Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರದ್ಧಾಭಕ್ತಿಯಿಂದ ಭೂವರಾಹನಾಥ ಸ್ವಾಮಿಗೆ ವಿಶೇಷ ಪೂಜೆ

ವರದಿ : ಕೆ.ಆರ್. ನೀಲಕಂಠ

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಹನಾಥ ಕಲ್ಲಹಳ್ಳಿಯಲ್ಲಿ ರೇವತಿ ನಕ್ಷತ್ರದ ಅಂಗವಾಗಿ ಲಕ್ಷ್ಮೀಸಮೇತನಾದ ಭೂವರಹನಾಥ ಶಿಲಾಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುನಸ್ಕಾರಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಮೈಸೂರಿನ ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀ ಲಕ್ಷ್ಮೀ ಹಯಗ್ರೀವ ಪರಕಾಲ ಸ್ವಾಮೀಜಿಗಳು ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭೂವರಹನಾಥಸ್ವಾಮಿಯು ಲೋಕಕಂಟಕ ದುಷ್ಠನಾದ ಅಸುರ ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ಸಂರಕ್ಷಣೆ ಮಾಡಿದ್ದು ರೇವತಿ ನಕ್ಷತ್ರದ ಶುಭ ದಿನದಂದಾಗಿರುವುದರಿಂದ ಸ್ವಾಮಿಗೆ ಪಟ್ಟಾಭಿಷೇಕ ಮಾಡಿ ಅಡ್ಡಪಲ್ಲಕಿ ಉತ್ಸವ ಮಾಡಿ ಸಂಭ್ರಮಾಚರಣೆ ನಡೆಸಲಾಯಿತು.

ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಜೇನುತುಪ್ಪ, ಹಸುವಿನ ತುಪ್ಪ, ಮೊಸರು, ಪವಿತ್ರ ಗಂಗಾಜಲ ಹಾಗೂ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸೇವಂತಿಗೆ, ಕನಕಾಂಬರ, ಮಲ್ಲೆ, ಸಂಪಿಗೆ, ಜವನ, ತುಳಸಿ, ಪವಿತ್ರ ಪತ್ರೆಗಳು, ಸುಗಂಧರಾಜ, ಸ್ಪಟಿಕ, ಪಾರಿಜಾತ, ಕಮಲ ಸೇರಿದಂತೆ 58 ವಿವಿಧ ಬಗೆಯ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು.

ದೇಶದಲ್ಲಿಯೇ ಅಪರೂಪದ್ದಾಗಿದ್ದು ಸುಮಾರು ಮೂರು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನವಾದ ಅಪರೂಪದ ಸಾಲಿಗ್ರಾಮ ಶ್ರೀಕೃಷ್ಣಶಿಲೆಯಿಂದ ನಿರ್ಮಿಸಿರುವ ಭೂವರಹನಾಥ ಮೂರ್ತಿಗೆ ಭಾರೀ ಗಾತ್ರದ ಹೂಮಾಲೆಗಳಿಂದ ಅಲಂಕಾರ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ರಾಜ್ಯದ ನಾನಾ ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ರೇವತಿ ನಕ್ಷತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಅಭಿಷೇಕ ಹಾಗೂ ಪೂಜಾ ಕಾರ್ಯಕರ್ತರ ಮಧ್ಯಾಹ್ನ ಒಂದೂವರೆ ಗಂಟೆಯ ವೇಳೆಗೆ ಸಂಪನ್ನಗೊಂಡಿತು.

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್, ಆಯೋಗದ ಸದಸ್ಯೆ ಬಿ.ವಿ.ಗೀತಾ, ಸಚಿವರಾದ ಡಾ.ನಾರಾಯಣಗೌಡರ ಧರ್ಮಪತ್ನಿ ದೇವಕಿ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ದಾನಿಗಳಾದ ದುಬೈ ಚಂದ್ರಶೇಖರ್, ಶ್ರೀಮತಿ ರಾಧಾರಾಘವನ್, ಡಾ.ಅಧಿತಿರಾಘವನ್, ಮಲ್ಲೇಶ್ವರಂ ಮಧು, ಬೆಂಗಳೂರು ದರ್ಶನ್, ಕೆಎಂಎಫ್ ನಿರ್ದೇಶಕ ಅಶೋಕ್, ಚಲನಚಿತ್ರ ನಿರ್ಮಾಪಕ ರಾಕಲೈನ್ ವೆಂಕಟೇಶ್ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!