Thursday, September 19, 2024

ಪ್ರಾಯೋಗಿಕ ಆವೃತ್ತಿ

ಒಂದು ಎಕರೆಗೆ ಬಿತ್ತನೆ ಮಾಡಲು 1 ಟನ್ ಕಬ್ಬು ಸಾಕು : ರಾಘವೇಂದ್ರ ತೆಗ್ಗಿ

ಕಬ್ಬಿನ ನಾಟಿ ಪದ್ದತಿಯಲ್ಲಿ ಒಂದು ಕಣ್ಣಿನ ಬಿತ್ತನೆಯನ್ನು ಉಪಯೋಗಿಸುವುದರಿಂದ ಎಕರೆಗೆ 800 ಕೆ.ಜಿ. ಯಿಂದ 1 ಟನ್ ಬಿತ್ತನೆ ಕಬ್ಬು ಸಾಕಾಗುತ್ತದೆ. ಇದರಿಂದ ರೈತರಿಗೆ ಬಿತ್ತನೆ ಕಬ್ಬಿನ ವೆಚ್ಚದಲ್ಲಿ ಉಳಿತಾಯ ವಾಗುತ್ತದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ತೆಗ್ಗಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಕಬ್ಬು ಬೆಳೆಗಾರರಿಗೆ ಮಂಡ್ಯದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಕಬ್ಬು ಸಂಶೋಧನಾ ಕೇಂದ್ರದ ವತಿಯಿಂದ ಕಬ್ಬಿನ ಬೆಳೆಯ ಸುಧಾರಿತ ತಾಂತ್ರಿಕ ಬೇಸಾಯ ಕ್ರಮಗಳ ಕುರಿತ ಒಂದು ದಿನದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರು ಕಬ್ಬಿನ ಬೆಳೆಯಲ್ಲಿ ತಂತ್ರಜ್ಞಾನದ ಮೂಲಕ ಸುಧಾರಿತ ಬೇಸಾಯ ಪದ್ದತಿಯನ್ನು ಅಳವಡಿಸಿ ಕೊಳ್ಳಬೇಕು. ಕಬ್ಬು ನಾಟಿ ಮಾಡಲು 8-10 ತಿಂಗಳ ತನು(ತನಿ) ಕಬ್ಬನ್ನು ಬಿತ್ತನೆಗೆ ಉಪಯೋಗಿಸುವುದರಿಂದ, ಕಬ್ಬಿನ ಬಿತ್ತನೆಯಲ್ಲಿ ತೇವಾಂಶ, ಸಾರಜನಕ ಮತ್ತು ಗ್ಲೂಕೋಸ್ ಪ್ರಮಾಣ ಹೆಚ್ಚಾಗಿದ್ದು, ಪೈರು ಚೆನ್ನಾಗಿ ಬಂದು ಹೆಚ್ಚಿನ ಇಳುವರಿ ಪಡೆಯಲು ಅನುಕೂಲವಾಗುತ್ತದೆ ಎಂದರು.

ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೀಟ ಶಾಸ್ತ್ರಜ್ಞ ಡಾ.ಮಂಜುನಾಥ್ ಚೌರಡ್ಡಿ ಮಾತನಾಡಿ, ರೈತರ ಕಬ್ಬಿನ ಬೆಳೆಗೆ ತಗಲುವ ಕೀಟಗಳಾದ ಆದಿಸುಳಿಕೊರಕ, ಬಿಳಿ ಉಣ್ಣೆ ಹೇನು ಹಾಗೂ ಬೇರು ಹುಳುಗಳು ಬೆಳೆಗೆ ಉಂಟು ಮಾಡುವ ನಷ್ಟ ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ವಿಸ್ತಾರವಾಗಿ ತಿಳಿಸಿದರು.

ಆದಿಸುಳಿ ಕೊರಕ, ಕೀಟಗಳನ್ನು ನಿಯಂತ್ರಿಸಲು ಫಿಪ್ರೋನಿಲ್ ಕೀಟನಾಶಕವನ್ನು ಹಾಗೂ ಟ್ರೈಕೋಗ್ರಾಮಾ ಪರತಂತ್ರ ಜೀವಿಗಳನ್ನು ಬಳಸುವ ಬಗ್ಗೆ ಹಾಗೂ ಬೇರು ಹುಳುವಿನ ಜೀವನ ಕ್ರಮದ ವಿವಿಧ ಹಂತಗಳನ್ನು ವಿವರಿಸಿ ಅವುಗಳನ್ನು ನಿಯಂತ್ರಿಸಲು ಮೆಟಾರೈಜಿಯಮ್, ಕ್ಲೋರೋಫೈರಿಫಾಸ್, ಬಿವೇರಿಯಾಗಳನ್ನು ಉಪಯೋಗಿಸಬಹುದು ಎಂದು ತಿಳಿಸಿದರು.

ಬೇಸಿಗೆಯ ಮೊದಲ ಮಳೆಯಾದಾಗ ಭೂಮಿಯಿಂದ ಹೊರ ಬರುವ ದುಂಬಿಗಳನ್ನು ಜಮೀನಿನಲ್ಲಿ ವಿದ್ಯುತ್ ಬಲ್ಪ್ಗಳನ್ನು ಆಳವಡಿಸಿ, ಅದರ ಕೆಳಗಡೆ ಕೀಟನಾಶಕ ಮಿಶ್ರಿತ ನೀರಿನ ಪಾತ್ರೆಯನ್ನು ಇಟ್ಟು, ದುಂಬಿಗಳನ್ನು ಆಕರ್ಷಿಸಿ ಸಾಯಿಸುವ ಮೂಲಕ ಬೇರು ಹುಳುಗಳನ್ನು ನಿಯಂತ್ರಣದಲ್ಲಿ ಇಡಬಹುದೆಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!