Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀ ಮಲ್ಲಣ್ಣೇಶ್ವರ ಸ್ವಾಮಿಯ ದೊಡ್ಡಪರ: ಮೀಸಲು ಹೆಡಿಗೆ ಹೊತ್ತು ತೆರಳಿದ ಮಹಿಳೆಯರು

ಐದು ವರ್ಷಕ್ಕೊಮ್ಮೆ ನಡೆಯಲಿರುವ ಬನ್ನೂರಿನ ಶ್ರೀ ಉಕ್ಕಲಗೆರೆ ಬೆಟ್ಟದ ಮಲ್ಲಣ್ಣೇಶ್ವರಸ್ವಾಮಿಯ ದೊಡ್ಡಪರ ಹಾಗೂ ವಿಶೇಷ ಪೂಜಾ ಮಹೋತ್ಸವಕ್ಕೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮಸ್ಥರು ಸಂಪ್ರದಾಯದಂತೆ ಮೀಸಲು ಹೆಡಿಗೆ ಹೊತ್ತು ಕುಟುಂಬ ಸಮೇತ ಎತ್ತಿನಗಾಡಿಯ ಮೂಲಕ ತೆರಳಿದರು.

ಮಲ್ಲಣ್ಣೇಶ್ವರ ಸ್ವಾಮಿ ದೇವರ ಒಕ್ಕಲಿನ ಮಹಿಳೆಯರು ಹೊಸ ವಸ್ತ್ರತೊಟ್ಟು, ಮೀಸಲು ಹೆಡಿಗೆ ಹೊತ್ತು ತಾಲ್ಲೂಕಿನ ನೆಲಮಾಕನಹಳ್ಳಿಯ ಮಾಸ್ತಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮೀಸಲು ಹೆಡಿಗೆ ಹೊತ್ತ ಮಹಿಳೆಯರು ಕಾಲ್ನಡಿಗೆ ಮೂಲಕ ಮಂಗಳ ವಾದ್ಯದ ಸಮೇತ ಪರಿನಕಟ್ಟೆ ತೋಪಿನ ಮೂಲಕ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಶಿವನ ದೇವಾಲಯದಲ್ಲಿ ದರ್ಶನ ಪಡೆದು ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನವರೆಗೆ ಪಾದಯಾತ್ರೆಯ ಮೂಲಕ ಬಂದು ಎತ್ತಿನಗಾಡಿಯ ಕಮಾನು ಬಂಡಿ ಮತ್ತು ಇತರೆ ವಾಹನಗಳಲ್ಲಿ ದೇವಸ್ಥಾನಕ್ಕೆ ತೆರಳಿದರು.

ವಿಶೇಷ ಪೂಜೆ: ಪಟ್ಟಣದ ಹೊರ ವಲಯದಲ್ಲಿರುವ ದಂಡಿನ ಮಾರಮ್ಮ, ಮಲೆ ಮಹೇಶ್ವರ ದೇವಸ್ಥಾನದಲ್ಲಿ ಮೀಸಲು ಹೆಡಿಗೆ ಹೊತ್ತ ನೂರಾರು ಮಹಿಳೆಯರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ರಸ್ತೆ ಉದ್ದಕ್ಕೂ ವಿವಿಧ ಗ್ರಾಮಗಳ ಸಾರ್ವಜನಿಕರು ಮೀಸಲು ಹೆಡಿಗೆಗೆ ಪೂಜೆ ಸಲ್ಲಿಸಿದರು.

ಪಟ್ಟಣದ ಪುರಸಭೆ ಮುಂಭಾಗ ಶಾಸಕ ಡಾ. ಅನ್ನದಾನಿ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರು ಪಟ್ಟಣದ ಅನಂತರಾಂ ವೃತ್ತದಲ್ಲಿ ಮೀಸಲು ಹೆಡಿಗೆ ಮತ್ತು ಎತ್ತಿನಗಾಡಿಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ನಂತರ ತಾಲ್ಲೂಕು ಕಚೇರಿಯವರೆವಿಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಶುಭ ಕೋರಿ ಬೀಳ್ಕೊಟ್ಟರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವಾಸ್, ದೇವರಾಜು,ದ್ಯಾಪೇಗೌಡ, ವಿ.ಪಿ.ನಾಗೇಶ್, ಶಿವಸ್ವಾಮಿ, ರಾಜಶೇಖರ್,ಸಿ.ಪಿ ರಾಜು, ಪ್ರಕಾಶ್,ದಿಲೀಪ್,ಜಗದೀಶ್, ಬಂಕ್‌ಮಹದೇವು, ಜಲ್ಲಿಚೆನ್ನಪ್ಪ ಸೇರಿದಂತೆ ಹಲವರು ಇದ್ದರು.

ಹಬ್ಬದ ಹಿನ್ನೆಲೆ : ನೂರಾರು ವರ್ಷಗಳಿಂದಲೂ ಶ್ರೀ ಮಲ್ಲಣ್ಣೇಶ್ವರ ಸ್ವಾಮಿ ದೇವರ ಒಕ್ಕಲಿನವರು ಐದು ವರ್ಷಕ್ಕೊಮ್ಮೆ ನೆಲಮಾಕನಹಳ್ಳಿಯಿಂದ ಮಳವಳ್ಳಿಯವರೆವಿಗೂ ಪಾದಯಾತ್ರೆಯಲ್ಲಿ ಬಂದು ನಂತರ ಎತ್ತಿನ ಗಾಡಿಯ ಮೂಲಕ ತೆರಳಿ ಮೊದಲ ದಿನ ಕಲ್ಕುಣಿಯಲ್ಲಿ ವಾಸ್ತವ್ಯ ಹೂಡಿ, ಶುಕ್ರವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹುಲಿವಾಹನವನ್ನು ನೆರವೇರಿಸಲಾಗುತ್ತದೆ.

ಶನಿವಾರದಂದು ಬನ್ನೂರಿನ ಉಕ್ಕಲಗೆರೆ ಮಲ್ಲಿಕಾರ್ಜುನಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಶನಿವಾರ ರಾತ್ರಿ ಗ್ರಾಮಕ್ಕೆ ವಾಪಸ್ ಬಂದು, ಭಾನುವಾರದಂದು ಸೋಮವಾರ ನಡೆಯಲ್ಲಿರುವ ದೊಡ್ಡಪರಕ್ಕೆ ದವಸ, ಧಾನ್ಯವನ್ನು ಸಂಗ್ರಹಣೆ ಮಾಡುತ್ತಾರೆ. ಸೋಮವಾರ 12 ಗಂಟೆಗೆ ಕಾಗೇಪುರ ಬಸವೇಶ್ವರ ಬಸಪ್ಪವನ್ನು ಕರೆಸಿ ಪೂಜೆ ಸಲ್ಲಿಸಿದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಅದೇ ದಿನ ರಾತ್ರಿ 8.30ಕ್ಕೆ ಮಲ್ಲಪ್ಪ, ಅಂತರಹಳ್ಳಿ ಸಿದ್ದಪ್ಪ, ಮಾತೇಮಾರಮ್ಮ, ಪಟ್ಟಲದಮ್ಮ, ಕ್ಯಾತಮ್ಮ ತಾಯಿಯ ಹೂವು ಹೊಂಬಾಳೆಯ ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!