Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೀತಾಮಾಯಿಯ ಸಂಕಟ…

ಗಿರೀಶ್ ತಾಳಿಕಟ್ಟೆ

ರಾಮಾಯಣ ಯಾರಿಗೆ ತಾನೇ ಗೊತ್ತಿಲ್ಲ. ವಾಲ್ಮೀಕಿ ಬರೆದ ರಾಮಾಯಣವೂ ಗೊತ್ತು. ಮುನ್ನೂರು ಕವಲುಗಳು ರಾಮಾಯಣವೂ ಗೊತ್ತು. ಮಹಾಕವಿ ಕುವೆಂಪು ತೆರೆದಿಟ್ಟ ದರ್ಶನವೂ ಗೊತ್ತು. ನೋಟ ಮತ್ತು ಆಯಾಮಗಳು ಬೇರೆಬೇರೆಯಾದರೂ ಕಥನ ಸ್ವರೂಪ ಮಾತ್ರ ಏಕಮಾತ್ರದ್ದು. ರಾಮ ಎಂಬ ಪುರುಷ. ಸೀತೆ ಎಂಬ ಪುರುಷಿ. ರಾವಣ ಎಂಬ ಪ್ರತಿನಾಯಕ. ಈ ಪಾತ್ರಗಳನ್ನು ಆವರಿಸಿಕೊಂಡಂತೆ ರಾಮಾಯಣ ಬೇರೆಬೇರೆ ದಿಕ್ಕಿನತ್ತ ಹಿಗ್ಗುತ್ತಾ ಸಾಗುತ್ತದೆ. ಪಾತ್ರಗಳು ದೈವಗಳ ರೂಪವನ್ನೂ ಪಡೆದಾಗಿದೆ. ರಾಮನನ್ನು ಆದರ್ಶಪುರುಷ ಶ್ರೀರಾಮಚಂದ್ರ ಪ್ರಭು ಎಂದು ಸ್ವೀಕರಿಸಿದ ಈ ನೆಲವೇ ಸೀತೆಯನ್ನು ಕರುಳಬಳ್ಳಿಯ ಕರೆಯ ಮೂಲಕ ‘ತಾಯಿ’, ‘ಮಾಯಿ’ ಎಂದು ಕರೆದುಕೊಂಡಿದೆ. ಪ್ರತಿನಾಯಕ ರಾವಣನೂ ಶಿವಭಕ್ತನಾಗಿ ಸನಿಹವಾಗಿದ್ದಾನೆ.

ಇಡೀ ಕಥನದಲ್ಲಿ ದುರಂತವೆಂಬುದು ಬಿಟ್ಟೂಬಿಡದಂತೆ ಆವರಿಸಿದ ಪಾತ್ರವೇನಾದರೂ ಇದ್ದರೆ ಅದು ಸೀತಾಮಾಯಿಯದು. ಹುಟ್ಟಿನಿಂದಲೇ ಶುರುವಾಗುವ ಆಕೆಯ ಅನಾಥಪ್ರಜ್ಞೆಯು ಬಾಯ್ದೆರೆದ ಭೂತಾಯಿಯ ಒಡಲು ಸೇರುವವರೆಗೆ ಮಾಯಿಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಎಲ್ಲರೂ ಇದ್ದು, ಯಾರೂ ಇಲ್ಲದವಳಂತೆ ಎಲ್ಲರಿಗಾಗಿ ಬದುಕುವ ಸೀತಾಮಾಯಿಯ ಬದುಕು ಕೇವಲ ಆಕೆಯ ಬದುಕಷ್ಟೇ ಇಲ್ಲ, ಇಡೀ ಸ್ತ್ರೀಕುಲದ ದ್ಯೋತಕವಾಗಿ ನಮ್ಮನ್ನು ಕಾಡುತ್ತದೆ. ‘ಯತ್ರ ನಾರ್ಯಸ್ತು ಪೂಜ್ಯಂತೆ…’ ಎನ್ನುವ ಈ ನಮ್ಮ ನೆಲದಲ್ಲೆ ‘ಹೆಣ್ಣು ಯಾವುದಕ್ಕೂ ಸ್ವತಂತ್ರಳಲ್ಲ ಎಂಬ ವೈರುಧ್ಯವೂ ಅಡಗಿ ಕೂತಿದೆ. ಅದನ್ನು ಸೀತಾಮಾಯಿಯ ಬದುಕಲ್ಲಿ ಹೆಜ್ಜೆಹೆಜ್ಜೆಗೂ ಕಾಣಬಹುದು.

