Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶ ಎಂದೆಂದಿಗೂ ಅಮರ : ಎಂ.ಶ್ರೀನಿವಾಸ್

ಸರ್ವರನ್ನೂ ಸಮಭಾವದಿಂದ ಕಂಡು ಅನ್ನ,ಅರಿವು, ಆಸರೆಯಂತಹ ತ್ರಿವಿಧ ದಾಸೋಹವನ್ನು ಸರ್ವರಿಗೂ ಉಣಬಡಿಸಿದ ಕರ್ನಾಟಕರತ್ನ, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಅದರ್ಶಗಳು ಎಂದೆಂದಿಗೂ ಅಮರ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಸಿದ್ದಗಂಗಾಶ್ರೀ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 4ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ದಾಸೋಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

12ನೇ ಶತಮಾನದ ಶರಣರ ಸಾಮಾಜಿಕ ಕ್ರಾಂತಿಯನ್ನು 20ನೇ ಶತಮಾನದಲ್ಲಿ ಅನುಷ್ಠಾನಗೊಳಿಸಿದ ಶ್ರೀಗಳು ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು ‌

ಎಲ್ಲಾ ಜಾತಿ, ಧರ್ಮದವರಿಗೂ ಶಿಕ್ಷಣವನ್ನು ಉಚಿತವಾಗಿ ನೀಡಿ ಕರ್ನಾಟಕವನ್ನು ಮುನ್ನಡೆಸುವಲ್ಲಿ ಪ್ರಮುಖಪಾತ್ರವನ್ನು ಶ್ರೀ ಶಿವಕುಮಾರ ಸ್ವಾಮೀಜಿ ವಹಿಸಿದ್ದಾರೆ. ಶ್ರೀಮಠದಿಂದ ಕಲಿತವರು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಸಮಾಜದಲ್ಲಿ ಬಿತ್ತುತ್ತಿರುವುದು ಶ್ಲಾಘನೀಯ ಎಂದರು.

ಬಾಲ್ಯದಲ್ಲಿ ನಮ್ಮ ಮನೆಯವರು ನನ್ನನ್ನು ಸಿದ್ದಗಂಗಾಮಠದಲ್ಲಿ ಅಧ್ಯಯನ ಮಾಡುವಂತೆ ಹೇಳುತ್ತಿದ್ದರು. ತದನಂತರ ನಾನು ಮೊದಲಬಾರಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ಸ್ವಾಮೀಜಿಯವರ ಆಶೀರ್ವಾದ ಪಡೆದು ಬಂದ ನಂತರ ಗೆಲುವು ನನ್ನದಾಯಿತು. ಅವರ ನಾಮಸ್ಮರಣೆಯಲ್ಲಿ ಅಗಾಧವಾದ ಶಕ್ತಿ ಇದೆ ಎಂದು ಸ್ಮರಿಸಿದರು.

ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅಶೋಕ್  ಜಯರಾಂ, ರಾಷ್ಟ್ರಕಟ್ಟುವ ಕಾಯಕದ ಮೂಲಕ ಜನಮಾನಸದಲ್ಲಿ ನಡೆದಾಡುವ ದೇವರಾಗಿ ನೆಲೆನಿಂತಿರುವ ಸಿದ್ದಗಂಗಾಶ್ರೀ ಗಳ ಹೆಸರು ಮಂಡ್ಯದಲ್ಲಿ ಚಿರಸ್ಥಾಯಿಯಾಗಿ ಉಳಿಯುಂತೆ ಕಾಯಕಯೋಗಿ ಫೌಂಡೇಶನ್ ಉದ್ಯಾನವನ ನಿರ್ಮಾಣಗೊಳಿಸಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪೂಜ್ಯರ ಶುಭನಾಮದ ಉದ್ಯಾನವನದಲ್ಲಿ ಎಲ್ಲಾ ಮಹನೀಯರ ಜಯಂತಿ, ಪರಿಸರ ಜಾಗೃತಿ, ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಾ ಸ್ವಾಮೀಜಿಯವರ ಆದರ್ಶ ಪಾಲನೆ ಮಾಡುತ್ತಿರುವುದು ಯುವಕರಿಗೆ ಪ್ರೇರಣೆಯಾಗಿದೆ ಎಂದರು.

ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಅಚ್ಚರಿಯನ್ನುಂಟು ಮಾಡುತ್ತದೆ. ಅವರ ನಡೆ, ನುಡಿ, ಆಲೋಚನೆಗಳು ಪರಿಶುದ್ಧವಾಗಿವೆ ಎಂದರು. ಇದೇ ಸಂದರ್ಭದಲ್ಲಿ
ನಗರಸಭೆಯ ಪೌರಕಾರ್ಮಿಕರಿಗೆ ‘ಕಾಯಕಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮುಖಂಡ ಎಲ್.ಸಂದೇಶ್, ಸಾಹಿತಿ ಡಾ.ಎಚ್.ಆರ್.ಕನ್ನಿಕಾ, ಪರಿಸರಪ್ರೇಮಿ ಜಯಶಂಕರ್, ನಗರಸಭೆ ಸದಸ್ಯೆ ಕೆ.ವಿದ್ಯಾ ಮಂಜುನಾಥ್, ಬಿಜೆಪಿ ನಗರ ಅಧ್ಯಕ್ಷ ವಿವೇಕ್,  ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್,  ಎಂ.ಆರ್.ಮಂಜುನಾಥ್, ಅನನ್ಯ ಟ್ರಸ್ಟ್ ಅಧ್ಯಕ್ಷೆ ಬಿ.ಎಸ್.ಅನುಪಮಾ, ಕನ್ನಡಸೇನೆ ಅಧ್ಯಕ್ಷ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಬೋಸ್ಟರ್ ಡೋಸ್ ನೀಡಿದರು. ನೂರಾರು ಮಂದಿಗೆ ದಾಸೋಹ ಏರ್ಪಡಿಸಲಾಗಿತ್ತು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!