Thursday, June 13, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಪೊಲೀಸ್ ಠಾಣೆ ಎದುರು ಹಾಲು ಉತ್ಪಾದಕರ ಪ್ರತಿಭಟನೆ

ಶ್ರೀರಂಗಪಟ್ಟಣ ತಾಲೂಕಿನ ಬಳ್ಳೇಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರಭಾರ ಕಾರ್ಯದರ್ಶಿ ಹಾಲು ಸ್ವೀಕಾರ ಮಾಡದೇ ಡೈರಿಗೆ ಬೀಗ ಹಾಕಿ ಹೋದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮದ ಜನತೆ ಅರಕೆರೆ ಪೊಲೀಸ್ ಠಾಣೆ ಎದುರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು.

ಪ್ರತಿನಿತ್ಯದಂತೆ ಸೋಮವಾರ ಸಂಜೆ ಡೈರಿಗೆ ಹಾಲು ತೆಗೆದುಕೊಂಡು ಜನತೆ ಹೋದಾಗ ಪ್ರಭಾರ ಕಾರ್ಯದರ್ಶಿ ಬೀಗ ಹಾಕಿಕೊಂಡು ಹೋಗಿದ್ದನು, ಈ ಬಗ್ಗೆ ಅಲ್ಲಿದ್ದ ಸೂಪರ್ ವೈಸರ್ ವಿಚಾರಿಸಿದಾಗ ಹಾಲು ತೆಗೆದುಕೊಳ್ಳದಂತೆ ಹೇಳಿ ಹೋಗಿದ್ದಾರೆ ಎಂದು ತಿಳಿಸಿದ್ದು, ಸುಮಾರು ತಾಸು ಕಾದ ನಂತರ ಗ್ರಾಮಸ್ಥರು ಅರಕೆರೆ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿ ಹಾಲು ಸ್ವೀಕರಿಸದೆ ಹಾಲು ಉತ್ಪಾದಕರಿಗೆ ನಷ್ಟ ಮಾಡಿರುವ ಪ್ರಭಾರ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮನ್ಮುಲ್ ಅಧ್ಯಕ್ಷರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಹಾಲು ಉತ್ಪಾದಕರಿಗೆ ಆಗಿರುವ ನಷ್ಟ ಭರಿಸಿ ಕೊಡುವಂತೆ ಒತ್ತಾಯಿಸಿದರು.

ಪ್ರತಿನಿತ್ಯ ಬೆಳಗ್ಗೆ 650, ಸಂಜೆ ಸಮಯದಲ್ಲಿ 670 ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿತ್ತು, ಆದರೆ ಡೈರಿ ಪ್ರಭಾರ ಕಾರ್ಯದರ್ಶಿ ಹಾಲಿಗೆ ನೀರು ಹಾಕುತ್ತಿದ್ದಾನೆ ಎಂಬ ಗುಮಾನಿ ಇತ್ತು, ಭಾನುವಾರ ರಾತ್ರಿ ಡೈರಿ ಬಳಿ ಪ್ರಭಾರ ಕಾರ್ಯದರ್ಶಿ ನೀರು ಹಿಡಿದುಕೊಳ್ಳುತ್ತಿದ್ದಾಗ ಗ್ರಾಮಸ್ಥನೊಬ್ಬ ಏಕೆ ನೀರು ಹಿಡಿದುಕೊಳ್ಳುತ್ತಿದ್ದೀಯಾ, ಹಾಲಿಗೆ ನೀರು ಹಾಕಲು ಮುಂದಾಗಿದ್ದೀಯಾ ಎಂದು ಪ್ರಶ್ನಿಸಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದು ಈ ಸಮಯದಲ್ಲಿ ಇಬ್ಬರಿಗೂ ಗಲಾಟೆಯಾಗಿ ಮೊಬೈಲ್ ಕಸಿದು ಗ್ರಾಮಸ್ಥನ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕಂಪ್ಯೂಟರ್ ಉಪಕರಣವನ್ನು ಕಾರ್ಯದರ್ಶಿ ಒಡೆದು ಹಾಕಿದ್ದು, ಸೋಮವಾರ ಬೆಳಿಗ್ಗೆ ಪುಸ್ತಕದಲ್ಲಿ ಬರೆದುಕೊಂಡು ಹಾಲು ಸ್ವೀಕಾರ ಮಾಡಿದ್ದ, ಆದರೆ ಸಂಜೆ ಸಮಯದಲ್ಲಿ ಹಾಲು ಸ್ವೀಕಾರ ಮಾಡದೆ ಬೀಗ ಹಾಕಿಕೊಂಡು ಹೋಗಿದ್ದಾನೆ, ಇದರಿಂದ ಹಾಲು ಉತ್ಪಾದಕರಿಗೆ ನಷ್ಟವಾಗಿದೆ ಎಂದು ಹೇಳಿದರು.

ಕಾರ್ಯದರ್ಶಿ ವಿಚಾರದಲ್ಲಿ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಹಾಗಾಗಿ ಪ್ರಭಾರ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲಾಗಿದೆ, ಆದರೆ ಈತ ಹಾಲು ಉತ್ಪಾದಕರಿಗೆ ತೊಂದರೆ ಕೊಡುತ್ತಿದ್ದಾನೆ, ಈ ಕೂಡಲೇ ಮನ್ಮುಲ್ ಆಡಳಿತ ಮಂಡಳಿ ಈತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!