ಒಬ್ಬ ರಾಮ, ಶ್ರೀರಾಮಚಂದ್ರ ಪ್ರಭುವಾಗಿ ರೂಪಾಂತರವಾಗಬೇಕಿದ್ದರೆ ಸೀತಾಮಾತೆಯ ಜೀವನವನ್ನು ತೇಯಲೇಬೇಕಾದ ಅನಿವಾರ್ಯತೆ ಮಹರ್ಷಿ ವಾಲ್ಮೀಕಿ ಎದುರಿಗಿತ್ತು. ತ್ಯಾಗ, ಸಹನೆ, ಪಾತಿವ್ರತ್ಯ, ಪ್ರೀತಿ, ಮಮತೆ ಎಂಬ ರೂಪಕಗಳನ್ನು ಬಳಸಿಕೊಂಡು ವಾಲ್ಮೀಕಿ ಮಹರ್ಷಿ ಆ ಕುಸುರಿ ಕೆಲಸವನ್ನು ಬಲು ಕಾವ್ಯಾತ್ಮಕವಾಗಿ ಸಾಧಿಸಿದ್ದಾರೆ.

ಸೀತೆಯ ಆಯಾಮದಿಂದ ರಾಮಾಯಣದಲ್ಲಿ ಹೆಣ್ಣಿಗಾದ ವಂಚನೆಯನ್ನು ಹಲವರು ಈಗಾಗಲೇ ಚರ್ಚಿಸಿದ್ದಾರೆ. ಅದನ್ನು ಹೊಸದಾಗಿ ಒಡೆದು ನೋಡುವ ಇರಾದೆ ನನಗಿಲ್ಲ. ಆದರೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ರಾಮಾಯಣದ ದುರಂತ ನಾಯಕಿಯಾದ ತಾಯಿಸೀತೆ ಮತ್ತೆ ಕಾಡುತ್ತಿದ್ದಾಳೆ. ಕಟ್ಟಕಡೆಗೆ ಭೂತಾಯಿ ತನ್ನ ಒಡಲೊಳಗೆ ಬರಸೆಳೆದುಕೊಳ್ಳುವ ಮೂಲಕ ಸೀತೆ, ರಾಮನಿಂದ ಶಾಶ್ವತವಾಗಿ ದೂರಾಗುತ್ತಾಳೆ. ಅಂದರೆ ರಾಮನನ್ನು ನಾವು ಏಕಾಂಗಿಯಾಗಿಯೇ ರೂಪಿಸಿಕೊಳ್ಳಬೇಕಿತ್ತು. ಆದರೆ ನಾವು ಇವತ್ತಿಗೂ ಸೀತೆಯಿಲ್ಲದ ಏಕಾಂಗಿ ರಾಮನನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ತಲೆಯೆತ್ತಿದ ಆ ಮಂದಿರದಲ್ಲೂ ಶ್ರೀರಾಮನ ಪಕ್ಕದಲ್ಲಿ ಸೀತಾಮಾಯಿ ಖಂಡಿತ ನಿಂತಿರಲೇಬೇಕು. ಇಲ್ಲವಾದರೆ ಆ ರಾಮ ಅಪೂರ್ಣ!

ಸೀತೆ, ರಾಮನೊಟ್ಟಿಗೆ ನೆಮ್ಮದಿಯ ಕ್ಷಣಗಳನ್ನು ಕಳೆದಿದ್ದೇ ವಿರಳ. ವನವಾಸದಲ್ಲೂ ಆಕೆಗೆ ಗಂಡನಿಂದ ವಿರಹ. ವಾಪಾಸು ಅಯೋಧ್ಯೆಗೆ ಮರಳಿದ ಮೇಲಾದರೂ ಅವಳ ಪಾಲಿಗೆ ಖುಷಿಯ ಕ್ಷಣಗಳು ಒಲಿದವೇ? ಅದೂ ಇಲ್ಲ. ಲೋಕನಿಂದನೆಯ ನೆಪದಲ್ಲಿ ಗಂಡನಿಂದ ದೂರಾಗಿ ಮತ್ತೆ ಕಾಡು ಪಾಲಾದಳು. ಶ್ರೀರಾಮಚಂದ್ರನನ್ನು ಆದರ್ಶಪುರುಷನನ್ನಾಗಿಸುವ ಸಲುವಾಗಿ ಸೀತೆಯನ್ನು ನಿರಂತರ ಪರೀಕ್ಷೆಗಳಿಗೆ ಒಡ್ಡಲಾಯಿತು. ರಾಮಾಯಣ ಕಥನದ ಪಾತ್ರಗಳಲ್ಲಿ ಯಾರನ್ನಾದರೂ ನಾವು ನಿಜಕ್ಕೂ ದೈವದ ಎತ್ತರಕ್ಕೆ ಏರಿಸಬಹುದಾದರೆ ಅದು ಸೀತಾಮಾತೆ ಮಾತ್ರ. ನಿಜ ಹೇಳಬೇಕೆಂದರೆ, ಆಕೆ ಅನುಭವಿಸಿದ ಯಾತನೆಯ ಮುಂದೆ ಆ ಎತ್ತರವೂ ಕಿರಿದು!

