Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ 87ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; ಕೇಂದ್ರ ಕಸಾಪಕ್ಕೆ ಭೇಟಿ ನೀಡಿ ಚರ್ಚಿಸಿದ ಸಚಿವ ಎನ್.ಚಲುವರಾಯಸ್ವಾಮಿ

87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಅಯೋಜಿತವಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಮತ್ತು ಮಂಡ್ಯ ಉಸ್ತುವಾರಿಯನ್ನೂ ಹೊಂದಿರುವ ಎನ್.ಚಲುವರಾಯ ಸ್ವಾಮಿಯವರು ಶನಿವಾರ ಬೆಂಗಳೂರಿನ ಚಾಮರಾಜಪೇಟೆಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ ಸಮ್ಮೇಳನದ ಸ್ವರೂಪದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ ಜೋಶಿಯವರೊಂದಿಗೆ ಚರ್ಚೆ ನಡೆಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾಮಹೇಶ ಜೋಶಿಯವರು ಸಚಿವರಿಗೆ ಪರಿಷತ್ತಿನ ಸಂಕ್ಷಿಪ್ತ ಇತಿಹಾಸ, ತಾವು ಅಧ್ಯಕ್ಷತೆಯನ್ನು ವಹಿಸಿ ಕೊಂಡ ನಂತರ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಮತ್ತು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಡೆದ ಯಶಸ್ಸು ಇದೆಲ್ಲವನ್ನೂ ಕಿರುಚಿತ್ರದ ಮೂಲಕ ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿಸಿ ‘ಸಾಮರಸ್ಯದ ನಾಡಾದ ಹಾವೇರಿಯಿಂದ ಸಕ್ಕರೆ ನಾಡಾದ ಮಂಡ್ಯದ ಕಡೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಯಣ ಬೆಳೆಸಿದೆ. ಇದು ಯಶಸ್ಸನ್ನು ಪಡೆಯಲು ಸರ್ಕಾರದ ಸಹಕಾರ, ಸಹಯೋಗ ಬೇಕೆಂದು ಕೋರಿದರು.

ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಸಚಿವರು ‘ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತ ಪೂರ್ವ ಯಶಸ್ಸನ್ನು ಪಡೆಯಲು ಎಲ್ಲಾ ರೀತಿಯಲ್ಲಿಯೂ ಸರ್ಕಾರದಿಂದ ಸಹಕಾರ ನೀಡುವುದಾಗಿ’ ಆಶ್ವಾಸನೆ ನೀಡಿದರು. ಮುಂದಿನ ಹಂತಗಳಲ್ಲಿ ಮಂಡ್ಯದಲ್ಲಿ ಎಲ್ಲಾ ಶಾಸಕರೂ ಮತ್ತು ಅಧಿಕಾರಿಗಳ ಸಭೆಯನ್ನು ನಡೆಸುವುದು ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಆಯ-ವ್ಯಯದಲ್ಲಿಯೇ ಅನುದಾನವಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಾವೇರಿ ಸಮ್ಮೇಳನದಿಂದ ಸಂಭವಿಸಿದ ಕೆಲವು ಸಣ್ಣ ಪುಟ್ಟ ಲೋಪದೋಶಗಳನ್ನು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಂಭವಿಸಿದಂತೆ ಎಚ್ಚರಿಕೆ ವಹಿಸಿ ಇನ್ನಷ್ಟು ಪರಿಪೂರ್ಣಗೊಳಿಸಲಾಗುವುದು ಎಂದು ನಾಡೋಜ.ಡಾ.ಮಹೇಶ ಹೇಳಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಮಾರ್ಗವನ್ನು ಸೀಮಿತಗೊಳಿಸುವುದು, ಮೊಬೈಲ್ ಸಂಪರ್ಕ ಜಾಲ ತೊಂದರೆಗೆ ಸಿಲುಕುದಂತೆ, ಅನ್ ಲೈನ್ ವಹಿವಾಟಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು, ಗೋಷ್ಟಿಗಳನ್ನು ಇನ್ನಷ್ಟು ವೈವಿಧ್ಯಮಯವಾಗಿಸುವುದು ಇಂತಹ ಅನೇಕ ಅಂಶಗಳನ್ನು ಅವರು ಪ್ರಸ್ತಾಪಿಸಿದರು. ಅಧ್ಯಕ್ಷರ ಸಲಹೆಗಳಿಗೆ ಸಂಪೂರ್ಣ ಸಮ್ಮತಿಯನ್ನು ಸೂಚಿಸಿದ ಸಚಿವರು ಸಹಕಾರದ ಭರವಸೆಯನ್ನು ನೀಡಿದರು.

ಸಚಿವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಪರಿಚಯ ಮಾಡಿ ಕೊಟ್ಟ ಅಧ್ಯಕ್ಷ ಡಾ.ನಾಡೋಜ ಮಹೇಶ ಜೋಶಿಯವರು ಆವರಣದಲ್ಲಿ ಆಗಿರುವ ಪ್ರಗತಿಯನ್ನೂ ಕೂಡ ವಿವರಿಸಿದರು. ಸಚಿವ ಚಲುವರಾಯ ಸ್ವಾಮಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಗೆ ನಮಸ್ಕರಿಸಿ ಪರಿಷತ್ತನ ಕಟ್ಟಡಕ್ಕೆ ಪ್ರವೇಶ ಮಾಡಿದರು. ಸಚಿವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯ ಬಗ್ಗೆ ಅಪಾರ ಸಂತೋಷವನ್ನು ವ್ಯಕ್ತಪಡಿಸಿದರು. ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಯಿತು.

ಸಚಿವರ ಭೇಟಿಯ ಸಂದರ್ಭದಲ್ಲಿ ಮಂಡ್ಯ ಶಾಸಕ ಗಾಣಿ ರವಿಕುಮಾರ, ವಿ. ಹರ್ಷ ಪಣ್ಣಿದೊಡ್ಡಿ, ಡಾ. ಕೃಷ್ಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜ್, ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷ ಪಟೇಲ ಪಾಂಡು, ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ, ಮಾಧ್ಯಮ ಸಲಹೆಗಾರ ಶ್ರೀನಾಥ್ ಜೋಶಿ, ವಿಶೇಷಾಧಿಕಾರಿಗಳಾದ ವಿ.ಚಿಕ್ಕತಿಮ್ಮಯ್ಯ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತಿತರ ಪದಾಧಿಕಾರಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!