✍🏿 ಡಾ : ಉಮಾಶಂಕರ್ ಹೆಚ್.ಡಿ. ಉಪನ್ಯಾಸಕರು.
ಗೆಳತಿ
ನಿನಗೆ ಗೊತ್ತೆ
ನನ್ನ ಕೇರಿಯ ಮೇಲೆ ನಿತ್ಯ
ರಣಹದ್ದುಗಳು ಓಡಾಡುತ್ತವೆ
ಒಂದು ಕೇರಿಯಲ್ಲಿ ಸದ್ದಡಗುವ ಮೊದಲೇ
ಮತ್ತೊಂದು ಕೇರಿಯಲ್ಲಿ ಸದ್ದು
ನರಳು, ಆಕ್ರಂದನ, ಚೀರಾಟ
ಎಲ್ಲಾ ಇಲ್ಲಿ ನಿತ್ಯ ನಿರಂತರ
ನೀನು
ಪ್ರೀತಿಗಾಗಿ ಹಂಬಲಿಸಿದಾಗಲೆಲ್ಲ
ಸಾವಿನ ಹಕ್ಕಿಯೊಂದು ದಿಗ್ಗನೆ
ರೆಕ್ಕೆ ಬಡಿದು ಹಾರಿದಂತಾಗುತ್ತದೆ
ಊರು ಊರುಗಳ ಯಾವ ಮೂಲೆಗಳಿಂದಲೋ
ಬೆಂಕಿ ಬಿರುಗಾಳಿಗಳು ನೆಗೆದು ನುಗ್ಗುತ್ತವೆನಿಸುತ್ತದೆ
ಕೇರಿ ಮೋರಿಗಳ ಗಟಾರದುದ್ದಕ್ಕೂ
ನನ್ನ ರಕ್ತದ ವಾಸನೆಯೇ ಮೂಗಿಗಡರುತ್ತದೆ
ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಂತೆ
ರಾತ್ರಿಯುದ್ದಕ್ಕೂ ಕನಸು ಮೂಡುತ್ತವೆ
ಕೇರಿದೂರದ ಗದ್ದೆ ಬದಿಗಳಲ್ಲಿ
ಹೊಂಚು ನರಿಗಳ ಹೂಳು ಕೇಳಿಸುತ್ತದೆ
ನಿನ್ನದೇ ಬೀದಿಯ ನಡುವಿನಿಂದ
ಎದ್ದು ಬರಬಹುದಾದ ಚಾಕು ಚೂರಿಗಳ
ಹರಿತಗಳು ನಡುಕ ಹುಟ್ಟಿಸುತ್ತವೆ
ಇದರ ನಡುವೆಯೂ…
ನಿನ್ನಂತೆಯೇ ನಾನು
ಹುಡುಕುತ್ತಿದ್ದೇನೆ
ಪ್ರೀತಿಯ ಒರತೆಗಳ
ಪದರುಗಳನ್ನು
ಅಡ್ಡುದ್ದದ ನಾಮ ವಿಭೂತಿಗಳಲ್ಲಿ
ಉದ್ದುದ್ದಾದ ಪೈಜಾಮು, ನಿಲುವಂಗಿಗಳಲ್ಲಿ
ಕೆಂಪುಕೋಟೆಯ ಭಾಷಣಗಳಲ್ಲಿ
ಮೇಜು ಕುಟ್ಟುವ ಸದನದ ಸರದಾರರಲ್ಲಿ
ಮೈಕು ಹಿಡಿದ ಭಾಷಣಗಳ ಶೂರರಲ್ಲಿ
ದ್ವೇಷದ ನಂಜೇರಿರುವ ತಲೆಗಳ ಮೆದುಳಿನಲ್ಲಿ
ಆದರೂ…
ನಿನ್ನ ಒಲುಮೆಯ ಹಂದರದಲ್ಲಿ
ನೆರಳಾಗ ಬಯಸುತ್ತೇನೆ
ತಂಪು ನೀಡುತ್ತಾ,
ರಕ್ತ ತಂಪಾಗಿಸುವವರ ಎದೆಗಳಲ್ಲಿ
ಪ್ರೀತಿಯ ಬೀಜ ಬಿತ್ತಿ
ಹೆಮ್ಮರವಾಗಿಸಬಹುದೆಂಬ ನಂಬುಗೆಯಿಂದ.