ಹೀಗೆ ನಿರಂತರ ಶೋಷಣೆಗೆ ತುತ್ತಾದ ಹೆಣ್ಣಾಗಿ ಸೀತಾಮಾಯಿಯ ಮನಸಲ್ಲಿ ಅದೇನೆಲ್ಲ ಪ್ರಶ್ನೆಗಳು, ತರ್ಕಗಳು ಪುಟಿದೆದ್ದಿರಬೇಡ? ರಾಮನತ್ತ ಅದೆಷ್ಟು ಅನುಕಂಪದಿಂದ ಆಕೆ ನೋಡಿರಬೇಡ? ನೋಟದಲ್ಲೆ ಪ್ರಶ್ನೆಗಳನ್ನು ಸುರಿದಿರಬೇಡ? ರಾಮ ದೇವರಾದ. ಆ ಮೂಲಕ ನಮಗೆ ನಿಲುಕದಾದ. ಸೀತೆ ತಾಯಿಯಾದಳು. ಆ ಮೂಲಕ ನಮ್ಮ ಜೊತೆ ಸದಾ ಹೆಜ್ಜೆಹಾಕುವ ಜೀವವಾದಳು.

ಈಗ ನನ್ನನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಗೆ ಬರುತ್ತೇನೆ. ಹೆಣ್ಣೆಂಬ ಕಾರಣಕ್ಕೆ ಈಗಾಗಲೇ ಇಷ್ಟೆಲ್ಲ ನೋವು, ನಿರ್ಲಕ್ಷ್ಯ ಮತ್ತು ಪರಿತ್ಯಕ್ತತೆಗಳನ್ನು ಅನುಭವಿಸಿರುವ ಸೀತೆಯನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡ ಶ್ರೀರಾಮನ ಮೂರ್ತಿಗೆ ನಮ್ಮ ಪ್ರಧಾನಿಗಳಿಂದ ಮೊದಲ ಪೂಜೆಯಂತೆ! ಪ್ರಾಣ ಪ್ರತಿಷ್ಠಾಪನೆಯ ಆರತಿಯಂತೆ!

‘ಕ್ಷಮಿಸು ಸೀತೆ, ಮತ್ತೆಂದೂ ಈ ಇರಿತ ನೋಟಗಳಿಂದ ನನ್ನನ್ನು ನೋಡಬೇಡ’ ಎಂದು ಇಡೀ ರಾಮಾಯಣದಲ್ಲಿ ಯಾವತ್ತೂ ಪಶ್ಚಾತ್ತಾಪದ ನುಡಿಗಳನ್ನಾಡದ ರಾಮನಿಗೆ ನೆನಪಾಗದಿರಬಹುದು, ಆದರೆ ತನ್ನಂತೆಯೇ ನೋವು ಅನುಭವಿಸಿದ, ಕಟ್ಟಿಕೊಂಡ ಗಂಡನಿಂದ ಪರಿತ್ಯಕ್ತಳಾಗಿ ಸಂಕಟವುಂಡ ಜಶೋದಾ ಬೆನ್ ಎಂಬ ಹೆಣ್ಣುಮಗಳು ಸೀತಾಮಾಯಿಗೆ ನೆನಪಾಗದಿರುವಳೇ? ಸಹಸ್ರಾರು ವರ್ಷಗಳ ನಂತರವೂ ಹೆಣ್ಣಿನ ಬವಣೆ ಬದಲಾಗದಿರುವುದರ ಬಗ್ಗೆ; ಹೆಣ್ಣಿಗೆ ಗೌರವ ಕೊಡದವರೇ ಮತ್ತೆಮತ್ತೆ ಮೆರೆಯುತ್ತಿರುವ ಈ ನೆಲದ ಸ್ಥಾಪಕ ಗುಣದ ಬಗ್ಗೆ ಸೀತಾಮಾಯಿಗೆ ಜುಗುಪ್ಸೆ ಮೂಡದಿರುವುದೇ! ಅಂತಹ ಕೈಗಳಿಂದ ಆಕೆ ಆರತಿಯ ಒಪ್ಪುವಳೆ, ಆರಾಧನೆಯ ಸ್ವೀಕರಿಸುವಳೇ? ಈಗಾಗಲೇ ಸೀತೆಯ ಕಣ್ಣೋಟದ ಇರಿತಗಳಿಂದ ಕುಗ್ಗಿಹೋದ ಶ್ರೀರಾಮ, ಆಕೆಯ ಈ ಹೊಸ ಕಳವಳದಿಂದ ಕುಸಿದುಹೋಗದೆ ಇರುವನೆ?

ಸೀತಾಮಾಯಿಗೆ ಸಂಕಟವನ್ನಿಕ್ಕಿ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವ ನಿರ್ಮಿಸಿದರೇನು ಬಂತು? ಅಲಂಕಾರದ ಮೂರ್ತಿಗಳಿಗೆ ಆರತಿಯ ಬೆಳಗಿದರೆ ಸಿಕ್ಕಿತೇನು?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!