Sunday, May 19, 2024

ಪ್ರಾಯೋಗಿಕ ಆವೃತ್ತಿ

ರೈತರ ತಂಟೆಗೆ ಬಂದರೆ ಸುಮ್ಮನಿರಲ್ಲ: ಮುಖ್ಯಮಂತ್ರಿಗೆ ರೈತಸಂಘ ಸವಾಲು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ, ರೈತರ ಕೃಷಿ ಪಂಪ್ ಸೆಟ್ಟಿಗೆ ಮೀಟರ್ ಅಳವಡಿಸಲು ಬಂದರೆ ನಾವು ಸುಮ್ಮನಿರುವುದಿಲ್ಲ, ರೈತರೆಲ್ಲಾ ಒಗ್ಗೂಡಿ ಅಧಿಕಾರದಿಂದ ಸರ್ಕಾರವನ್ನು ಕೆಳಗಿಳಿಸುತ್ತೇವೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ಬೃಹತ್ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ 1982ರಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ ಗುಂಡೂರಾವ್ ಸರ್ಕಾರವನ್ನು ಇದೇ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸಮಾವೇಶದ ನಂತರ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರವನ್ನು ಬೀಳಿಸುವ ಶಕ್ತಿ ನಮ್ಮ ರೈತರಿಗೆ ಇದೆ. ಮಾತು ತಪ್ಪಿದ ಮುಖ್ಯಮಂತ್ರಿ ಅವರ ಕುರ್ಚಿ ಕಾಲನ್ನು ಮುರಿಯುತ್ತೇವೆ ಎಂದು ಈ ಸಮಾವೇಶದ ಮುಖಾಂತರ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದರು.

ರೈತರ ಸರ್ವನಾಶ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಅದಾನಿ ಮತ್ತು ಅಂಬಾನಿ ಅವರಿಗೆ ಈ ದೇಶವನ್ನು ವಹಿಸಲು ಹೊರಟಿದೆ. ಕೇಂದ್ರ ಸರ್ಕಾರದ ಯೋಜನೆಗಳು ರೈತರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿವೆ. ಮೂರು ಮಾರಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿತ್ತು. ನಮ್ಮ ರೈತರು ಉಗ್ರ ಹೋರಾಟ ನಡೆಸಿ 56 ಇಂಚಿನ ಎದೆಯ ಮೋದಿ ಮತ್ತು ಕೃಷಿ ಸಚಿವ ತೋಮರ್ ಗೆ ಪಾಠ ಕಲಿಸಿದ್ದಾರೆ ಎಂದರು.

ಖಾಸಗಿಯವರಿಗೆ ವಹಿಸಲು ಹುನ್ನಾರ

ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಯುತ್ತಿದೆ. ವಿದ್ಯುತ್ ಕ್ಷೇತ್ರ ಖಾಸಗಿಯವರ ಪಾಲಾದರೆ ಬಡವರು, ರೈತರು ವಿದ್ಯುಚ್ಛಕ್ತಿಯನ್ನು ಮರೆಯಬೇಕಾಗುತ್ತದೆ. ರಾಜ್ಯದಲ್ಲಿ 45 ಲಕ್ಷ ಪಂಪ್ ಸೆಟ್ ಗಳಿದ್ದು ಮಂಡ್ಯದಲ್ಲಿ ಒಂದು ಲಕ್ಷ ಪಂಪ್ ಸೆಟ್ ಇದೆ‌. ಸರ್ಕಾರ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯಿಂದ ಬಡವರ ಜಮೀನನ್ನು ಬಂಡವಾಳ ಶಾಹಿಗಳು ಕೊಳ್ಳುತ್ತಿದ್ದಾರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ 88 ಎಪಿಎಂಸಿಗಳು ಮುಚ್ಚಿ ಹೋಗಿದೆ. ಜಾನುವಾರು ಹತ್ಯೆ ಸಂರಕ್ಷಣಾ ಕಾಯ್ದೆಯಿಂದ ರೈತರು ಜಾನುವಾರು ಸಾಕಲು ಹಿಂಸೆ ಪಡುವಂತಾಗಿದೆ.

ಕೃಷಿ ಜಮೀನನ್ನು ಕೃಷಿಯೇತರ ಭೂಮಿ ಮಾಡಿಕೊಳ್ಳಲು ಆನ್ಲೈನ್ ಮೂಲಕ ಒಂದು ಗಂಟೆ ಅವಧಿ ಸಾಕಾಗಿದೆ,
ಈಗಾಗಲೇ ರೈತರ ಮಕ್ಕಳು, ಮಹಿಳೆಯರು ಬೆಂಗಳೂರಿಗೆ ಹೋಗಿ ಹೋಟೆಲ್ಗಳಲ್ಲಿ ಲೋಟ ತೊಳೆಯುವುದು, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಪಾತ್ರೆ ತೊಳೆದುಕೊಂಡು ಕೂಲಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕದಿದ್ದರೆ, ಇಡೀ ರೈತರ ಭೂಮಿಯು ಬಂಡವಾಳಶಾಹಿಗಳ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಂಬಾಡಿ ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ ಎಂದು ಹೇಳಿದ್ದರೂ ಜಿಲ್ಲಾಡಳಿತ ಗಣಿಗಾರಿಕೆ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಶಾಸಕ ಸಿ. ಎಸ್. ಪುಟ್ಟರಾಜು ಗೂಂಡಾಗಿರಿ ಮಾಡಿ ಅಕ್ರಮ ಕಲ್ಲು ಸಾಗಣೆ ಮಾಡುತ್ತಿದ್ದವರನ್ನು ಬಿಡಿಸಿ ಕಳಿಸಿದ್ದಾರೆ. ಇಂದು ಗೂಂಡಾಗಿರಿ ಮಾಡಿವವರು, ಕಳ್ಳರು, ನಾಯಕತ್ವ ತೆಗೆದುಕೊಳ್ಳುತ್ತಿರುವುದು ದುರಂತದ ವಿಷಯ ಎಂದ ಅವರು ರೈತಸಂಘವನ್ನು ಜನರು ಉಳಿಸಿ, ಬೆಳೆಸಿದರೆ ಮಂಡ್ಯ ಜಿಲ್ಲೆ ಹೊಸ ಹುಟ್ಟು ಪಡೆಯಲಿದೆ ಎಂದರು.

ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರೈತ ನಾಯಕ ಪುಟ್ಟಣ್ಣಯ್ಯನವರ ಪತ್ನಿ ಸುನೀತಾ ಪುಟ್ಟಣ್ಣಯ್ಯ, ರೈತ ನಾಯಕ ವೀರಸಂಗಯ್ಯ, ನಂದಿನಿ ಜಯರಾಂ ಮತ್ತಿತರರು ಮಾತನಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಹೇಶ್ ಪ್ರಭು, ಗೋವಿಂದರಾಜು, ಪ್ರಸನ್ನ ಗೌಡ,ಎಸ್. ಸಿ. ಮಧುಚಂದ್ರನ್, ಸೋಮಯ್ಯ, ರವಿಕಿರಣ್ ಪೂಣಚ್ಚ, ಆರ್‌ಟಿಐ ಕಾರ್ಯಕರ್ತ ರವೀಂದ್ರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!