದೆ,” ಎಂದು ಅವರು ಆರೋಪಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!